ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸರ್ವಕಾಲಕ್ಕೂ ಕಂದಾಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ಕಂದಾಯ ಇಲಾಖೆಯು ಅತ್ಯಂತ ಪುರಾತನ ಇಲಾಖೆಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಸ್ವ ಇಲಾಖೆಯೆಂದು ಕರೆಯಲಾಗುತ್ತಿದ್ದ ಈ ಇಲಾಖೆ ಈಗಲೂ ಕೂಡ ಸರ್ಕಾರದ ಬಹು ಪ್ರಮುಖವೆನಿಸುವ ಇಲಾಖೆಗಳಲ್ಲಿ ಒಂದೆನಿಸಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ನವನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಹೊಸದಾಗಿ ನೇಮಕಾತಿ ಹೊಂದಿದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಂದಾಯ ವಿಷಯಗಳ ಬಗ್ಗೆ 5 ದಿನಗಳ ಮುಖಾ-ಮುಖಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು ಭೂ ಆಡಳಿತ ಮತ್ತು ಭೂ ಕಂದಾಯ ದಾಖಲಾತಿ ಕಂದಾಯ ಇಲಾಖೆಯ ಪ್ರಮುಖ ಕಾರ್ಯಯೋಜನೆಯಾಗಿದ್ದರೂ ಚುಣಾವಣೆ ಕಾರ್ಯ, ಜಾನುವಾರು ಗಣತಿ, ಕಾನೂನು ಸುವ್ಯವಸ್ಥೆ ಜಾರಿ, ನೈಸರ್ಗಿಕ ವಿಕೋಪಗಳ ನಿರ್ವಹಣೆ ಮುಂತಾದ ಮಹತ್ತರವಾದ ಕಾರ್ಯ ಹೊಂದಿದೆ ಎಂದರು.
ಈ ಎಲ್ಲ ಇಲಾಖೆಯು ಸಾರ್ವಜನಿಕರ ಸಾಮಾನ್ಯ ಜೀವನದ ಆಗು ಹೋಗುಗಳಲ್ಲಿ ಜನಸಾಮಾನ್ಯರೊಂದಿಗೆ ಅತೀ ಹೆಚ್ಚಾಗಿ ಸ್ಪಂದಿಸುತ್ತಿರುವುದರಿಂದ ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ಪಾತ್ರ ನಿರ್ವಹಿಸುತ್ತಿದೆ. ಗ್ರಾಮ ಮಟ್ಟದಲ್ಲಿ ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುವುದು ಗ್ರಾಮಲೆಕ್ಕಿಗರ ಮುಖ್ಯ ಕರ್ತವ್ಯವಾಗಿದೆ. ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಗಳ ಮಹತ್ವವಾದಂತಹ ವಿಷಯಗಳನ್ನು ತಿಳಿದುಕೊಳ್ಳಲು ಹಾಗೂ ಸಾರ್ವಜನಿಕರ ಜೊತೆ ಒಳ್ಳೆ ಸಂಬಂಧದಿಂದ ಇರುವಿಕೆಯ ಬಗ್ಗೆ ಈ ಐದು ದಿನಗಳವರೆಗೆ ನೆಡೆಯುವ ವಿಶೇಷ ತರಬೇತಿಯ ಸದುಪಯೋಗಕ್ಕೆ ಕರೆ ನೀಡಿದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಗಂಗಾಧರ ದಿವಟರ, ಈ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಹೊಸದಾಗಿ ನೇರ ನೇಮಕಾತಿ ಹೊಂದಿದ ಗ್ರಾಮಲೆಕ್ಕಿಗರಿಗೆ ಕಂದಾಯ ವಿಷಯಗಳ ತರಬೇತಿಯು ಅವಶ್ಯಕತೆಯನ್ನು ಮನಗಂಡು ಈ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯನ್ನು ನೀಡಲು ನುರಿತ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದರು.
ಇದೇ ಸಂದರ್ಭದಲ್ಲಿ ತರಬೇತಿ ಸಂಸ್ಥೆಗೆ ಬರುವ ಶಿಭಿರಾರ್ಥಿಗಳಿಗೆ ಬೆಸಿಕ್ ಕಂಪ್ಯೂಟರ್ ಟ್ರೈನಿಂಗ್ ನೀಡುವ ಸಲುವಾಗಿ ಪ್ರಯೋಗಾಲಯದ ಉದ್ಘಾಟಣೆ ಮಾಡಿ ಹೊಸ ಗಣಕಯಂತ್ರಗಳಿಗೆ ಚಾಲನೆ ನೀಡಿದರು. ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇವರು ಹೊರತಂದ ಗ್ರಾಮಲೆಕ್ಕಾಧಿಕಾರಿಗಳ ಕೈಪಿಡಿ ಪುಸ್ತಕವನ್ನು ಎಲ್ಲ ಶಿಭಿರಾರ್ಥಿಗಳಿಗೆ ವಿತರಿಸಲಾಯಿತು.
ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ, ತರಬೇತಿ ಸಂಸ್ಥೆಯ ಬೋಧಕರಾದ ಸುಲೋಚನಾ ಹೊಸಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಂ.ಮಠ, ಸಿಬ್ಬಂದಿಗಳಾದ ದಾಕ್ಷಾಯಣಿ ನಿಲೂಗಲ್ಲ, ಎಸ್. ಎಸ್. ಪಾಟೀಲ, ಎಸ್.ವಾಯ್.ಮನಗೂಳಿ ಹಾಗೂ ಶೃತಿ ಅಳ್ಳಗಿ ಉಪಸ್ಥಿತರಿದ್ದರು.
Be the first to comment