ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇಶದಲ್ಲಿ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ ಎಂದು ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳ ನಾಯಕರು, ಕಾಂಗ್ರೆಸ್ ಈ ದೇಶದಲ್ಲಿ ಸಂವಿಧಾನ ಉಳಿಸಿರುವುದರಿಂದ ಇಂದು ಬಡಕುಟುಂಬದಲ್ಲಿ ಹುಟ್ಟಿದ ನರೇಂದ್ರಮೋದಿ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಜಿ ಶಾಸಕ ಕೆ.ವೆಂಕಟಸ್ವಾಮಿ ಹೇಳಿದರು.ಚನ್ನರಾಯಪಟ್ಟಣ ಹೋಬಳಿ ಜೊನ್ನಹಳ್ಳಿ ಗ್ರಾಮದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಶಿವಪ್ರಸಾದ್ ಸೇರಿದಂತೆ ಹಲವು ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ಪಕ್ಷವು ಧರ್ಮಗಳನ್ನು ಇಬ್ಭಾಗ ಮಾಡಿ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅನೇಕ ಸುಧಾರಣಾ ನೀತಿಗಳನ್ನು ಜಾರಿಗೆ ತಂದಿರುವುದರ ಪರಿಣಾಮವಾಗಿ ಇಂದು ಬಿಜೆಪಿ ದೇಶದಲ್ಲಿ ಆಡಳಿತ ನಡೆಸುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರು, ಕಾರ್ಮಿಕರು, ಸಂಕಷ್ಟಕ್ಕೆ ಸಿಲುಕಿದ್ದರೂ ಚುನಾವಣಾ ಪ್ರಚಾರಗಳಲ್ಲಿ 370ನೇ ವಿಧಿ ರದ್ದು ಮಾಡಿರುವುದು, ಪುಲ್ವಾಮಾ, ಬಾಲಾಕೋಟ್‍ನಂತಹ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೂ ತಳ ಸಮುದಾಯಗಳ ಜನತೆ ಹಾಗೂ ದೇಶದ ಯುವಜನರ ಅಭಿವೃದ್ಧಿ ಸಾಧ್ಯವಿಲ್ಲ. ಸತ್ಯಾಂಶವನ್ನು ಜನರಿಗೆ ತಿಳಿಸುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಲಕ್ಷ್ಮೀನಾರಾಯಣಪ್ಪ ಮಾತನಾಡಿ, ದೇಶದಲ್ಲಿ ಬಡತನ ತೊಲಗದೇ ದೇಶದ ಉದ್ಧಾರ ಸಾಧ್ಯವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಯುವಜನರಿಗೆ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಅದು ಹುಸಿಯಾಗಿದ್ದು, ಅವರು ಜಾರಿಗೆ ತಂದ ಜಿಎಸ್‍ಟಿ ಹಾಗೂ ನೋಟು ಅಮಾನ್ಯೀಕರಣ ನೀತಿಯ ಪರಿಣಾಮ ದೇಶ ಅಧೋಗತಿಗಿಳಿದಿದೆ ಎಂದರು.ಕಾಂಗ್ರೆಸ್ ಮುಖಂಡ ಚನ್ನಹಳ್ಳಿರಾಜಣ್ಣ ಮಾತನಾಡಿ, ಬಿಜೆಪಿಯವರು ಯೋಜನೆಗಳನ್ನು ನೀಡುವ ಬದಲು ಭಾವನಾತ್ಮಕ ವಿಚಾರಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್ ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಇಂದಿರಾಗಾಂಧಿ ಬೇರ್ಪಡಿಸಿದ್ದರು.
ವಾಜಪೇಯಿಯವರು ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಬಣ್ಣಿಸಿದ್ದರು. ಇಂತಹ ಇತಿಹಾಸವನ್ನು ತಿರುಚುವುದೇ ಬಿಜೆಪಿಗರ ಕೆಲಸ. ದೇಶವನ್ನು ನಾವಲ್ಲದೇ ಬೇರೆ ಯಾರೂ ಉದ್ಧಾರ ಮಾಡುವುದಿಲ್ಲ ಎನ್ನುವ ಉದ್ಧಟತನದಿಂದ ಮೆರೆಯುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ಬಿಜೆಪಿಯ ದ್ವೇಷ, ಸುಳ್ಳು ರಾಜಕಾರಣದ ವಿರುದ್ದ ಹೋರಾಡುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ. ಅಧಿಕಾರದ ವ್ಯಾಮೋಹವಿಲ್ಲದೇ ತ್ಯಾಗ, ಬಲಿದಾನಗಳ ಇತಿಹಾಸವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ದೇಶದ ಐಕ್ಯತೆ,ಸಮಗ್ರತೆ, ಶಾಂತಿಗಾಗಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಬಲಿದಾನವಾಗಿದೆ. ಆದರೆ, ಬಿಜೆಪಿ ಇಂತಹ ತ್ಯಾಗವನ್ನು ಯುವಪೀಳಿಗೆಯಿಂದ ಮರೆಮಾಚಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಯುವಜನರಿಗೆ ತಿಳಿಸುವಂತಹ ಕೆಲಸ ಮಾಡಬೇಕು ಎಂದರು.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಮೋದಿ ಸರ್ಕಾರದ ಸುಳ್ಳು ಭರವಸೆಯನ್ನು ದೇಶದ ಜನತೆ ಒಪ್ಪಲು ಸಿದ್ಧರಿಲ್ಲ. ಸುಳ್ಳು ಹಾಗೂ ಭ್ರಮೆಯಲ್ಲಿ ಜನತೆಯನ್ನ ವಂಚಿಸುವ ಹುನ್ನಾರದಲ್ಲಿ ತೊಡಗಿದ್ದಾರೆ. ಚುನಾವಣೆಗೂ ಮುಂಚೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿ ಅಧಿಕಾರ ಪಡೆದ ಮೋದಿ, ಯಾರ ಖಾತೆಗೆ 5 ರೂ. ಹಾಕಿಲ್ಲ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಗನ್ನಾಥ್, ಎಸ್.ಆರ್.ರವಿಕುಮಾರ್, ಚಿನ್ನಪ್ಪ, ಬಿ.ಚೇತನ್ ಗೌಡ, ಕೆ.ಲಕ್ಷ್ಮಣಗೌಡ, ಕೆ.ಶ್ರೀನಿವಾಸಗೌಡ, ದಿನ್ನೂರು ವೆಂಕಟೇಶ್, ಶಂಕರಪ್ಪ,ಚಂದ್ರಶೇಖರ್, ಇದ್ದರು.
Be the first to comment