ಜಿಲ್ಲಾ ಸುದ್ದಿಗಳು
ಸಫಾಯಿ ಕರ್ಮಚಾರಿಗಳಿಗೆ ಶೇ.100 ರಷ್ಟು ಸೂರು
ಜಿಲ್ಲೆಯಲ್ಲಿ ಇರುವ ಒಟ್ಟು ಸಫಾಯಿ ಕರ್ಮಚಾರಿಗಳಲ್ಲಿ ಯಾರಿಗೆ ಮನೆ ಇದೆ, ಯಾರಿಗೆ ಮನೆ ಮತ್ತು ಜಾಗ ಇರುವುದಿಲ್ಲ. ಅಲ್ಲದೇ ಜಾಗವಿದ್ದು ಮನೆ ಕಟ್ಟಿಕೊಳ್ಳದೇ ಇರುವವರ ಆಯಾ ಸ್ಥಳೀಯ ಸಂಸ್ಥೆಗಳವಾರು ಪಟ್ಟಿ ಮಾಡಿ ವಿವಿಧ ಗೃಹಭಾಗ್ಯ ಯೋಜನೆಯಡಿ ಸೂರು ನೀಡಿ, ಮನೆ ಇಲ್ಲವೆಂಬ ಕೂಗು ಜಿಲ್ಲೆಯಲ್ಲಿ ಕೇಳದಂತಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಹಳಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಆಗದಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಕಥೆ ಹೇಳದೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕಟ್ಟುನಿಟ್ಟಿನ ಸೂಚಿನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ತಾಲೂಕಾ ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳು ವಿದ್ಯಾರ್ಥಿ ವೇತನ ಜಮೆ ಆಗದೇ ಇರುವ ಪಟ್ಟಿಯನ್ನು ಪಡೆದು ತಾಂತ್ರಿಕ ದೋಷವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಜಮೆಗೆ ಕ್ರಮಕೈಗೊಳ್ಳಲು ಸೂಚಿಸಿದರು. ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರರಿಗೆ ತಿಳಿಸಿದರು.
ವಿವಿಧ ಇಲಾಖೆಗಳಿಗೆ ನೀಡಿ ಗುರಿಯನ್ನು ತಲುಪಿಸುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಬಿಡುಗಡೆಯಾದ ಅನುದಾನ ವಿನಿಯೋಗವಾಗಬೇಕು. ಯಾವುದೇ ಕೆಲಸ ಬಾಕಿ ಇಟ್ಟುಕೊಳ್ಳಬಾರದು. ವಿವಿಧ ಸೌಲಭ್ಯಗಳ ವಿತರಣೆಯಲ್ಲಿ ಫಲಾನುಭವಿಗಳ ಆಯ್ಕೆ ತುರ್ತಾಗಿ ಆಗಬೇಕು. ಅವುಗಳಿಗೆ ಮಂಜೂರಾತಿ ಪಡೆದು ಸೌಲಭ್ಯ ವಿತರಿಸುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ, ಮಹರ್ಷಿ ವಾಲ್ಮೀಕಿ, ಆದಿಜಾಂಬವ, ತಾಂಡಾ ಅಭಿವೃದ್ದಿ, ಭೋವಿ ಅಭಿವೃದ್ದಿ ನಿಗಮ ಸೇರಿದಂತೆ ಇತರೆ ನಿಗಮದಲ್ಲಿನ ನೇರ ಸಾಲ, ಉದ್ಯಮ ಶೀಲತಾ ಅಭಿವೃದ್ದಿ, ಮೈಕ್ರೋ ಕ್ರಡಿಟ್, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯವಾಗಬೇಕು. ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳು ವಿವಿಧ ನಿಗಮದ ಕಾರ್ಯವೈಖರಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ವಿವಿಧ ಇಲಾಖೆಯ ಪ್ರಗತಿ ವಿವರವನ್ನು ಸಭೆಯ ಮುಂದಿಟ್ಟರು. ಪ್ರಸಕ್ತ ಸಾಲಿನ ಆಗಸ್ಟ ಅಂತ್ಯಕ್ಕೆ ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ ಒಟ್ಟು 32.11 ಕೋಟಿ ರೂ.ಗಳ ಪೈಕಿ 19.10 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ರೀತಿಯ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ 14.44 ಕೋಟಿ ರೂ.ಗಳ ಪೈಕಿ 10.64 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಾಯನಗೌಡ, ಜಿಲ್ಲಾ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಶಾಂತ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಎಂ.ಜಿ.ಕೊಣ್ಣೂರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment