ವಿವೇಕ ಮತ್ತು ಜ್ಞಾನದ ಕೊಡುಗೆಯೇ ಗುರುವಂದನೆ :ಅಭಿನವ ಗವಿಶ್ರೀ 

ಅಂಬಿಗ್ ನ್ಯೂಸ್

ಜಿಲ್ಲಾ ಸುದ್ದಿಗಳು

ಬಳ್ಳಾರಿ:

CHETAN KENDULI

ಮನೆಗೆ ಬೆಲೆ ಇರುವುದು ಹಣತೆಯ ಬೆಳಕಿನಿಂದ, ಮಾನವನಿಗೆ ಬೆಲೆ ಇರುವುದು ಅವರಲ್ಲಿರುವ ಜ್ಞಾನದಿಂದ. ಇಂತಹ ಜ್ಞಾನ, ವಿವೇಕ ಮತ್ತು ಅರಿವನ್ನು ಧಾರೆ ಎರೆಯುವ ಗುರುವಿನ ಸ್ಥಾನ ಉನ್ನತವಾದದು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ತಮ್ಮ ಆಶೀರ್ವಚದಲ್ಲಿ ಮಂಡಿಸಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ವಿವೇಕ ವೇದಿಕೆ ಬಳ್ಳಾರಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. 

ದೇಹ ಮತ್ತು ಮನಸ್ಸು ಶುದ್ಧವಾಗಿರುವ ಪ್ರತಿಯೊಬ್ಬರು ಗುರುವಿನ ಸ್ಥಾನದಲ್ಲಿರುತ್ತಾರೆ. ಕಪ್ಪು-ಬಿಳುಪಿನ ಬದುಕಿಗೆ ಬಣ್ಣ ನೀಡಿದವನೇ ಗುರು. ಜ್ಞಾನದ ಪರಿಪೂರ್ಣತೆ ಪಡೆಯಲು ಮನುಜನು ಶಿಶುವಾಗಬೇಕು. ಪಡೆದ ಜ್ಞಾನವನ್ನು ಇಂದ್ರಿಯಗಳ ಮೂಲಕ ಪ್ರೇಮಭಾವದಿಂದ ಸಮಾಜಕ್ಕೆ ಸತ್ಕಾರ್ಯ ಮಾಡಿದರೆ ಅದುವೇ ನಿಜವಾದ ಗುರು ದಕ್ಷಿಣೆ. ನ್ನಿಚ್ಛೆಯನ್ನು ನಿನ್ನಿಚ್ಛೆಗೆ ಅರ್ಪಿಸುವ ಭಾವನೆ ಮತ್ತು ಲೋಕಕಲ್ಯಾಣಕ್ಕಾಗಿ ತನ್ನತನವನ್ನು ಅರ್ಪಿಸಿಕೊಳ್ಳುವುದೇ ನಿಜವಾದ ಗುರುವಂದನೆ ಮತ್ತು ದೇವವಂದನೆ. ಸ್ಥೂಲ ತನು ಎಂಬುದನ್ನು ತಂದೆ-ತಾಯಿಯಿಂದ ಮತ್ತು ಜ್ಞಾನ ತನು ಎಂಬುದನ್ನು ಗುರುವಿನಿಂದ ಪಡೆದು ವ್ಯಕ್ತಿಯೊಬ್ಬ ಪರಿಪೂರ್ಣ ಜ್ಞಾನ ಪಡೆಯಬಹುದಾಗಿದೆ. ದೈವದತ್ತವಾದ ಮನುಷ್ಯ ಜನ್ಮದಿಂದ ಜ್ಞಾನ ಸಂಪಾದಿಸಿ ಒಂದಿಲ್ಲೊಂದು ರೂಪದಲ್ಲಿ ಆ ಜ್ಞಾನದ ಜಿಜ್ಞಾಸೆಯನ್ನು ಅರ್ಪಣೆ ಭಾವದೊಂದಿಗೆ ಎಲ್ಲೆಡೆ ಪಸರಿಸುವುದೇ ಗುರುದೀವಿಗೆಯಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಂಜಪ್ಪ ಹೊಸಮನೆ ಮಾತನಾಡಿ, ಆಧುನಿಕ ವಿಜ್ಞಾನವು ಮನುಜ ಸಂಸ್ಕøತಿಯನ್ನು ಮರೆತಿದೆ. ವೇದ, ಉಪನಿಷತ್ತು ಮತ್ತು ಮಂತ್ರಗಳು ನಮ್ಮ ದೇಶದ ಆವಿಷ್ಕಾರಗಳು, ಇವುಗಳ ನಿರಂತರ ಪಠಣದಿಂದ ಮನಸ್ಸು ಹಾಗೂ ಬುದ್ಧಿ ವಿಕಸನವಾಗುತ್ತದೆ. ಪ್ರಪಂಚದಲ್ಲಿ ನಡೆಯುವ ಪ್ರತಿ ಸಂಶೋಧನೆ ಮತ್ತು ಆವಿಷ್ಕಾರದ ಹಿಂದೆ ಭಾರತೀಯ ಋಷಿ-ಮುನಿಗಳು ಪ್ರತಿಪಾದಿಸಿದ್ದ ಗುರುಕುಲ ಶಿಕ್ಷಣ ಮಾದರಿ ಕಾರಣವಾಗಿದೆ. ಆಧುನಿಕ ವಿಜ್ಞಾನದಿಂದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಾಂತಿ ಭಂಗ ಉಂಟಾಗುತ್ತದೆ. ಮನಶಾಂತಿ ಪಡೆಯಲು ವಿದೇಶಿಗರು ವಿಜ್ಞಾನ ಬಿಟ್ಟು ಭಾರತೀಯ ಸನ್ಯಾಸಿಗಳ, ಸ್ವಾಮೀಜಿಗಳ ಮಠಗಳಿಗೆ ಆಗಮಿಸುತ್ತಾರೆ ಎಂದರು.

ವಿಶ್ವವಿದ್ಯಾಲಯಗಳು ಸೂರ್ಯನಿದ್ದಂತೆ, ಯಾವುದೇ ಜಾತಿ-ಮತ ಎಂಬ ಭೇದ-ಭಾವವಿಲ್ಲದೆ ಜ್ಞಾನದಾಹಿಗಳಿಗೆ ಶಿಕ್ಷಣ ಧಾರೆ ಎರೆಯುವ ಶಕ್ತಿ ಕೇಂದ್ರಗಳು. ಭಾರತೀಯ ಚಿಂತನೆ ಎಂಬುದು ವಿಶ್ವದ ಎಲ್ಲ ಸಂಶೋಧನೆಗಳಲ್ಲಿ ಎದ್ದು ಕಾಣುತ್ತದೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸಕಲ ಎಂಬ ಲೋಕೋಪಯೋಗಿ ವಿಚಾರಧಾರೆಯಿಂದ ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ಗುರು-ಶಿಷ್ಯ ಪರಂಪರೆ ಕಾಣಬಹುದು ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪದ್ಮಾ ವಿಠ್ಠಲ್ ಅವರು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ ಆಲಗೂರ ಮಾತನಾಡಿ, ವಿದ್ಯಾಗುರುವಿನ ಸ್ಥಾನದಲ್ಲಿರುವ ನಾವೆಲ್ಲರೂ ಜಗತ್ತಿಗೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಕೆಲಸ ಮಾಡಬೇಕು. ನೈತಿಕ ಮೌಲ್ಯ, ದೇಶಪ್ರೇಮ, ಸತ್ಕಾರ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯ ನಮ್ಮದಾಗಬೇಕು. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ಗುರು ಶಿಷ್ಯರನ್ನು ಸ್ಠಷ್ಟಿಸುತ್ತಾರೆ. ಹೀಗಾಗಿ ಗುರುಗಳೆಂದರೆ ಆಧುನಿಕ ಬ್ರಹ್ಮನಿದ್ದಂತೆ. ಕಣ್ಣು ಮುಂದೆ ಗುರಿ, ಬೆನ್ನ ಹಿಂದೆ ಗುರುವಿದ್ದರೆ ಜಗತ್ತೇ ಗೆಲ್ಲಬಹುದು ಎಂದು ಪ್ರತಿಪಾದಿಸಿದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್ ಅವರು ಸ್ವಾಗತ ನುಡಿಗಳನ್ನಾಡಿ, ವಿಶ್ವವಿದ್ಯಾಲಯದ ಮುಖ್ಯ ಆವರಣ ಮತ್ತು ಸ್ನಾತಕೋತ್ತರ ಕೇಂದ್ರಗಳಲ್ಲಿ ನಡೆದಿರುವ ಸುಮಾರು 75 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.

ಕುಲಸಚಿವರು (ಮೌಲ್ಯಮಾಪನ) ಪ್ರೊ. ಶಶಿಕಾಂತ್ ಉಡಿಕೇರಿ ವಂದಿಸಿದರು. ವಿತ್ತಾಧಿಕಾರಿಗಳಾದ ಡಾ. ಕೆ ಸಿ ಪ್ರಶಾಂತ್, ವಿವೇಕ ವೇದಿಕೆ ಬಳ್ಳಾರಿಯ ಟಿ. ಪ್ರಸನ್ನ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎಲ್ಲ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವೇಕ ವೇದಿಕೆ ಬಳ್ಳಾರಿಯ ಪದಾಧಿಕಾರಿಗಳು, ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*