SSLC : ಶೇ.100 ರಷ್ಟು ಫಲಿತಾಂಶ:ಮುಚಖಂಡಿಯ ಗಂಗಮ್ಮ ಹುಡೇದ ವಿದ್ಯಾರ್ಥಿಗೆ 625ಕ್ಕೆ 625 ಅಂಕ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಪಸಕ್ತ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶವಾಗಿದ್ದು, ತಾಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಹೈಸ್ಕೂಲಿನ ವಿದ್ಯಾರ್ಥಿ ಗಂಗಮ್ಮ ಬಸಪ್ಪ ಹುಡೇದ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 14850 ಬಾಲಕರು ಮತ್ತು 13857 ಬಾಲಕಿಯರು ಸೇರಿ ಒಟ್ಟು 28707 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಪರೀಕ್ಷೆಗೆ ಕುಳಿದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. 14065 ಸರಕಾರಿ ಶಾಲೆಯ ವಿದ್ಯಾರ್ಥಿಗಳು, 7581 ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ ಶಾಲೆಯ 7061 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 5088 ವಿದ್ಯಾರ್ಥಿಗಳು ಎ+ ಗ್ರೇಡ್ ಪಡೆದುಕೊಂಡರೆ, ಎ ಗ್ರೇಡ್ 9082, ಬಿ ಗ್ರೇಡ್ 10112 ಹಾಗೂ ಸಿ ಗ್ರೇಡ್ 4425 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಜಿಲ್ಲೆಯ ಬಾದಾಮಿ ತಾಲೂಕಿನ ಎಲ್ಲ 73 ಶಾಲೆಗಳು ಹಾಗೂ ಹುನಗುಂದ ತಾಲೂಕಿನ ಎಲ್ಲ 79 ಶಾಲೆಗಳ ಮಕ್ಕಳು ಎ ಗ್ರೇಡ್‍ನಲ್ಲಿ ತೇರ್ಗಡೆ ಹೊಂದಿದ್ದಾರೆ. ಬಾಗಲಕೋಟೆ ತಾಲೂಕಿನಲ್ಲಿ 73 ಶಾಲೆಗಳು ಎ ಗ್ರೇಡ್ ಮತ್ತು 3 ಬಿ ಗ್ರೇಡ್ ಪಡೆದರೆ, ಬೀಳಗಿ 45 ಶಾಲೆಗಳು ಎ ಗ್ರೇಡ್, 1 ಬಿ ಗ್ರೇಡ್, ಜಮಖಂಡಿ 79 ಶಾಲೆಗಳು ಎ ಗ್ರೇಡ್, 24 ಶಾಲೆಗಳು ಬಿ ಗ್ರೇಡ್, 2 ಸಿ ಗ್ರೇಡ್ ಹಾಗೂ ಮುಧೋಳ 54 ಶಾಲೆಗಳು ಎ ಗ್ರೇಡ್, 19 ಬಿ ಗ್ರೇಡ್ ಪಡೆದುಕೊಂಡಿವೆ.

ಅದೇ ರೀತಿ ಪರೀಕ್ಷೆಗೆ ಕುಳಿದ 539 ಖಾಸಗಿ ವಿದ್ಯಾರ್ಥಿಗಳು, 227 ಖಾಸಗಿ ಪುನರಾವರ್ತಿತ, 3224 ರೆಗ್ಯೂಲರ್ ಪುನರಾವರ್ತಿತ, 3 ಹಳೆ ಪಠ್ಯಕ್ರಮದ ರೆಗ್ಯೂಲರ್ ಹಾಗೂ ಓರ್ವ ಹಳೆಯ ಪಠ್ಯಕ್ರಮದ ಖಾಸಗಿ ವಿದ್ಯಾರ್ಥಿಗಳು ಸಹ ತೇರ್ಗಡೆಹೊಂದಿದ್ದಾರೆ ಎಂದು ಡಿಡಿಪಿಐ ಎಸ್.ಎಸ್.ಬಿರಾದಾರ ಮತ್ತು ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*