ಜಿಲ್ಲಾ ಸುದ್ದಿಗಳು
ಕುಮಟಾ:
ತಾಲೂಕಿನ ತದಡಿಯಿಂದ ಅಘನಾಶಿನಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಾರ್ಜ್ ಸರಿಯಾದ ನಿರ್ವಹಣೆಯಿಲ್ಲದೇ ತುಕ್ಕು ಹಿಡಿಯುತ್ತಿದ್ದು, ಅಪಾಯದಂಚಿನಲ್ಲಿ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲಾಗುತ್ತಿದೆ.
ಪ್ರತಿನಿತ್ಯ ಮೀನುಗಾರಿಕೆ, ವ್ಯಾಪಾರ, ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ಅಘನಾಶಿನಿಯಿಂದ ತದಡಿ ಹಾಗೂ ತದಡಿಯಿಂದ ಅಘನಾಶಿನಿಗೆ ತೆರಳಲು ಈ ಭಾಗದ ಜನ ಇಲ್ಲಿನ ಬಾರ್ಜ್‍ನ್ನೇ ಅವಲಂಭಿಸಿದ್ದಾರೆ. ಪ್ರತಿದಿನ ಸುಮಾರು ಹದಿನಾರು ಬಾರಿ ಅರಬ್ಬೀ ಸಮುದ್ರದ ಅಘನಾಶಿನಿ ತೀರದಲ್ಲಿ ಈ ಬಾರ್ಜ್ ಸಂಚಾರ ನಡೆಸುತ್ತಿದ್ದು, ಸುಮಾರು 300-350 ಜನ ಪ್ರಯಾಣಿಸುತ್ತಾರೆ. ಬಾರ್ಜ್‍ಗೆ ಸರಿಯಾದ ನಿರ್ವಹಣೆಯಿಲ್ಲದ ಪರಿಣಾಮ ತುಕ್ಕು ಹಿಡಿದು ಬೇರಿಂಗ್ ತುಂಡಾಗುವ ಸಾದ್ಯತೆ ಇದೆ. ತಳಭಾಗ ಬಹುತೇಕ ಸವಕಳಿಯಾಗಿ, ಬೈಕ್‍ಗಳನ್ನು ಬಾರ್ಜ್‍ಗೆ ಹತ್ತಿಸುವ ಸಂದರ್ಭದಲ್ಲಿ ಮೆಟ್ಟಿಲುಗಳು ಮುರಿದು ಬೀಳುವ ಸಾಧ್ಯತೆ ಅಧಿಕವಾಗಿದೆ.
ಅಂದಿನ ಶಾಸಕಿ ಶಾರದಾ ಮೋಹನ ಶೆಟ್ಟಿ 2.5 ಕೋಟಿ ವೆಚ್ಚದ ಅನುದಾನದಲ್ಲಿ ಬಾರ್ಜ್ ಸೇವೆ ಒದಗಿಸಿದ್ದರು. ಕೋವಿಡ್ ಕಾರಣದಿಂದ ಸಂಚಾರ ನಿಲ್ಲಿಸಲಾಗಿದೆಯಾದರೂ, ಸರಿಯಾದ ನಿರ್ವಹಣೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಾರ್ಜ್ ಇಂಜಿನ್ ಬಿಡಿಭಾಗಗಳನ್ನು ಹಗ್ಗದಿಂದ ಬಿಗಿಯಾಗಿದ್ದು, ಇಂಜಿನ್‍ನಿಂದ ಅತಿಯಾದ ಶಬ್ದ, ಹೊಗೆ ಕಾಣಿಸಿಕೊಳ್ಳುತ್ತಿದ್ದು, ನಡು ನೀರಿನಲ್ಲಿ ಕೆಟ್ಟು ನಿಂತರೆ ಪ್ರಯಾಣಿಕರಿಗೆ ದೇವರೇ ದಿಕ್ಕು ಎನ್ನುವಂತಾಗಿದೆ.
ಈ ಬಗ್ಗೆ ಒಳನಾಡು ಮತ್ತು ಜಲಸಾರಿಗೆ ಇಲಾಖೆ ತಕ್ಷಣವೇ ಪರಿಶೀಲಿಸಿ, ಬಾರ್ಜ್ ದುರಸ್ತಿಗೆ ಮುಂದಾಗಬೇಕು. ಇಲ್ಲವೇ, ಬಾರ್ಜ್ ಬದಲಾಯಿಸಬೇಕು ಎನ್ನುವುದು ಸ್ಥಳೀಯರ ಹಾಗೂ ಪ್ರಯಾಣಿಕರ ಒತ್ತಾಯವಾಗಿದೆ.
ಬಾರ್ಜ್ ಅಪಾಯಕಾರಿಯಾಗಿದ್ದು, ಜನ ಅಂಗೈಯಲ್ಲಿ ಜೀವ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ತುಕ್ಕು ಹಿಡಿದಿರುವ ಯಂತ್ರ ಹಾಗೂ ಅದರ ಬಿಡಿಭಾಗಗಳು, ನುಜ್ಜುಗುಜ್ಜಾದ ಮೆಟ್ಟಿಲುಗಳನ್ನು ನೋಡಿದಾಗ ಬಾರ್ಜ್ ಸಂಚಾರವೇ ಭಯವೆನಿಸುತ್ತದೆ. ಹೀಗಾಗಿ ಶೀಘ್ರದಲ್ಲೇ ಸಂಬಂಧಿಸಿದ ಇಲಾಖೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಾರ್ಜ್‍ನ ದುರಸ್ಥಿಗೆ ಮುಂದಾಗಬೇಕು.
– ಪ್ರಶಾಂತ ನಾಯ್ಕ ಕರ್ಕಿ (ಪ್ರಯಾಣಿಕ)
Be the first to comment