ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು…!

ವರದಿ: ಹೈದರ್ ಸಾಬ್, ಕುಂದಾಣ

ಜಿಲ್ಲಾ ಸುದ್ದಿಗಳು

CHETAN KENDULI

ದೇವನಹಳ್ಳಿ:

ಹಲವಾರು ದೇಶ ಪ್ರೇಮಿಗಳ ತ್ಯಾಗ-ಬಲಿದಾನದ ದ್ಯೋತಕವಾದ ಭಾರತ ಸ್ವಾತಂತ್ರ್ಯಗೊಂಡು ನಾವೆಲ್ಲರೂ ಸ್ವತಂತ್ರವಾಗಿ ಬದುಕು ನಡೆಸುವಂತೆ ಆಗಿದೆ. ಭಾರತ ದೇಶದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು ಎಂದು ಕೊಯಿರ ಗ್ರಾಪಂ ಅಧ್ಯಕ್ಷೆ ವಿ.ರಮ್ಯ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಕೊಯಿರ ಗ್ರಾಪಂ ಆವರಣದಲ್ಲಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಖಂಡ ಭಾರತ ದೇಶವು ಹಲವು ಧರ್ಮಗಳ ಪ್ರಜಾ ಪ್ರಭುತ್ವ ರಾಷ್ಟ್ರವಾಗಿದೆ. ನಮ್ಮ ಭಾರತ ನಮಗೆ ಹೆಮ್ಮೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹಲವರನ್ನು ಸ್ಮರಿಸುವ ದಿನವಾಗಿದೆ. ಇಂತಹ ಸುಸಂದರ್ಭದಲ್ಲಿ ಇಂದಿನ ಯುವ ಪೀಳಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ದೇಶ ಪ್ರೇಮದ ಕಿಚ್ಚನ್ನು ತುಂಬಬೇಕು. ಗಡಿಕಾಯುವ ಸೈನಿಕನಂತೆ ನಮ್ಮ ಮಕ್ಕಳನ್ನು ಬೆಳೆಸಬೇಕು ಇದು ನಾವು ದೇಶಕ್ಕೆ ನೀಡುವ ಕೊಡುಗೆ ಎಂದು ಭಾವಿಸಬೇಕು ಎಂದು ಹೇಳಿದರು.

ಗ್ರಾಪಂ ಸದಸ್ಯೆ ವೀಣಾ.ಎಚ್.ಎಂ.ರವಿಕುಮಾರ್ ಮಾತನಾಡಿ, ಕೋವಿಡ್ ಮಹಾಮಾರಿಯಿಂದಾಗಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶ ಸ್ವತಂತ್ರಗೊಂಡಾಗಿನಿಂದಲೂ ವರ್ಷ ಕಳೆದಂತೆ ನಮ್ಮ ರಾಷ್ಟ್ರಧ್ವಜ ಮುಗಿಲು ಚುಂಬಿಸುತ್ತಿರುವುದು ನಮ್ಮೆಲ್ಲರ ಕೀರ್ತಿ ಪತಾಕೆಯಾಗಿದೆ ಎಂದರು.

ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಮಮತ ಶಿವಾಜಿ, ಆಂಜಿನಮ್ಮ, ಬಿಂದು, ರಾಜಾರಾವ್, ನಯನ, ಶಿಲ್ಪಪ್ರಭಾಕರ್, ನಳಿನ, ಸುಧಾ, ಮುನೀಂದ್ರ, ಗ್ರಾಪಂ ಕಾರ್ಯದರ್ಶಿ ಆದೇಪ್ಪ, ಸಿಬ್ಬಂದಿ ಬೈರೇಗೌಡ, ಮುನೇಗೌಡ, ಮುನಿರಾಜು, ಇತರರು ಇದ್ದರು.

Be the first to comment

Leave a Reply

Your email address will not be published.


*