ಯುನಿಟ್ 3 ಕಾಮಗಾರಿಗಳಿಗೆ ಶಾಸಕ ಚರಂತಿಮಠ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಬಾಗಲಕೋಟೆ ನವನಗರದ ಯುನಿಟ್-3ರ ನಿವೇಶನದ ಗಡಿ ಹಾಗೂ ರಸ್ತೆಗಳ ಡಿಮಾರ್ಕೆಶನ್ ಮಾಡುವ ಒಟ್ಟು 3.30 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಚಾಲನೆ ನೀಡಿದರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ನವನಗರದ ಮೆಡಿಕಲ್ ಕಾಲೇಜ ಮುಖ್ಯ ದ್ವಾರದಲ್ಲಿಂದು ಯುನಿಟ್-3ರ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಅವರು ನವನಗರದ ಯುನಿಟ್ 3 ರನ್ನು ಪ್ರಾರಂಭಿಸುವುದು ಬಹಳ ದಿನಗಳ ಕನಸಾಗಿತ್ತು. ಈಗ ನನಸಾಗುತ್ತಿದೆ. ಬೆಂಗಳೂರಿನ ಬಾಲಾಜಿ ಎಂಟರ್‍ಪ್ರೈಸಸ್ ಟೆಂಡರ್ ನೀಡಲಾಗಿದೆ ಎಂದು ತಿಳಿಸಿದರು.

ನವನಗರದ ಯುನಿಟ್-3ರ 1640ಎ-31 ಗುಂ ಜಮೀನು ಸ್ವಚ್ಚ ಗೊಳಿಸುವುದು, 23640 ನೀವೇಶನಗಳನ್ನು ಹಾಗೂ ಒಟ್ಟು 196 ಕಿ.ಮೀ ರಸ್ತೆಗಳನ್ನು ಡಿಮಾರ್ಕೆಶನ ಮಾಡಲು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರ ಹೆಸರಿನಲ್ಲಿ ಕಾಪ್ಲೆಂಕ್ಸಗಳನ್ನು ನಿರ್ಮಾಣ ಮಾಡಿ ಅವುಗಳನ್ನು ನಗರಸಭೆ ಮೂಲಕ ವ್ಯಾಪಾರಸ್ಥರಿಗೆ ಬಾಡಿಗೆ ನೀಡಲು ನಿರ್ಧರಿಸಲಾಗಿದೆ. ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ಯುನಿಟ್-3ರ ನಕ್ಷೆಗೆ ಸರ್ಕಾರದ ನಗರ ಯೋಜನಾ ಪ್ರಾಧಿಕಾರದಿಂದ ಹಾಗೂ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆಯಾಗಿದ್ದು, ಯುನಿಟ್-3ರಲ್ಲಿ ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್, ಆಯ್, ಜೆ ಹಾಗೂ ಕೆ ಎಂಬ ಸೆಕ್ಟರ್‍ಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಎಪ್.ಆರ್.ಎಲ್. 523.00 ಮೀ ನಿಂದ 525.00ವ ಮೀ ವರೆಗೆ ಇರುವ ಮುಳುಗಡೆ ಪ್ರದೇಶವನ್ನು ಪ್ರಸ್ತುತ 527.00 ಮೀ ವರೆಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಡುತ್ತೇನೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ಮೋಹನ ನಾಡಗೌಡ, ಕುಮಾರ ಯಳ್ಳಿಗುತ್ತಿ, ಮಾಜಿ ಅಧ್ಯಕ್ಷ ಜಿ.ಎನ್ ಪಾಟೀಲ ಮತ್ತು ಎಸ್.ವಿ.ಕೋಟಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಟಿಡಿಎ ಮುಖ್ಯ ಅಭಿಯಂತರು ಮನ್ಮಥಯ್ಯ ಸ್ವಾಮಿ, ಬಿಟಿಡಿಎ ಆಯುಕ್ತರಾದ ಗಣಪತಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*