ತೃಪ್ತಿ ಮತ್ತು ಮಾನವೀಯತೆ ಭ್ರಷ್ಟಾಚಾರಕ್ಕೆ ನಿಯಂತ್ರಣಕ್ಕೆ ತರುತ್ತವೆ: ನ್ಯಾ. ಸಂತೋಷ ಹೆಗಡೆ

Reported by: ಚೇತನ ಕೆಂದೂಳಿ

ಇಲ್ಲಿನ ಜೆಎಂಎಪ್‌ಸಿ ಕೋರ್ಟ ಸಭಾ ಭವನದಲ್ಲಿ ನ್ಯಾ.ಸಂತೋಷ ಹೆಗಡೆ ಅವರು ಮಾತನಾಡಿದರು.

ಮುದ್ದೇಬಿಹಾಳ:
ಯುವ ನ್ಯಾಯಾಧೀಶರು, ವಕೀಲರು, ವಿದ್ಯಾರ್ಥಿಗಳು ಜೀವನದಲ್ಲಿ ತೃಪ್ತಿ ಮತ್ತು ಮಾನವೀಯತೆ ಎನ್ನುವ ಎರಡು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಯಶಸ್ಸಿಗೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ದಾರಿ ಮಾಡಿಕೊಡುತ್ತವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ ಹೇಳಿದರು.
ಇಲ್ಲಿನ ಹೊಸ ಜೆಎಂಎಫ್‌ಸಿ ಕೋರ್ಟನ ಸಭಾಭವನದಲ್ಲಿ ಶುಕ್ರವಾರ ವಕೀಲರ ಸಂಘ, ನ್ಯಾಯಾಧೀಶರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಾಧೀಶರು, ವಕೀಲರು ಹೆಚ್ಚು ಓದಬೇಕು, ಪ್ರಕರಣಗಳನ್ನು ತೀವ್ರ ಮುಕ್ತಾಯಗೊಳಿಸಬೇಕು. ಇದರಿಂದ ನ್ಯಾಯದಾನ ಚುರುಕುತನ, ಪಾರದರ್ಶಕತೆ ಪಡೆದುಕೊಂಡು ಭ್ರಷ್ಟಾಚಾರ ಸುಳಿಯದಂತೆ ಮಾಡುತ್ತದೆ ಎಂದರು.


ಇಲ್ಲಿನ ಜೆಎಂಎಪ್‌ಸಿ ಕೋರ್ಟ ಸಭಾ ಭವನದಲ್ಲಿ ನ್ಯಾ.ಸಂತೋಷ ಹೆಗಡೆ ಅವರು ಮಾತನಾಡಿದರು.

ಟೈಮ್ ಕಂಜೂಮಿಂಗ್ ಅನ್ನೋದು ನ್ಯಾಯಾಂಗದ ಮೇಲೆ ಇರುವ ದೊಡ್ಡ ಆರೋಪ. ಇದನ್ನು ಬದಲಾಯಿಸುವುದು ಸಾಧ್ಯವಿದೆ. ಯುವ ವಕೀಲರು ಒಂದು ಕೋರ್ಟಿನ ತೀರ್ಪಿನ ನಂತರ ಹಲವಾರು ರಿವಿಜನ್‌ಗಳಿಗೆ ಒಗ್ಗಿಕೊಳ್ಳಬಾರದು. ನಮ್ಮಲ್ಲಿರುವ ಹಲವು ಹಂತಗಳ ಕೋರ್ಟ ವ್ಯವಸ್ಥೆ ಹೋಗಬೇಕು. ಅಮೇರಿಕದಲ್ಲಿರುವಂತೆ ಟ್ರಯಲ್, ಅಪೀಲ್ ಕೋರ್ಟ ಮಾತ್ರ ಇರಬೇಕು. ಜೀವನ ಕೊಡುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ನಾನು ನನ್ನ ಕರ್ತವ್ಯ ಪ್ರಾಮಾಣಿಕವಾಗಿ ಮಾಡಿದ್ದೇನೆ ಎನ್ನುವಂತೆ ಜವಾಬ್ಧಾರಿ ಅರಿತುಕೊಂಡು ನಡೆದುಕೊಳ್ಳಬೇಕು ಎಂದರು.
ತೃಪ್ತಿ ಇಲ್ಲದಿದ್ದರೆ ದುರಾಸೆ ಎನ್ನುವ ರೋಗ ಬರುತ್ತದೆ. ಇದಕ್ಕೆ ಮಿತಿ ಇಲ್ಲ. ಇದು ಜೀವನವನ್ನು ಹಾಳುಗೆಡವುತ್ತದೆ. ೧೯೮೫ರಲ್ಲಿ ಆಗಿನ ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಹೇಳಿದಂತೆ ಸರ್ಕಾರ ಕೊಡುವ ಒಂದು ರೂಪಾಯಿಯಲ್ಲಿ ಕೊನೇ ಹಂತಕ್ಕೆ ಹೋಗುವುದು ಕೇವಲ ೧೫ ಪೈಸೆ ಮಾತ್ರ ಎನ್ನುವುದು ದುರಾಸೆಗೆ ಉದಾಹರಣೆ. ೨೦೧೯ರಲ್ಲೂ ಇದು ಬದಲಾಗಿಲ್ಲ. ಭೋಫೋರ್ಸ್‌ನ ೬೪ ಕೋಟಿ, ಕಾಮನ್‌ವೆಲ್ತ್ ಗೇಮ್ಸ್‌ನ ೭೦೦೦೦ ಕೋಟಿ, ೨ಜಿಯ ೧.೭೬ ಲಕ್ಷ ಕೋಟಿ, ಕಲ್ಲಿದ್ದಲಿನ ೧.೮೬ ಲಕ್ಷ ಕೋಟಿ ಹೀಗೆ ಹಗರಣಗಳಲ್ಲಿ ಸೊನ್ನೆಯ ಸಂಖ್ಯೆ ಹೆಚ್ಚಾಗುತ್ತಲೇ ಹೊರಟಿದೆ. ಇದಕ್ಕೆ ದುರಾಸೆಯೇ ಮೂಲ ಕಾರಣ ಎಂದರು.
೨೬ ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿ ತಮ್ಮ ಜೀವನದ ಪ್ರಮುಖ ಘಟ್ಟ, ಅನುಭವ, ಕಠಿಣ ತೀರ್ಮಾನಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು ತಮಗೆ ಜೀವನದಲ್ಲಿ ದೊರೆತ ಎಲ್ಲ ಅಧಿಕಾರ, ಅವಕಾಶಗಳು ವಿಧಿಲಿಖಿತ, ಹಣೆಬರಹದಿಂದ ಬಂದವುಗಳು. ೧೯೭೫ರ ಎಮರ್ಜೆನ್ಸಿ ಜೀವನದಲ್ಲಿ ಅತಿ ದೊಡ್ಡ ತಿರುವು ತಂದುಕೊಟ್ಟ ಘಟನೆ. ಆಗ ಸೆರೆಮನೆಗೆ ತಳ್ಳಿದ್ದ ಘಟಾನುಘಟಿ ರಾಜಕಾರಣಿಗಳಾಗಿದ್ದ ದಿ.ಅಟಲ್‌ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ದಿ.ಮಧು ದಂಡವತೆ, ಎಸ್.ಎಂ.ಕೃಷ್ಣ, ದಿ.ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಇತರ ವಿರೋಧ ಪಕ್ಷದ ನಾಯಕರು ನನ್ನ ಕಕ್ಷಿದಾರರಾದದ್ದು. ಇವರಿಗೆ ಸಲ್ಲಿಸಿದ ಸೇವೆ ಸ್ಮರಿಸಿ ರಾಮಕೃಷ್ಣ ಹೆಗಡೆ ನನ್ನನ್ನು ಈ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಿಸಿದರೆ, ವಾಜಪೇಯಿ ಅವರು ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸುವ ಅವಕಾಶ ಕೊಟ್ಟರು ಎಂದು ಸ್ಮರಿಸಿದರು.
೨೦೦೬-೧೧ರಲ್ಲಿ ಕರ್ನಾಟಕ ಲೋಕಾಯುಕ್ತನಾದದ್ದು ನನ್ನ ಜೀವನದಲ್ಲಿ ಅತಿ ದೊಡ್ಡ ಬದಲಾವಣೆ ತಂದುಕೊಟ್ಟ ಘಟನೆ. ಅಲ್ಲಿವರೆಗೂ ಕೂಪ ಮಂಡೂಕನಾಗಿದ್ದ ನನಗೆ ಸಮಾಜದಲ್ಲಿ ಆಗುವ ಅನ್ಯಾಯ, ಭ್ರಷ್ಟಾಚಾರ ಅರಿವಿಗೆ ಬಂತು. ಆ ಅನುಭವ ಬಹಳಷ್ಟು ಬದಲಾವಣೆ ತಂತು. ಇವತ್ತು ನಮ್ಮ ದೇಶ, ಸಮಾಜದಲ್ಲಿ ಆಗಲಿ ಯಾವುದೇ ನ್ಯೂನ್ಯತೆ ಇದ್ದಲ್ಲಿ ಅದಕ್ಕೆ ಕಾರಣ ವ್ಯಕ್ತಿಗಳಲ್ಲ ನಮ್ಮ ಸಮಾಜ. ಶ್ರೀಮಂತಿಕೆ, ಅಧಿಕಾರ ಎಲ್ಲವನ್ನೂ ಗೊಂದಲಕ್ಕೆ ದೂಡುತ್ತಿದೆ. ಸಾಮಾಜಿಕ ಮೌಲ್ಯಗಳು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳಲ್ಲಿ ಕುಸಿಯುತ್ತಿದೆ. ಇದಕ್ಕೆ ಮೂಲ ಕಾರಣ ನಾವು ನಮ್ಮ ಹುದ್ದೆಯ ಜವಾಬ್ಧಾರಿ ಮರೆಯುತ್ತಿದ್ದೇವೆ ಎಂದು ವಿಷಾಧಿಸಿದರು.
ನ್ಯಾಯಾಧೀಶರಾದ ಕೆ.ಜಿ.ಚಿಂಪ್ಸಾ ಮತ್ತು ಸುರೇಶ ಸವದಿ, ವಕೀಲರ ಸಂಘದ ಅಧ್ಯಕ್ಷರಾದ ಎಂ.ಎಚ್.ಕ್ವಾರಿ, ಪದಾಧಿಕಾರಿಗಳಾದ ಪಿ.ಬಿ.ಜಾಧವ, ಎಂ.ಎಸ್.ಬಿರಾದಾರ, ಎಂ.ಎನ್.ಯರಗಲ್ಲ, ಎಂ.ಎ.ಬಿದರಕುಂದಿ ವೇದಿಕೆಯಲ್ಲಿದ್ದರು. ಎಲ್ಲ ವಕೀಲರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*