ಕೋವಿಡ್-19 ಮೂರನೇ ಅಲೆ ನಿಯಂತ್ರಣಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಎನ್.ನಾಗರಾಜು

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಕೋವಿಡ್-19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್-19 ಮೂರನೇ ಅಲೆ ಎದುರಾಗದಂತೆ ತಡೆಯಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕೋವಿಡ್-19 ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಎನ್.ನಾಗರಾಜು ತಿಳಿಸಿದರು.ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ವೈರಾಣು ರೋಗ ಹರಡದಂತೆ ಮುಂಜಾಗ್ರತಾ ಕ್ರಮ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್-19 ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಅಗತ್ಯ ನಿರ್ದೇಶನಗಳನ್ನು ನೀಡಿದ್ದು, ಅಧಿಕಾರಿಗಳು ತಪ್ಪದೇ ಪಾಲಿಸಬೇಕು ಹಾಗೂ ಸಾರ್ವಜನಿಕರಿಂದ ಕೋವಿಡ್ ನಿಯಮಗಳು ಉಲ್ಲಂಘನೆಯಾಗದಂತೆ ಕ್ರಮ ವಹಿಸಬೇಕು. ಜನಸಂದಣಿ ಸ್ಥಳಗಳಾದ ಸಂತೆಗಳು, ಮದುವೆ, ಮಾರುಕಟ್ಟೆಗಳು,ಜಾತ್ರೆಗಳು, ಬ್ರಹ್ಮ ರಥೋತ್ಸವ, ಕರಗ ಮಹೋತ್ಸವ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸಭೆ ಕರೆದು ಆಯಾ ತಾಲ್ಲೂಕುಗಳಲ್ಲಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಹಾಗೂ ಇತರೆ ಧರ್ಮದ ಪ್ರಾರ್ಥನಾ ಮಂದಿರದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಬೇಕು ಹಾಗೂ ದೇವಾಲಯಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಕೋವಿಡ್ ಸೋಂಕಿನ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸದಂತೆ ಅರಿವು ಮೂಡಿಸುವುದು ಅತ್ಯವಶ್ಯಕ ಎಂದರಲ್ಲದೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಇದುವರೆಗೂ 4.95 ಲಕ್ಷ ಲಸಿಕೆ ನೀಡಲಾಗಿದ್ದು, ಜಿಲ್ಲೆಗೆ ಹೆಚ್ಚಿನ ಕೋವಿಡ್ ಲಸಿಕೆಯನ್ನು ಪೂರೈಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

CHETAN KENDULI

ಇತ್ತೀಚೆಗೆ ನೆಲಮಂಗಲ ತಾಲೂಕಿನಲ್ಲಿ ಕೋವಿಡ್ ಸೋಂಕು ದೃಢಪಡುತ್ತಿರುವ ಪ್ರಮಾಣ ಶೇ. 3.1 ಅನ್ನು ತಲುಪಿದ್ದು, ತಾಲ್ಲೂಕು ವೈದ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಕಂಟೈನ್‌ಮೆಂಟ್ ವಲಯ, ಸೆಮಿ ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಬೇಕು. ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದ ಅವರು, ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕೋವಿಡ್ ಮೂರನೇ ಅಲೆ ಬರದಂತೆ ತಡೆಯಲು ಜಿಲ್ಲೆಯಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೈಗಾರಿಕಾ ಕೇಂದ್ರಗಳು ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳ ಮಾಡಲಾಗುವುದು ಎಂದರಲ್ಲದೆ, ಪ್ರಸ್ತುತ ಜಿಲ್ಲೆಯಲ್ಲಿ 392 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ 1.81 ರಷ್ಟು ಪಾಸಿಟಿವಿಟಿ ದರವಿದೆ. ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಸೋಂಕು ಉಲ್ಬಣಗೊಂಡರೆ ಕಂಟೈನ್‌ಮೆಂಟ್ ಹಾಗೂ ಸೆಮಿ ಕಂಟೈನ್‌ಮೆಂಟ್ ವಲಯಗಳಾಗಿ ಗುರುತಿಸಲಾಗುವುದು ಎಂದು ತಿಳಿಸಿದರು.ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ, 30 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿನ್ನಮಂಗಲ ಗ್ರಾಮದಲ್ಲಿ ಇತ್ತೀಚೆಗೆ, ಮಳೆಯಿಂದಾಗಿ ಮನೆ ಗೋಡೆ ಕುಸಿದು, ಮೃತಪಟ್ಟ ಇಬ್ಬರ ಕುಟುಂಬದ ಸದಸ್ಯ ಫಲಾನುಭವಿಗೆ ತಲಾ ರೂ.5ಲಕ್ಷ ಪರಿಹಾರದ ಚೆಕ್ಕನ್ನು ಜಿಲ್ಲಾ ಕೋವಿಡ್-19 ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಎನ್.ನಾಗರಾಜು(ಎಂ.ಟಿ.ಬಿ.)ವಿತರಿಸಿದರು.ಈ ವೇಳೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ್, ಜಿಪಂ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ, ತಹಶೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*