ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿ ಮತ್ತು ಪ್ರವಾಹದಿಂದಾದ ಹಾನಿ ಪರಿಶೀಲನೆಗೆ ಸೆಪ್ಟೆಂಬರ 5 ರಂದು ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಲಶಕ್ತಿ ಸಚಿವಾಲಯದ ಸೂಪರಿಂಟೆಂಡಿಂಗ್ ಎಂಜಿನೀಯರ್ ಗುರು ಪ್ರಸಾದ ಅವರ ನೇತೃತ್ವದ ತಂಡ ಸೆಪ್ಟೆಂಬರ 5 ರಂದು ರಾತ್ರಿ ಬಾಗಲಕೋಟೆಗೆ ಆಗಮಿಸಲಿದೆ. ನಂತರ ಸೆಪ್ಟೆಂಬರ 6 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಲ್ಲಿ ಪ್ರವಾಹದಿಂದಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆಂದು ತಿಳಿಸಿದರು.

ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಮನೆ, ಶಾಲೆ ಹಾಗೂ ಅಂಗನವಾಡಿ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಹದಿಂದ ಉಂಟಾದ ಒಟ್ಟಾರೆ ಹಾನಿಯ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾನಿ ವರದಿಯನ್ನು ಸಿದ್ದಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂತರ ಸಚಿವಾಲಯದ ಕೇಂದ್ರ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಮಹೇಶ ಕುಮಾರ ಹಾಗೂ ಸ್ಟೇಟ್ ರೆವಿನ್ಯೂ ಡಿಎಂ ಕನ್ಸ್‍ಲಟಂಟ್ ಶ್ರೀನಿವಾರ ರೆಡ್ಡಿ ಇರಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೋಳ್ಳಿ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರಿ ಬಾವಿದಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಶಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ತಹಶೀಲ್ದಾರರು ಇತರರು ಉಪಸ್ಥಿತರಿದ್ದರು.

ಪ್ರತಿ ಬುಧವಾರ ಲಸಿಕಾ ಮೇಳ:

ಸಂಭವಣೀಯ 3ನೇ ಅಲೆಯ ಹಿನ್ನಲೆಯಲ್ಲಿ ಲಸಿಕಾ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ಪ್ರತಿ ಬುಧವಾರ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಮೊದಲನೇ ಡೋಸ್ ಪಡೆದವರು ಹಾಗೂ ಯಾವುದೇ ಡೋಸ್ ಪಡೆಯದವರು ತಪ್ಪದೇ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ಕೋರಿದೆ.
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿಗಳು.

Be the first to comment

Leave a Reply

Your email address will not be published.


*