ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಅರಣ್ಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ತಿಳಿಸಿದರು.
ತಾಲೂಕಿನ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿಂದು ಜಿಲ್ಲಾ ಪಂಚಾಯತ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಜೀವವೈವಿದ್ಯ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜೀವ ಸಂಕುಲದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಇದರಲ್ಲಿ ಅರಣ್ಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ನರೇಗಾದಡಿ ಅಗ್ರಿ ಪಾರೆಸ್ಟ ನಿರ್ಮಾಣ ಮಾಡಿ ಉಚಿತವಾಗಿ ಸಸಿ ವಿತರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಮುಚಖಂಡಿ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಕೆರೆ ಅಭಿವೃಧ್ದಿ, ಸುತ್ತಲೂ ಗಾರ್ಡನ್ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಇದಕ್ಕೆ ದೇವಸ್ಥಾನದ ಕಮಿಟಿಯ ಸಹಕಾರವು ಸಹ ಅಗತ್ಯವಾಗಿದೆ. ಜೀವ ಸಂಕುಲವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ.ಬಿ.ಜಿ.ಜಡಿಮಠ ಮಾತನಾಡಿ ಜೀವವೈವಿದ್ಯತೆ, ಜೀವ ಜಗತ್ತು, ಜೀವರಾಶಿ ಒಳಗೊಂಡ ಪರಿಸರ ಇರಬೇಕು. ಪರಿಸರ ನಮಗೆ ಜೀವ ಜಗತ್ತು ಇದ್ದಹಾಗೆ. ಹಿಂದೆ ಇದ್ದಂತಹ ಜೀವರಾಶಿ ಈಗ ಕಾಣುತ್ತಿಲ್ಲ. ಪರಿಸರದಲ್ಲಿ 30 ಮಿಲಿಯನ್ ಜೀವರಾಶಿಗಳಿದ್ದು, ಅದರಲ್ಲಿ 1.8 ಮಿಲಿಯನ್ ಪತ್ತೆ ಹಚ್ಚಲಾಗಿದೆ. 1.7 ಮಿಲಿಯನ್ ಪ್ರಾಣಿಗಳು ಬರುತ್ತವೆ. ಅದರಲ್ಲಿ ಕೀಟ ಜಾತಿಗಳು ಸೇರಿಕೊಂಡಿವೆ. 0.25 ಮಿಲಿಯನ್ ಹೂ ಬಿಡುವ ಸಸ್ಯಗಳಿರುವುದಾಗಿ ತಿಳಿಸಿದರು.
ಪರಿಸರ, ಜೀವರಾಶಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅವುಗಳ ಉಳಿವಿಗೆ ನಾವೆಲ್ಲರೂ ಶ್ರಮಿಸುವ ಅಗತ್ಯವಿದೆ. ಮಾನವನ ಅತೀಯಾದ ಚಟಿವಟಿಕೆಗಳಿಂದ ಪರಿಸರದಲ್ಲಿ ಏರುಪೇರು ಆಗಿದ್ದು, ನಮ್ಮ ನಮ್ಮ ಕರ್ತವ್ಯ ಮಾಡಿದರೆ ಮುಂದಿನ ಜನಕ್ಕೆ ಒಳ್ಳೆಯ ಪರಿಸರ, ನೀರು ನೀಡಲು ಸಾಧ್ಯವಾಗುತ್ತದೆ. ಅರಣ್ಯ ಮನುಷ್ಯನ ಎಲ್ಲ ಆಶೆಗಳನ್ನು ಪೂರೈಸುತ್ತಿದ್ದು, ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು. ಇನ್ನೋರ್ವ ಉಪನ್ಯಾಸಕರಾದ ಲಿಂಗಾನಂದ ಗವಿಮಠ ಅವರು ಜೀವವೈವಿದ್ಯತೆ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಜೀವವೈವಿದ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಇಬ್ಬರು ರೈತರಿಗೆ ಜೀವವೈವಿದ್ಯ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಜಿ.ಪಂ ಸಿಇಓ ಟಿ.ಭೂಬಾಲನ್ ವಿತರಿಸಿದರು.ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಸಂಕಿನಮಠ, ಸಹಾಯಕ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ಪಾಟೀಲ, ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಕಮಿಟಿ ಮುಖ್ಯಸ್ಥ ಪ್ರಭು ಸರಗಣಾಚಾರಿ, ಬಾಗಲಕೋಟೆ ತಾ.ಪಂ ಇಓ ಶಿವಾನಂದ ಕಲ್ಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಹಿರೇಮಠ, ಬೀಳಗಿ ವಲಯ ಅರಣ್ಯ ಅಧಿಕಾರಿ ಪ್ರದೀಪ ರಾಠೋಡ, ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನ ಬಯೋಡಿಸೆಲ್ ವಿಭಾಗದ ಭಾರತಿ ಎಸ್, ಜಿ.ಬಿ.ಮ್ಯಾಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment