ರಾಜ್ಯ ಸುದ್ದಿಗಳು
ದೇವನಹಳ್ಳಿ
ಸ್ಥಳೀಯ ಸರಕಾರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳ ಬರುವಿಕೆಗೆ ಎದುರು ನೋಡುವ ದುಸ್ಥಿತಿ ಇದ್ದು, ಬಂದಂತಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಬ್ಬಬ್ಬಾ ಎಂದರೆ, ಎರಡು ಮೂರು ತಿಂಗಳು ಇದ್ದು ಸಂಪನ್ಮೂಲ ಕೊರತೆಯಿಂದ ಕಾರ್ಯನಿರ್ವಹಿಸಲಾಗದೆ, ವರ್ಗಾವಣೆ ಮಾಡಿಕೊಂಡು ಇತರೆ ಸಂಪನ್ಮೂಲವಿರುವ ಗ್ರಾಪಂಗಳತ್ತ ಹೆಚ್ಚು ಒಲವು ತೋರಿಸುತ್ತಿರುವುದರಿಂದ ಸಂಪನ್ಮೂಲವಿಲ್ಲದ ಗ್ರಾಪಂಗಳ ಗ್ರಾಮಗಳ ಅಭಿವೃದ್ಧಿ ಕಾಣದೆ, ಹಿಂದುಳಿಯುವ ಪರಿಸ್ಥಿತಿ ದೇವನಹಳ್ಳಿ ತಾಲೂಕಿನ ಗ್ರಾಪಂಗಳ ದುಸ್ಥಿತಿಯಾಗಿದೆ. ಸಂಪನ್ಮೂಲ ಕೊರತೆಯ ಗ್ರಾಪಂಗಳು: ದೇವನಹಳ್ಳಿ ತಾಲೂಕಿನಲ್ಲಿ ೨೪ ಗ್ರಾಮ ಪಂಚಾಯಿತಿಗಳಿದ್ದು, ಅದರಲ್ಲಿ ೭ ಗ್ರಾಪಂಗಳಾದ ಅಣ್ಣೇಶ್ವರ, ಕನ್ನಮಂಗಲ, ಜಾಲಿಗೆ, ಬೆಟ್ಟಕೋಟೆ, ವಿಶ್ವನಾಥಪುರ, ಕಾರಹಳ್ಳಿ ಮತ್ತು ಆವತಿ ಗ್ರಾಪಂಗಳನ್ನು ಹೊರತು ಪಡಿಸಿ, ಉಳಿದಂತಹ ೧೭ ಗ್ರಾಪಂಗಳಲ್ಲಿ ಸಂಪನ್ಮೂಲ ಕೊರತೆ ಎದ್ದು ಕಾಣುತ್ತಿದೆ.
ಅಧಿಕಾರಿಗಳ ನಿಯೋಜನೆಯಲ್ಲಿ ಎಡವಟ್ಟು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸರಕಾರದ ಹಂತದಲ್ಲಿ ಮತ್ತು ಮೇಲಾಧಿಕಾರಿಗಳ ಹಂತದಲ್ಲಿ ತಾಲೂಕಿನ ಯಾವುದೇ ಪಂಚಾಯಿತಿಗೆ ಪಿಡಿಒ ಆಗಿ ಕಳುಹಿಸಿಕೊಟ್ಟರೆ, ಇದ್ದ ಮೂರು-ನಾಲ್ಕು ತಿಂಗಳಲ್ಲಿ ಪಂಚಾಯಿತಿ ತೊರೆದು ಇತರೆ ಕಡೆಗಳಿಗೆ ವರ್ಗಾವಣೆಗೆ ತಮ್ಮ ಕಾಲಹರಣ ಮಾಡುವ ಪರಿಸ್ಥಿತಿ ಇದೆ. ಒಂದು ಪಂಚಾಯಿತಿಯಲ್ಲಿ ಕನಿಷ್ಠ ೧ ವರ್ಷವಾದರೂ ಪಿಡಿಒಗಳು ಸೇವೆ ಸಲ್ಲಿಸುವಂತೆ ಆಗಬೇಕು ಆದರೆ, ಅಧಿಕಾರಿಗಳು ನಿಯೋಜಿಸುವಲ್ಲಿ ಎಡವಟ್ಟು ಮಾಡಿಕೊಂಡು ನಿಯೋಜಿತ ಪಿಡಿಒಗಳು ಯಾವಾಗ ಸಂಪನ್ಮೂಲವಿರುವ ಪಂಚಾಯಿತಿಗೆ ನಿಯೋಜನೆಯಾಗುತ್ತದೆ ಎಂಬುವ ಲೆಕ್ಕಾಚಾರದಲ್ಲಿ ಇರುತ್ತಾರೆ ಎಂದು ಚುನಾಯಿತ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಡೆಪ್ಟೇಶನ್ ಮೇಲೆ ಆಡಳಿತ ವೈಖರಿ: ಸ್ಥಳೀಯವಾಗಿ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಯ ಕೊರತೆ ತಾಲೂಕಿನಲ್ಲಿ ಕಂಡುಬಂದರೆ, ಅಧಿಕಾರಿಗಳು ಡೆಪ್ಟೇಶನ್ ಮೇಲೆ ನಿಯೋಜಿಸುವುದರಿಂದ ಹಾಲಿ ಪಂಚಾಯಿತಿಯ ಮತ್ತು ನಿಯೋಜಿತ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಲು ಕಷ್ಟವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಡೆಪ್ಟೇಶನ್ ಮೇಲೆ ಆಡಳಿತ ವೈಖರಿಯನ್ನು ನಡೆಸುವುದು ಸೂಕ್ತವಲ್ಲವೆಂಬುವ ಮಾತುಗಳು ಕೇಳಿಬರುತ್ತಿದ್ದು, ಕೂಡಲೇ ಒಂದು ಪಂಚಾಯಿತಿಗೆ ಪಿಡಿಒ, ಕಾರ್ಯದರ್ಶಿ ಶಾಶ್ವತವಾಗಿ ಇರುವಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂಬ ಮಾತುಗಳು ಗ್ರಾಪಂ ಚುನಾಯಿತ ಸದಸ್ಯರು ಹೇಳುತ್ತಿದ್ದಾರೆ.
ಗ್ರಾಮಗಳ ಅಭಿವೃದ್ಧಿ ಹಿನ್ನಡೆ: ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಗ್ರಾಪಂಗೆ ಈ ಹಿಂದೆ ಕಾರ್ಯದರ್ಶಿಯಾಗಿ ಭಾರತಿ ಇದ್ದರು, ಅವರ ವರ್ಗಾವಣೆ ನಂತರ, ಕೊಯಿರ ಗ್ರಾಪಂ ಕಾರ್ಯದರ್ಶಿ ಆದೇಪ್ಪ ಅವರನ್ನು ಡೆಪ್ಟೇಶನ್ ಮೇಲೆ ನಿಯೋಜಿಸಲಾಗಿದೆ. ಸುಮಾರು ೨ ವರ್ಷಗಳ ಹಿಂದೆ ಕೊಯಿರ ಗ್ರಾಪಂನಲ್ಲಿ ಪಿಡಿಒ ಮೆಹಬೂಬ್‌ಪಾಶ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ನಂತರ ಅವರ ವರ್ಗಾವಣೆಗೊಂಡ ಮೇಲೆ ಆ ಜಾಗಕ್ಕೆ ಪಿಡಿಒ ಆಗಿ ಬಿ.ಆರ್.ಮಲ್ಲೇಶ್ ಅವರನ್ನು ನೇಮಿಸಲಾಗಿತ್ತು. ನಂತರ ಕೇಲವ ಐದಾರು ತಿಂಗಳ ಒಳಗಾಗಿ ಕನ್ನಮಂಗಲಕ್ಕೆ ಅವರನ್ನು ವರ್ಗಾವಣೆಗೊಳಿಸಿ, ಆ ಜಾಗಕ್ಕೆ ಕುಂದಾಣ ಗ್ರಾಪಂ ಪಿಡಿಒ ಆದರ್ಶ್‌ಕುಮಾರ್ ಅವರನ್ನು ನೇಮಿಸಲಾಯಿತು. ತದನಂತರ ಸುಮಾರು ೨ ತಿಂಗಳಲ್ಲಿ ಮತ್ತೇ ಕನ್ನಮಂಗಲ ಗ್ರಾಪಂಗೆ ಆದರ್ಶ್‌ಕುಮಾರ್ ಅವರನ್ನು ನೇಮಿಸಿ, ಕೊಯಿರಾ ಗ್ರಾಪಂಗೆ ಬಿ.ಆರ್.ಮಲ್ಲೇಶ್ ಅವರನ್ನು ನೇಮಿಸಲಾಗಿದೆ. ಕೇವಲ ಮೂರ್‍ನಾಲ್ಕು ತಿಂಗಳಲ್ಲಿ ವರ್ಗಾವಣೆ ಎಂಬುವುದು ಸಾಮಾನ್ಯವಾಗಿರುವುದು ಗ್ರಾಮಗಳ ಅಭಿವೃದ್ಧಿ ಹಿಂದುಳಿಯಲು ಮುಖ್ಯಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಯಾವುದೇ ಒಂದು ಗ್ರಾಪಂಗೆ ಪಿಡಿಒ, ಕಾರ್ಯದರ್ಶಿ ನಿಯೋಜಿಸುವ ಮುನ್ನಾ ಅವರನ್ನು ಸತತ ಒಂದು-ಎರಡು ವರ್ಷ ಸೇವೆ ಸಲ್ಲಿಸಲು ಸೂಚನೆ ನೀಡಬೇಕು. ಸೇವೆ ಸಲ್ಲಿಸದೆಯೇ ಇತರೆ ಕಡೆಗಳಲ್ಲಿ ವರ್ಗಾವಣೆ ಮಾಡಿದರೆ, ಆ ಗ್ರಾಪಂಗಳ ಅಭಿವೃದ್ಧಿಯಾಗುವುದಾದರೂ ಹೇಗೆ ಎಂಬುವುದು ಚುನಾಯಿತ ಸದಸ್ಯರು ಪ್ರೆಶ್ನಿಸುತ್ತಾರೆ. ಅದಕ್ಕೆ ಅಧ್ಯಕ್ಷರಾಗಿ ಏನು ಉತ್ತರ ನೀಡಬೇಕು. ಸಂಪನ್ಮೂಲ ಕೊರತೆ ಇರುವ ಗ್ರಾಪಂಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡುವ ಆದೇಶ ನೀಡಬೇಕು. – ವಿ.ರಮ್ಯ ಶ್ರೀನಿವಾಸ್ | ಅಧ್ಯಕ್ಷರು, ಕೊಯಿರ ಗ್ರಾಪಂಏನಾದರೂ ಒಂದು ಖಾತೆ ಮಾಡಿಸಲು, ಅಭಿವೃದ್ಧಿ ಕೆಲಸಮಾಡಿಸಬೇಕಾದರೆ, ಪಿಡಿಒ ಇಲ್ಲ ಎಂದು ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಗ್ರಾಪಂಗಳಲ್ಲಿ ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿಗಳ ಕೊರತೆ ಆಗದಂತೆ ಎಚ್ಚರವಹಿಸಬೇಕು. – ಕೆ ಹೊಸೂರು ಶ್ರೀನಿವಾಸ್ | ಮಾಜಿ ಸದಸ್ಯರು, ಕೊಯಿರ ಗ್ರಾಪಂ
Be the first to comment