ಜಿಪಂ, ತಾಪಂಗೆ ಬಿಎಸ್‌ಪಿಯಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಬೂತ್‌ಮಟ್ಟದಲ್ಲಿ ಸಕ್ರಿಯವಾಗಿ ಬಿಎಸ್‌ಪಿ ಸಂಘಟಿಸುವುದೊಂದೇ ಗುರಿ

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು 

ದೇವನಹಳ್ಳಿ

ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ)ಯಿಂದ ಅಭ್ಯರ್ಥಿಗಳು ಸ್ಪರ್ಧಿಸಿ ಗೆಲ್ಲಿಸಿಕೊಳ್ಳುವುದರ ಜತೆಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಆರ್.ಮುನಿಯಪ್ಪ ತಿಳಿಸಿದರು.

CHETAN KENDULI

ಪಟ್ಟಣ ಪ್ರವಾಸಿ ಮಂದಿರದಲ್ಲಿ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನಸಭೆಗೆ ಕಡತವನ್ನು ತೆರೆದು, ಬೂತ್‌ಮಟ್ಟದಲ್ಲಿ ಪಕ್ಷ ಕಟ್ಟುವುದನ್ನು ಪ್ರಾರಂಭಿಸಿ, ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ. ಮುಂಬರುವ ಚುನಾವಣೆಗಳಿಗೆ ಸಕ್ರಿಯವಾಗಿ ಸ್ಪರ್ಧಿಸಿ ಅಭ್ಯರ್ಥಿ ಗೆಲುವು ಸಾಧಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ಭಾಗದಲ್ಲಿ ತಳಮಟ್ಟದಿಂದ ಸದೃಢವಾಗಿ ಪಕ್ಷವನ್ನು ಕಟ್ಟಲಾಗುವುದು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯನ್ನು ಯಾವುದೇ ಸರಕಾರಗಳು ಮಾಡಿಲ್ಲ. ಈಗಲೂ ಸಹ ಬಗರ್ ಹುಕುಂ ಸಾಗುವಳಿ ಅರ್ಜಿ ಹಾಕಿಕೊಂಡಿರುವ ರೈತಾಪಿಗಳಿಗೆ ಸಕ್ರಮಗೊಳಿಸಿಲ್ಲ. ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸುವುಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ಬಿಎಸ್‌ಪಿ ಪಕ್ಷದಿಂದ ಬೃಹತ್ ಹೋರಾಟ ಮಾಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೂ ಜಾತಿವಾರು ಜನಗಣತಿ ಮಾಡಲು ಕೇಂದ್ರಸರಕಾರವನ್ನು ಅಕ್ಕ ಮಾಯಾವತಿಯವರು ಒತ್ತಾಯ ಮಾಡುವುದರ ಮೂಲಕ ಹೋರಾಟ ಮಾಡುತ್ತಿದ್ದಾರೆ. ಸರಕಾರ ಜಾತಿ ಗಣತಿ ಮಾಡಲು ಹಿಂದೇಟು ಹಾಕುತ್ತಿದೆ. ಕೇಂದ್ರ ಸರಕಾರಕ್ಕೆ ರಾಷ್ಟ್ರ ವ್ಯಾಪಿ ಹಿಂದುಳಿದ ವರ್ಗಗಳ ಜಾತಿ ಜನಗಣತಿ ಮಾಡಲೇ ಬೇಕು ಎಂದು ಒತ್ತಾಯಿಸಲಾಗುತ್ತಿದೆ. ಮೀಸಲಾತಿ ಮತ್ತು ಇತರೆ ಸವಲತ್ತುಗಳನ್ನು ಈವರೆಗೆ ಕಾಂಗ್ರೆಸ್, ಬಿಜೆಪಿ ಇತರೆ ಯಾವುದೇ ರಾಷ್ಟ್ರೀಯ ಪಕ್ಷಗಳ ಸರಕಾರಗಳು ನೀಡುತ್ತಿಲ್ಲ. ಜತೆಗೆ ಧಾರ್ಮೀಕ ಅಲ್ಪಸಂಖ್ಯಾತರನ್ನು ಸಹ ಕಡೆಗಣಿಸುತ್ತಿದ್ದಾರೆ. ೧೯೩೧ರಲ್ಲಿ ಬ್ರಿಟಿಷರ ಅವಧಿಯಲ್ಲಿ ಜನಗಣತಿ ಆಗಿತ್ತು. ಜಾತಿ ಗಣತಿ ಮಾಡುವಂತೆ ಸುಪ್ರಿಂ ಕೋರ್ಟ್ ಆದೇಶವಿದೆ. ಕೇಂದ್ರ ಸರಕಾರ ಅದರ ಸಂಬಂಧ ಕಾನೂನು ಮಾಡಿದೆ. ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆಯ ನಿಖರ ಅಂಕಿ ಅಂಶಗಳನ್ನು ನೀಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಮಾತನಾಡಿ, ರಾಷ್ಟ್ರೀಯ ಬಿಎಸ್‌ಪಿ ಅಧ್ಯಕ್ಷೆ ಅಕ್ಕ ಮಾಯವತಿ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಪಕ್ಷವನ್ನು ಕಟ್ಟಲು ಎಲ್ಲಾ ರೀತಿಯಲ್ಲಿ ಎಲ್ಲರ ಸಹಕಾರ, ಸಲಹೆ, ಸೂಚನೆ ಪಡೆದುಕೊಂಡು ಪಕ್ಷ ಸಂಘಟಿಸಲಾಗುತ್ತಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಎಸ್‌ಪಿ ಕಟ್ಟಲಾಗುತ್ತಿದೆ. ಈಗಾಗಲೇ ದೇಶದ ಹಲವು ರಾಜ್ಯದಲ್ಲಿ ಬಿಎಸ್‌ಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಎಲ್ಲಾ ಜನಾಂಗದವರು ಕೈಜೋಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಪಕ್ಷವೂ ಮಾಡದ ಅಭಿವೃದ್ಧಿಯನ್ನು ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಮಾಡಿ ತೋರಿಸುತ್ತಾರೆ. ಈಗಾಗಲೇ ಸಾಕಷ್ಟು ಯುವಕರು ಬಿಎಸ್‌ಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಚಿತ್ರ: ಈ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಬಂಗಾರಪ್ಪ, ಜಿಲ್ಲಾ ಬಿಎಸ್‌ಪಿ ಉಸ್ತುವಾರಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ನಾಗರಾಜ್, ಹೋಬಳಿ ಉಪಾಧ್ಯಕ್ಷ ಜಗದೀಶ್, ಮುಖಂಡರಾದ ಸುಬ್ಬರಾಯಪ್ಪ, ಕಾರ್ಯಕರ್ತರು ಇದ್ದರು.

Be the first to comment

Leave a Reply

Your email address will not be published.


*