ಜಿಲ್ಲಾ ಸುದ್ದಿಗಳು
ಇಂದಿನಿಂದ ಶಾಲೆಗಳು ಆರಂಭಗೊಂಡಿವೆ. ಈ ಮೊದಲು ಶಾಲೆಗೆ ಹೋಗಲು ಮಕ್ಕಳು ಇಂದು- ಮುಂದು ನೋಡುತ್ತಿದ್ದರು.ಆದರೆ ಈಗ ಶಾಲೆಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ.
ಬಾಗಲಕೋಟೆ:(ಕೆಲೂರ) ಕೋವಿಡ್ ಪರಿಣಾಮ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಶಾಲಾ, ಕಾಲೇಜು ತರಗತಿಗಳು ಪುನರಾರಂಭವಾಗಿದ್ದು, ಪ್ರಥಮ ದಿನವಾದ ಸೋಮವಾರ ವಿದ್ಯಾರ್ಥಿಗಳು ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಗೆ ನಿರೀಕ್ಷೆಗೂ ಮೀರಿ ಉತ್ಸಾಹದಿಂದ ಹಾಜರಾಗಿದ್ದರು.
ಇನ್ನು ವಿದ್ಯಾರ್ಥಿಗಳು ಹಬ್ಬದ ಸಡಗರವನ್ನು ಯಾವ ರೀತಿ ಆಚರಿಸುತ್ತಾರೋ ಅದೇ ರೀತಿ ಶಾಲೆಗೆ ಕುಣಿದು ಕುಪ್ಪಳಿಸುತ್ತಾ ಆಗಮಿಸಿದ್ದು ವಿಶೇಷ.ಹೀಗೆ ಬಂದಂತಹ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ ಹೂಗುಚ್ಚ ಹಾಗೂ ಮಾಸ್ಕ್ ಗಳನ್ನು ನೀಡಿ ಬರಮಾಡಿಕೊಂಡರಲ್ಲದೆ, ವಿದ್ಯೆಯ ಜೊತೆ ಆಟೋಟಗಳಲ್ಲಿ ಪಾಲ್ಗೊಂಡು ನಾಡಿಗೆ ಹೆಸರು ತರಬೇಕಲ್ಲದೆ ಕರೊನಾ ಮಹಾಮಾರಿ ಎಚ್ಚರಿಕೆಯಿಂದಿರಬೇಕೆಂದು ಕಿವಿ ಮಾತು ಹೇಳಿದರು.
9ನೇ ತರಗತಿಯಿಂದ 10 ನೇತರಗತಿ ವರೆಗಿನ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಖುಷಿ, ಖುಷಿಯಿಂದ ತೆರಳಿದರು. ಬಹಳ ತಿಂಗಳ ಬಳಿಕ ಸಹಪಾಠಿ, ಶಿಕ್ಷಕರನ್ನು ಭೇಟಿಯಾದ ಸಂತಸ ವಿದ್ಯಾರ್ಥಿಗಳ ಮೊಗದಲ್ಲಿ ಕಂಡುಬಂದಿತು.
ಎರಡು ದಿನಗಳ ಮೊದಲೇ ಸ್ವಚ್ಛಗೊಂಡು, ಸ್ಯಾನಿಟೈಜ್ ಆಗಿದ್ದ ಶಾಲಾವರಣವನ್ನು ತಳಿರು, ತೋರಣಗಳಿಂದ ಸಿಂಗಾರಗೊಳಿಸಲಾಗಿತ್ತು. ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳನ್ನು ಶಾಲಾ, ಕಾಲೇಜು ಪ್ರವೇಶದ್ವಾರದಲ್ಲೇ ಸ್ವಾಗತಿಸಿದರು. ಪರಸ್ಪರ ಅಂತರ, ಮಾಸ್ಕ್ ಕಡ್ಡಾಯ, ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ಮಾಡಿ ವಿದ್ಯಾರ್ಥಿಗಳನ್ನು ಕೊಠಡಿಗಳ ಒಳಗೆ ಬಿಡಲಾಯಿತು. ಒಂದು ಡೆಸ್ಕ್‌ಗೆ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಹರಡದಂತೆ ತಡೆಗೆ ಮಾರ್ಗಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ನೋಟಿಸ್ ಬೋರ್ಡ್‌ಗೆ ಅಂಟಿಸಲಾಗಿತ್ತು. ಪಾಠ, ಪ್ರವಚನದ ಆರಂಭಕ್ಕೂ ಮುನ್ನಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಕೋವಿಡ್ ಮಾರ್ಗಸೂಚಿ ಅನುಸರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಬಿ. ಯಾವಗಲ್ಲಮಠ,ಎಸ್.ಬಿ.ಹೆಳವರ,ಸಿದ್ದರಾಜಕೆಂಧೂಳಿ,ವಾಯ್.ಎಸ್.ವಾಲಿಕಾರ,ಬಿ.ಎಸ್.ಕಮತರ,ಆಯ್.ಎಸ್.ಮಂಡಿ ಉಪಸ್ಥಿತರಿದ್ದರು.
Be the first to comment