ವಾತ್ಸಲ್ಯ ಧಾಮಕ್ಕೆ ಜಿಲ್ಲಾ ವಾರ್ತಾಧಿಕಾರಿ ಭೇಟಿ: ಆಧುನಿಕ ಭಾರತಕ್ಕೆ ಮಾದರಿ ಮೀರಾತಾಯಿ ಕೊಪ್ಪಿಕರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೃಷಿಯೇ ಜೀವನ ಭೂಮಿ ತಾಯಿಯ ಸೇವೆ ಕಾಯಕದಲ್ಲಿ ಸದಾ ನಿರತರಾಗಿರಬೇಕು. ಪಂಚಭೂತಗಳೆ ಶಕ್ತಿಗಳು. ಭೂಮಿ ನೀರು ಎಲ್ಲವು ಇದ್ದು ನಾವು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು.
ಮೀರಾತಾಯಿ ಕೊಪ್ಪಿಕರ

ಸರಳ ಸಜ್ಜನಿಕೆ ಆದರ್ಶವಾದಿ ಮೀರಾತಾಯಿ ಅವರು ಒಂದು ದಿನದಲ್ಲಿ ಹಿಂದಿ ಕನ್ನಡ ಸಂಸ್ಕರತದಲ್ಲಿ 15 ರಿಂದ 20 ಪತ್ರಗಳನ್ನು ಬರೆಯುತ್ತಿದ್ದರು, ಆ ಪತ್ರಗಳು ಇದೀಗ ಮುಂಬೈನಲ್ಲಿದ್ದು, ಆದ್ಯಾತ್ಮಕ್ಕೆ ಸಂಬಂಧಪಟ್ಟಿವೆ. ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ, ಟಿವಿ ಸಂದರ್ಶನ ನೀಡುವಾಗ ಸಹ ತಾವು ಸ್ವತಃ ನೇಯ್ದ ಉಡುಗೆಯನ್ನೆ ತೊಟ್ಟ ಸರಳ ಜೀವನ ಅವರದು. ದಾನವಾಗಿ ಬಂದ ಆಸ್ತಿಯನ್ನು ನಿರಾಕರಿಸುತ್ತಿದ್ದರು. ತಮ್ಮ ಜೀವನವನ್ನು ಜನಸೇವೆಗೆ ಮೀಸಲಾಗಿಟ್ಟ ಮೀರಾತಾಯಿ ಇಂದಿಗೂ ಮಾದರಿ.
ಬಯ್ಯಾಜಿ, ಆಶ್ರಮದ ವಾಸಿ

ಬಾಗಲಕೋಟೆ : ಸರಳ ಜೀವನ, ಉಚ್ಚ ವಿಚಾರಕ್ಕೆ ತಕ್ಕಂತೆ ಆಚಾರ್ಯ ವಿನೋಬಾ ಭಾವೆ ಅವರಿಂದ ಪ್ರಭಾವಿತರಾಗಿ ಸರ್ವೋದಯ ಭೂದಾನ ಚಳುವಳಿಯಲ್ಲಿ ಪಾಲ್ಗೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಆಧುನಿಕ ಭಾರತಕ್ಕೆ ಮಾದರಿ ಮಹಾತಾಯಿಯಾದ ಮೀರಾತಾಯಿ ಕೊಪ್ಪಿಕರ ಅವರನ್ನು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರ ನಿರ್ದೇಶನದ ಮೇರೆಗೆ ಮುಧೋಳ ತಾಲೂಕಿನಲ್ಲಿರುವ ವಾತ್ಸಲ್ಯ ಧಾಮದಲ್ಲಿರುವ ಗಾಂಧಿ ಆದರ್ಶವಾದಿ, ಸಾತ್ವಿಕ ಬದುಕು ನಡೆಸುತ್ತಿರುವ 95 ವರ್ಷದ ಮೀರಾತಾಯಿ ಕೊಪ್ಪಿಕರ ಅವರನ್ನು ಮಂಗಳವಾರ ಜಿಲ್ಲಾ ವಾರ್ತಾಧಿಕಾರಿಗಳು ಬೇಟಿ ಮಾಡಿದರು.

ಇದೇ ಸಂದರ್ಭದಲ್ಲಿ ಮೀರಾತಾಯಿ ಅವರ ಆದರ್ಶ ಜೀವನದ ಬಗ್ಗೆ ಮೆಲಕು ಹಾಕುತ್ತಾ ಸರಳ ಬದುಕು, ಸಾವಯವ ಕೃಷಿ, ಆಧ್ಯಾತ್ಮ ಚಿಂತನೆ, ಧ್ಯಾನ, ಯೋಗ ಸತ್ಯಾನೇಶ್ವಣೆಯ ಪವಿತ್ರ ಧಾಮ ಇದಾಗಿದೆ. ಇಲ್ಲಿನ ಗಿಡ, ಮರ, ಪ್ರಾಣಿ, ಪಕ್ಷಿ ಆಶ್ರಯವಾಸಿಗಳ ಅಂತಃಕರಣದಲ್ಲಿ ಮಹಾತ್ಮನ ಸ್ಪರ್ಶ, ಇಲ್ಲಿನ ಬದುಕು, ಭಾವನೆ, ಸ್ವಾವಲಂಬನೆ, ನಮ್ಮನ್ನು ಮಹಾತ್ಮನ ವಾರ್ಧಾ ಆಶ್ರಮವನ್ನು ಕಲ್ಪಿಸಿಕೊಳ್ಳುವಂತೆ ಮಾಡುತ್ತದೆ. ಹುಬ್ಬಳ್ಳಿಯ ಕೊಪ್ಪಿಕರ ಮನೆತನದ ಶ್ರೀಮಂತರ ಮನೆತನದವರಾಗಿದ್ದರೂ ಕೂಡಾ ಎಲ್ಲವನ್ನು ತ್ಯಜಿಸಿ ವಾತ್ಸಲ್ಯ ಧಾಮದಲ್ಲಿ ನೆಲೆ ಉರಿದ್ದಾರೆ. ಇವರ ಮನೆತನದ ಹೆಸರನ್ನು ಹುಬ್ಬಳ್ಳಿಲ್ಲಿರುವ ರಸ್ತೆಗೆ ಕೊಪ್ಪಿಕರ ರಸ್ತೆ ಎಂದು ಹೆಸರಿಡಲಾಗಿದೆ.

ನಿರ್ಮಲವಾದ ಪ್ರೀತಿ ಅಂತ:ಕರಣದ ಬುನಾದಿಯ ಮೇಲೆ ಸ್ಥಾಪಿತವಾಗಿರುವ ಈ ಆಶ್ರಮದಲ್ಲಿ ಜ್ಞಾನವೃದ್ಧರಾದ ಶ್ರೀ ಸೇವಾನಂದ ಸ್ವಾಮೀಜಿಗಳಿದ್ದರು. ಅವರ ನೆರಳಿನಂತೆ ಸೇವೆಯನ್ನೇ ಬದುಕನ್ನಾಗಿ ಸ್ವೀಕರಿಸಿರುವ ಮಾತೋಶ್ರೀ ಇವರಾಗಿದ್ದಾರೆ. ಈ ಮಹಾತಾಯಿಯ ಮಾರ್ಗದರ್ಶನದಲ್ಲಿ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಿರುವ ಸಾಧಕ-ಸಾಧಕಿರಿದ್ದಾರೆ. ಈ ಆಶ್ರಮದ ವಾಸಿಗಳು ನಿಜವಾಗಿಯೂ ಮಹಾತ್ಮಗಾಂಧೀಜಿ ವಾಸುದಾರರು, ಸ್ವಾವಲಂಬಿ ಜೀವನ, ಸಾವಯವ ಕೃಷಿ, ಹಿತಮಿತ ಆಹಾರ ಪದ್ಧತಿ ಕಾಣಬಹುದಾಗಿದೆ.

ಎರಡು ಎಕರೆ 20 ಗುಂಟೆ ಬರಡು ಭೂಮಿ ಈಗ ಬಂಗಾರ ವಾತ್ಸಲ್ಯ ಧಾಮದಲ್ಲಿ. ಶ್ರೀಕೃಷ್ಣ ಮಂದಿರ, ಹನುಮಾನ ಮಂದಿರ, ಶಿವಲಿಂಗ, ನಾಗದೇವತೆ ಮಂದಿರಗಳಿವೆ. ತೆರೆದ ಬಾವಿ, ಗೋಶಾಲೆ ಗೋಬರ್ ಗ್ಯಾಸ್ ಪ್ಲಾಂಟ್ ಕಾಣಬಹುದಾಗಿದೆ. ಆಶ್ರಮದ ಹದಿನೈದು-ಇಪ್ಪತ್ತು ಸಾಧಕರು ಅತಿಥಿಗಳು ಉಂಡುಟ್ಟು ಸಂತೃಪ್ತ ಜೀವನ ನಡೆಸುವುದಕ್ಕೆ 2 ಎಕರೆ ಭೂಮಿ ಸಾಕು ಎಂದು ಮೀರಾ ತಾಯಿ ಹೇಳುತ್ತಾರೆ. ಕಡ್ಡಿ ಪೆಟ್ಟಿಗೆ ಒಳ್ಳೆಣ್ಣೆ ಹಾಗೂ ಉಪ್ಪು ನಾವು ಹೊರಗಿನಿಂದ ತರುವ ವಸ್ತುಗಳು ಬದುಕಿಗೆ ಅಗತ್ಯವಾದ ಇನ್ನಿತರ ವಸ್ತುಗಳನ್ನು ಇಲ್ಲಿ ಬೆಳೆಯಲಾಗುತ್ತದೆ.

ಸಾವಯುವ ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ರಾಜ್ಯ ಸರಕಾರ 2009 ರಲ್ಲಿ ಮೀರಾ ತಾಯಿ ಕೊಪ್ಪಿಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಘೋಷಿಸಿದ್ದರು. ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಮಹಾ ತಾಯಿ ನಿರಾಸಕ್ತಿಯನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು. ಮುಖ್ಯಮಂತ್ರಿಗಳು ಆಶ್ರಮಕ್ಕೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದನ್ನು ನೆನಪಿಸಿಕೊಳ್ಳಬಹುದಾಗಿದೆ. ಮೀರಾ ತಾಯಿ ಅವರ ಜನಪರ ಕಾಳಜಿಗೆ ಸರಳ ಸಜ್ಜನಿಕೆಗೆ ಸಾಕ್ಷಿಯಾಗಿದ್ದು, ಅವರ ಸ್ವಾವಲಂಭಿ ಜೀವನ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*