ತ್ರಿಸ್ಟಾಲ್ ಹೊಟೆಲ್ ನಿರ್ಮಾಣ ಕಾಮಗಾರಿಗೆ ಆನಂದ ಸಿಂಗ್ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಹೊಸ ಟೂರಿಸಂ ನೀತಿ 2020-26 ಜಾರಿ
ಹೊಸ ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಜಾರಿಗೆ ತರಲಾಗಿದ್ದು, ಇದರ ಅಭಿವೃದ್ದಿಗೆ 500 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಇದರಿಂದ 1 ಮಿಲಿಯನ್ ನೇರ, ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದ್ದು, 1700 ಪ್ರವಾಸೋದ್ಯಮ ಯೋಜನೆಗಳನ್ನು ಮತ್ತು ಸೇವೆಗಳ ಲಾಭ ಪಡೆಯುವ ನಿರೀಕ್ಷೆ ಇದೆ.
ಆನಂದ ಸಿಂಗ್, ಪ್ರವಾಸೋದ್ಯಮ ಸಚಿವರು

ಬಾಗಲಕೋಟೆ : ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬನಶಂಕರಿ ಹತ್ತಿರ ನಿರ್ಮಾಣಗೊಳ್ಳುತ್ತಿರುವ ತ್ರಿಸ್ಟಾಲ್ ಹೋಟೆಲ್ ಕಾಮಗಾರಿಗೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತ್ರಿಸ್ಟಾಲ್ ಹೋಟೆಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಾದಾಮಿ ಪ್ರವಾಸಿ ತಾಣಕ್ಕೆ ವಿದೇಶಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಅಂದಾಜು 18.32 ಕೋಟಿ ರೂ.ಗಳ ವೆಚ್ಚದಲ್ಲಿ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೇ ವಿಜಯಪುರ, ಬೇಲೂರ, ಹಂಪಿ ಹಾಗೂ ಹೊಸಪೇಟೆಯಲ್ಲಿಯೂ ಸಹ ತ್ರಿಸ್ಟಾಲ್ ಹೋಟೆಲ್ ಪ್ರಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಬರುವ ಪ್ರವಾಸಿಗರಿಗೆ ಉತ್ತಮ ಸೌಲಬ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ. ನಾನು ಸಚಿವನಾದ ಮೇಲೆ ಪ್ರವಾಸೋದ್ಯಮದಿಂದ ಬರುವ ಆದಾಯ ಕಡಿಮೆ ಇದ್ದು, ಆದಾಯ ವೃದ್ದಿಗೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 18 ಕೆಎಚ್‍ಟಿಡಿಸಿ ಅಭಿವೃದ್ದಿಗೆ ಹೊಸ ಯೋಜನೆಗಳನ್ನು ತರಲಾಗುತ್ತಿದೆ. ಕೋವಿಡ್ ಹಿನ್ನಲೆಯಲ್ಲಿ ಆರ್ಥಿಕವಾಗಿ ವಿಶ್ವ, ದೇಶ ಹಾಗೂ ರಾಜ್ಯದಲ್ಲಿ ಹಿನ್ನಡೆಯಾಗಿದ್ದು, ಅದನ್ನು ಸರಿದೂಗಲು ಕೆಲವು ವರ್ಷಗಳು ಬೇಕಾಗುತ್ತದೆ ಎಂದು ತಿಳಿಸಿದರು.
ಬಾದಾಮಿ, ಪಟ್ಟದಕಲ್ಲ, ಐಹೊಳೆ, ವಿಜಯಪೂರ ಹಾಗೂ ಹಂಪಿಗಳಲ್ಲಿ ಸಕ್ರ್ಯೂಟ್ ಮಾಡಲಿದ್ದು, ಇದರಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತಿದೆ ಎಂದರು.

ಬನಶಂಕರಿಯಲ್ಲಿ ನಿರ್ಮಿಸಲಾಗುತ್ತಿರುವ ತ್ರಿಸ್ಟಾಲ್ ಹೋಟೆಲ್ ಆದಷ್ಟು ಬೇಗ ಪೂರ್ಣಗೊಂಡು ಪ್ರವಾಸಿಗರಿಗೆ ಸಮರ್ಪಣೆಯಾಗುವಂತಾಗಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡಯ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಬಾದಾಮಿಯಲ್ಲಿ ತ್ರಿಸ್ಟಾಲ್ ಹೋಟಲ್ ನಿರ್ಮಾಣಕ್ಕೆ 2018-19ರಲ್ಲಿ ಬಜೆಟ್‍ನಲ್ಲಿ ಘೋಷನೆ ಮಾಡಲಾಗಿತ್ತು. ಈಗ ಅದಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಪಟ್ಟದಕಲ್ಲಿನಲ್ಲಿಯೂ ಸಹ 21 ಕೋಟಿ ರೂ.ಗಳ ವೆಚ್ಚದಲ್ಲಿ ಟೂರಿಜಂ ಪ್ಲಾಜಾಕ್ಕೆ ಸಹ ಚಾಲನೆ ನೀಡಲಾಗುದ್ದು, ಕೆಲಸ ಪ್ರಗತಿಯಲ್ಲಿದೆ. ಬಾದಾಮಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ದಿಗೆ ಕಾರ್ಯಗಳಿಗೆ ಎಎಸ್‍ಐ ಅವರಿಂದ ತಡೆ ಉಂಟಾಗುತ್ತಿದ್ದು, ಈ ಬಗ್ಗೆ ಸಂಸದ ಪಿ.ಸಿ.ಗದ್ದಿಗೌಡರಿಗೆ ಸಮಸ್ಯೆ ಒಡ್ಡದಂತೆ ಸೂಚಿಸಲು ತಿಳಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ ತ್ರಿಸ್ಟಾಲ್ ಹೋಟೆಲ್ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಾಮಗಾರಿಗಳಾದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ತಿಳಿಸಿದರು. ಬಾಗಲಕೋಟೆಯಲ್ಲಿ ಸಕ್ರ್ಯೂಟ್ ಬೆಂಚ್ ಮಾಡಿದಲ್ಲಿ ಆದಾಯದಲ್ಲಿ ಹೆಚ್ಚಳವಾಗಲಿದೆ. ಇದರಿಂದ ದೇಶ ವಿದೇಶದಿಂದ ಬರುವ ಪ್ರವಾಸಿಗರನ್ನು ದಿನನಿತ್ಯ ನೋಡಬಹುದಾಗಿದೆ. ಈ ರೀತಿ ನೋಡಲು ಪ್ರವಾಸಿ ತಾಣಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದಲ್ಲಿ ಮಾತ್ರ ಸಾದ್ಯವಾಗುತ್ತದೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಕೇಂದ್ರ ಸರಕಾರ ಮಹತ್ವದ ಯೋಜನೆಯಾದ ಹೃದಯ ಯೋಜನೆಯಡಿ ಬಾದಾಮಿಯು ಒಂದಾಗಿದ್ದು, ಅಭಿವೃದ್ದಿಗೆ 22 ಕೋಟಿ ರೂ.ಗಳ ಪೈಕಿ 18 ಕೋಟಿ ರೂ. ಬಿಡುಗಡೆಯಾಗಿದ್ದು, ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ. ಇನ್ನು ಬಾದಾಮಿ ವಿಶ್ವ ಪರಂಪರೆ ಪಟ್ಟಿ ಸೇರ್ಪಡೆಗೆ ಅಗಸ್ತ್ಯ ತೀರ್ಥದಲ್ಲಿ ಹೊಂದಿಕೊಂಡ ಮನೆಗಳನ್ನು ಸ್ಥಳಾಂತರವಾಗದ ಕಾರಣ ಹಿನ್ನಡೆಯಾಗಿದೆ. ಸ್ಥಳಾಂತರ ಕೆಲಸ ಶೀಘ್ರದಲ್ಲಿಯೇ ಮಾಡಲಾಗುವುದುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚೊಳಚಗುಡ್ಡ ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನ ಹಂಪಿಹೊಳಿಮಠ, ಉಪಾಧ್ಯಕ್ಷೆ ಯಮನವ್ವ ಮಾದರ, ಪ್ರವಾಸೋದ್ಯಮ ಇಲಾಖೆಯ ಸರಕಾರದ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ, ಕೆಎಚ್‍ಟಿಡಿಸಿ ಇಂಜಿನೀಯರ್ ಶ್ರೀಕೃಷ್ಣಮೂರ್ತಿ, ಯೋಜನೆಯ ಗುತ್ತಿಗೆದಾರ ಎಂ.ಈರಣ್ಣ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ ಸುಭಾಷ ಇಂಗಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*