ಜಿಲ್ಲಾ ಸುದ್ದಿಗಳು
ಹೊನ್ನಾವರ
ಪಟ್ಟಣದ ಪ್ರಭಾತನಗರದ ಪಾಳು ಬಿದ್ದ ಹಳೆಯ ಸಿಪಿಎಡ್ ಕಾಲೇಜಿನ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈ ಕಟ್ಟಡ ಅಡ್ಡಲೆಯೋ ಪಡ್ಡೆಗಳಿಗೆ ತಮ್ಮ ತೀಟೆ ತೀರಿಸಿಕೊಳ್ಳಲು ಬಳಕೆಯಾಗುತ್ತಿದೆ. ಸಂತ್ ಅಂಥೋನಿ ಸಂಸ್ಥೆಯ ಆಡಳಿತಕ್ಕೆ ಒಳಪಡುವ ಈ ಕಟ್ಟಡ ಪ್ರಾರಂಭದಲ್ಲಿ ಶ್ರೀದೇವಿ ಆಸ್ಪತ್ರೆಯಾಗಿತ್ತು. ತದನಂತರ ತುಂಬಾ ವರ್ಷಗಳ ಕಾಲ ಸಿಪಿಎಡ್ ಕಾಲೇಜ್ ಇದೇ ಕಟ್ಟಡದಲ್ಲಿ ನಡೆಸಲಾಗಿತ್ತು. ಇತ್ತೀಚೆಗೆ ಸರ್ಕಾರಿ ಕಾಲೇಜ್ ಇದೇ ಕಟ್ಟಡದಲ್ಲಿ ಪ್ರಾರಂಭಗೊಂಡು ಈಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಮೇಲೆ ಈ ಕಟ್ಟಡದಲ್ಲಿ ಬೇಡದ ಅಕ್ರಮ ಚಟುವಟಿಕೆಗಳು ನಡೆಯಲು ಪ್ರಾರಂಭಗೊಂಡಿದೆ. ಈ ಕಟ್ಟಡಕ್ಕೆ ಕೆಲವು ಕೋಣೆಗಳಿದ್ದು, ಕೆಲವು ಕೋಣೆಗಳ ಬಾಗಿಲು ತೆಗೆದೇ ಇದೆ. ಕಟ್ಟಡದ ಹಿಂದೆ ಮತ್ತು ಮುಂದೆ ಬಾಗಿಲುಗಳಿಲ್ಲ ಕೋಣೆ ತೆರೆದೇ ಇದೆ. ಇಡೀ ಕಟ್ಟಡದಲ್ಲೂ ಬಿಯರ್ ಬಾಟಲ್, ಸಾರಾಯಿ ಪ್ಯಾಕೇಟ್, ನೀರಿನ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್, ಪ್ಲೇಟ್, ಸಿಗರೇಟ್ ಪ್ಯಾಕ್, ರಾಶಿ, ರಾಶಿಯೇ ಬಿದ್ದಿದೆ.
ಕೋಣೆಯ ಒಳಗೆ ಹಾಸಿಗೆ ಮಾದರಿಯಲ್ಲಿ ರಟ್ಟು ಮತ್ತು ಕಾಗದ ಹಾಸಿದ್ದು ನೋಡಿದರೆ ಕೆಲವು ಜೋಡಿಗಳು ಇಲ್ಲಿ ರಾತ್ರಿ ವಾಸ್ತವ್ಯ ಮಾಡಿ, ಪ್ರಣಯ ಗೀತೆ ಹಾಡಿದ ಕುರುಹು ಸಿಗುತ್ತಿದೆ. ಈ ಕಟ್ಟಡದ ಆಡಳಿತ ಮಂಡಳಿಯವರು ಸರಿಯಾಗಿ ನಿರ್ವಹಣೆ ಮಾಡಬೇಕಿದೆ. ಕಂಪೌಂಡ್ ನಿರ್ಮಿಸಿ, ಗೇಟ್ ಮಾಡಿ ಬೀಗ ಹಾಕದಿದ್ದರೆ ಅಕ್ರಮ ಚಟುವಟಿಕೆಗಳು ನಿರಂತರವಾಗಲಿದೆ. ಹುಡುಕಿದರೆ ತಾಲೂಕಿನಲ್ಲಿ ಇಂತಹ ಸ್ಥಳವು ಇನ್ನೂ ಇದೆ . ಪೋಲೀಸ್ ಇಲಾಖೆ ಕೂಡ ಇಂಥಹ ಸ್ಥಳದ ಬಗ್ಗೆ ನಿಗಾ ವಹಿಸಬೇಕಿದೆ.
Be the first to comment