ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾದ ಹಾನಿಗೊಳಗಾದ ಮನೆ, ಬೆಳೆ ಹಾಗೂ ಮೂಲಭೂತ ಸೌಲಭ್ಯಗಳ ಹಾನಿಯ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ ತುರ್ತಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ನೆರೆಹಾವಳಿ ಪರಿಹಾರ ಮತ್ತು ಕೋವಿಡ್-19 ನಿರ್ವಹಣೆ ಕುರಿತು ಜರುಗಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ 46 ವಿವಿಧ ಜಾನುವಾರುಗಳು ಮೃತಪಟ್ಟಿದ್ದು, 6.97 ಲಕ್ಷ ರೂ.ಗಳ ಪರಿಹಾರಧನ ವಿತರಣೆಗೆ ಕ್ರಮವಹಿಸಬೇಕು. ಅಲ್ಲದೇ ಹಾನಿ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ 160 ಗ್ರಾಮಗಳಲ್ಲಿನ 24405 ಹೆಕ್ಟೆರ್ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ 78 ಗ್ರಾಮಗಳ 875.60 ಹೆಕ್ಟೇರ್ ಪ್ರದೇಶ ಜಲಾವೃತಗೊಂಡಿದ್ದು, ಸಮೀಕ್ಷೆಗೆ ರಚಿಸಲಾದ ತಂಡದವರು ಪ್ರಾಮಾಣಿಕವಾಗಿ ಸಮೀಕ್ಷೆ ಕಾರ್ಯಕೈಗೊಂದು ಅಂದಾಜು ಹಾನಿಯ ವರದಿಯನ್ನು ಸಲ್ಲಿಸಲು ತಿಳಿಸಿದರು. ಅಲ್ಲದೇ 70 ಕಿ.ಮೀ ರಾಜ್ಯ ಹೆದ್ದಾರಿ, 196 ಎಂಡಿಆರ್, 699 ಕಿ.ಮೀ ಗ್ರಾಮೀಣ ರಸ್ತೆ ಹಾಳಾಗಿದ್ದು, ಅಂದಾಜು ವೆಚ್ಚದ ವರದಿ ಸಲ್ಲಿಸಲು ತಿಳಿಸಿದರು.
ಹೆಸ್ಕಾಂ ಇಲಾಖೆಯಿಂದ 6247 ವಿದ್ಯುತ್ ಕಂಬ, 1859 ಟ್ರಾನ್ಸ್‍ಫಾರ್ಮರ್ ಹಾಗೂ 17 ವಿದ್ಯುತ್ ಮಾರ್ಗ ಸೇರಿ ಒಟ್ಟು 23.83 ಕೋಟಿ ರೂ.ಗಳಷ್ಟು ಹಾನಿಯಾಗಿರುವುದಾಗಿ ಹೆಸ್ಕಾಂನ ಮುಖ್ಯ ಅಭಿಯಂತರ ಹಿರೇಮಠ ಸಭೆಗೆ ತಿಳಿಸಿದಾದರು. ಪ್ರವಾದಿಂದ ಹಾಳಾಗಿ ಉಳಿದ ಬೆಳೆಯನ್ನಾದರೂ ಉಳಿಸಕೊಳ್ಳಲು ವಿದ್ಯುತ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಟ್ರಾನ್ಸ್‍ಫಾರ್ ತುರ್ತಾಗಿ ದುರಸ್ಥಿಗೊಳಿಸಲು ಕ್ರಮವಹಿಸುವಂತೆ ಉಮೇಶ ಕತ್ತಿ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಕೃಷ್ಣಾ ನದಿಗೆ 8500, ಘಟಪ್ರಭಾ ನದಿಗೆ 26873 ಹಾಗೂ ಮಲಪ್ರಭಾ ನದಿಗೆ 1394 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ 86722 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಪ್ರವಾಹದಿಂದ 53 ಗ್ರಾಮಗಳು ಬಾಧಿಗೊಂಡಿದ್ದು, 10069 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪ್ರಾರಂಭದಲ್ಲಿ 67 ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಸದ್ಯ 12 ಮಾತ್ರ ಚಾಲ್ತಿಯಲ್ಲಿರುತ್ತವೆ. ಜಾನುವಾರುವಾರುಗಳಿಗೆ ಇಲ್ಲಿಯವರೆಗೆ 4699 ಟನ್ ಮೇವು ವಿತರಿಸಿರುವುದಾಗಿ ತಿಳಿಸಿದರು.
ಹಾನಿ ಸಮೀಕ್ಷೆಗೆ ತಂಡಗಳನ್ನು ರಚಿಸಲಾಗಿದೆ. ಕೆಲವೊಂದು ಜಮೀನುಗಳಲ್ಲಿ ನೀರು ಹಾಗೂ ಕೆಸರು ಇರುವದರಿಂದ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಜಲಾಶಯಗಳಲ್ಲಿ ವೈಜ್ಞಾನಿಕವಾಗಿ ನೀರು ಬಿಡುಗಡೆಯಾದಲ್ಲಿ ಪ್ರವಾಹ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ಥರಿಗೆ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಲ್ಲಿನ ಒದಗಿಸಲಾದ ಸೌಲಭ್ಯಗಳನ್ನು ಕಂಡು ಶಾಸಕರಾದ ಸಿದ್ದು ಸವದಿ ಮತ್ತು ಆನಂದ ನ್ಯಾಮಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಮಳೆಯಾಗಿರುವುದಾಗಿ ತಿಳಿಸಿದರು. 2020 ರಲ್ಲಿ ಜುಲೈ ಮಾಹೆಯಲ್ಲಿ 139.1 ಮಿಮಿ ಮಳೆಯಾದರೆ 2021 ರಲ್ಲಿ 116.7 ಮಿ.ಮಿ ಮಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಆಗಸ್ಟ ಮತ್ತು ಸೆಪ್ಟೆಂಬರನಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದಾಗಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ಅವರು ಕೋವಿಡ್ ನಿರ್ವಹಣೆಗೆ ಕೈಗೊಂಡ ಕ್ರಮ, ಲಸಿಕೆ ಪ್ರಗತಿಯ ವರದಿ ಹಾಗೂ 3ನೇ ಅಲೆ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ಆನಂದ ನ್ಯಾಮಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.
Be the first to comment