ಜಿಲ್ಲಾ ಸುದ್ದಿಗಳು
ಕಾರವಾರ
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಗುದ್ದಾಟ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ನಾಯಕರು ಈ ಇಬ್ಬರು ನಾಯಕರ ನಡುವಿನ ಗುದ್ದಾಟದಿಂದ ಯಾರ ಪರ ನಿಲ್ಲಬೇಕು ಎಂದು ಗೊಂದಲಕ್ಕೆ ಸಿಲುಕಿ ಹೈರಾಣಾಗುತ್ತಿದ್ದಾರೆ ಎನ್ನಲಾಗುತ್ತಿದೆ.ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಂದೇ ಕರೆಯಲಾಗುತ್ತಿತ್ತು. ಜಿಲ್ಲೆಯ ಮಾಜಿ ಸಚಿವ ಆರ್ ವಿ ದೇಶಪಾಂಡೆಯಿಂದ ಹಿಡಿದು ಸತೀಶ್ ಸೈಲ್, ಮಂಕಾಳ ವೈದ್ಯ, ಶಾರದಾ ಶೆಟ್ಟಿ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ನಾಯಕತ್ವವನ್ನ ಒಪ್ಪಿ ಪಕ್ಷದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಅವರನ್ನ ನೇಮಕ ಮಾಡಿದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿ ಪಕ್ಷದಲ್ಲಿನ ಮುಂದಿನ ಅಧಿಪತ್ಯಕ್ಕಾಗಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ಜೋರಾಗಿಯೇ ನಡೆದಿದೆ. ಒಂದೆಡೆ ತನ್ನ ಬಣದವರನ್ನ ಕಟ್ಟಿಕೊಂಡು ಸಿದ್ದರಾಮಯ್ಯ ರಾಜ್ಯದಲ್ಲಿ ಪಕ್ಷ ಸಂಘಟಿಸುತ್ತಿದ್ದರೆ, ಇನ್ನೊಂದೆಡೆ ಡಿ.ಕೆ ಶಿವಕುಮಾರ್ ಸಹ ತನ್ನದೇ ಆದ ತಂಡ ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.ಈ ನಡುವೆ ಇಬ್ಬರು ನಾಯಕರು ನಡುವಿನ ಮುಸುಕಿನ ಗುದ್ದಾಟ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿನ ರಾಜಕೀಯದ ಮೇಲೆ ಪರಿಣಾಮ ಬೀಳುತ್ತಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೆಲವರು ನಿಷ್ಟರಿದ್ದರೆ, ಇನ್ನು ಕೆಲವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಯಾರೇ ಯಾರೊಬ್ಬರ ಪರ ಕೆಲಸ ಮಾಡಿದರು ಡಿ.ಕೆ ಹಾಗೂ ಸಿದ್ದರಾಮಯ್ಯನವರಿಗೆ ತಿಳಿಯುವ ನಿಟ್ಟಿನಲ್ಲಿ ಯಾರ ನೇತೃತ್ವದಲ್ಲಿ ಕೆಲಸ ಮಾಡಬೇಕು ಅನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.
ಇನ್ನು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವೈಫಲ್ಯವನ್ನ ಜನರಿಗೆ ಎತ್ತಿತೋರಿಸಿ ಮುಂದಿನ ಬಾರಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎಂದು ಪಕ್ಷದ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಆದರೆ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಅನ್ನುವ ಗೊಂದಲ ಕಾರ್ಯಕರ್ತರದ್ದಾಗಿದೆ. ಇನ್ನು ಸಿದ್ದರಾಮಯ್ಯನವರ ತಂಡದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿ ಅಂತಿಮವಾಗಿ ಅಧಿಕಾರಕ್ಕೆ ಬಂದ ನಂತರ ಡಿ.ಕೆ ಶಿವಕುಮಾರ್ ಅವರಿಗೆ ಅಧಿಕಾರ ಸಿಕ್ಕರೆ ತನ್ನನ್ನ ತಿರಸ್ಕರಿಸುತ್ತಾರೆ ಎನ್ನುವುದು ಒಂದು ಗುಂಪಿನ ಅಭಿಪ್ರಾಯವಾದರೆ, ಡಿ.ಕೆ ಶಿವಕುಮಾರ್ ಜೊತೆ ಗುರುತಿಸಿಕೊಂಡು ಸಿದ್ದರಾಮಯ್ಯನವರನ್ನ ಏತಕ್ಕಾಗಿ ವಿರೋಧ ಮಾಡಿಕೊಳ್ಳಬೇಕು ಎನ್ನುವುದು ಮತ್ತೊಂದು ಗುಂಪಿನ ಅಭಿಪ್ರಾಯ.ಕಳೆದ ಬಾರಿ ಡಿ.ಕೆ ಶಿವಕುಮಾರ್ ಶಿರಸಿ, ಹೊನ್ನಾವರಕ್ಕೆ ಬಂದ ನಂತರವೇ ಸಿದ್ದರಾಮಯ್ಯ ಸಹ ಜಿಲ್ಲೆಯತ್ತ ಮುಖ ಮಾಡಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು. ಎಲ್ಲಾ ಜಿಲ್ಲೆಯಲ್ಲಿ ತನ್ನದೇ ಆದ ಹಿಡಿತವನ್ನ ಇಬ್ಬರು ನಾಯಕರು ಹಿಡಿದಿಟ್ಟುಕೊಳ್ಳುವ ಕೆಲಸವನ್ನ ಮಾಡುತ್ತಿದ್ದು ಅದರಂತೆ ಜಿಲ್ಲೆಯತ್ತ ಇಬ್ಬರು ನಾಯಕರು ಬಂದು ಹೋಗಿದ್ದಾರೆ ಎನ್ನುವುದು ಕಾಂಗ್ರೆಸ್ ಪಕ್ಷದ ಕಾರ್ತಕರ್ತರ ಅಭಿಪ್ರಾಯ. ಸದ್ಯ ಇಬ್ಬರು ನಡುವಿನ ಮುಸುಕಿನ ಗುದ್ದಾಟದಿಂದ ಯಾರನ್ನ ತಮ್ಮ ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಾಗದೇ ಜಿಲ್ಲೆಯ ಪಕ್ಷದ ನಾಯಕರು ಕಾರ್ಯಕರ್ತರು ಪರದಾಡುವಂತಾಗಿದ್ದು ಹೈಕಮಾಂಡ್ ಮುಂದಿನ ಚುನಾವಣೆ ವೇಳೆಗೆ ಈ ಇಬ್ಬರು ನಾಯಕರ ನಡುವೆ ಬಿನ್ನಾಭಿಪ್ರಾಯ ಇರುವುದನ್ನ ಸರಿಪಡಿಸಿದರೆ ಮಾತ್ರ ಈ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.ಪಕ್ಷ ಸಂಘಟನೆ ಮೇಲೆ ಪರಿಣಾಮಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಗುದ್ದಾಟ ಇರುವುದರಿಂದ ನಮಗೂ ಯಾರೊಟ್ಟಿಗೆ ಗುರುತಿಸಿಕೊಳ್ಳಬೇಕು ಎನ್ನುವುದು ಗೊಂದಲವಾಗುತ್ತದೆ. ಇದು ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀಳಲಿದೆ ಎನ್ನುವುದು ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರ ಅಭಿಪ್ರಾಯ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ್ದ ಒಳ್ಳೆಯ ಕಾರ್ಯವನ್ನ ಮುಂದಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗುತ್ತಿದ್ದೇವೆ. ಇಬ್ಬರು ನಾಯಕರು ಒಂದಾಗಿ ಚುನಾವಣೆಗೆ ಹೋದರೆ ಜಿಲ್ಲೆ ಮಾತ್ರವಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಮುಂದಿನ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ವಿಧಾನ ಪರಿಷತ್ ಚುನಾವಣೆ ಮೇಲೂ ಇದು ಪರಿಣಾಮ ಬೀಳುವ ಸಾಧ್ಯತೆ ಇದ್ದು, ಇಬ್ಬರು ನಾಯಕರನ್ನ ಹೈಕಮಾಂಡ್ ನಾಯಕರು ಕೂರಿಸಿ ಒಂದಾಗಿ ಮಾಡಿ ಒಟ್ಟಿಗೆ ಪಕ್ಷ ಸಂಘಟನೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಮುಖಂಡರ ಅಭಿಪ್ರಾಯವಾಗಿದೆ.
Be the first to comment