ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ವಯೋನಿವೃತ್ತಿ ಹೊಂದಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರನ್ನು ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಗಳ ವತಿಯಿಂದ ಶನಿವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ನ್ಯಾಯಾಲಯದ ಸಂಕಿರ್ಣದಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಕಲ್ಪನಾ ಕುಲಕರ್ಣಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಕಲ್ಪಣಾ ಕುಲಕರ್ಣಿಯವರು ತಮ್ಮ ಸೇವಾ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದು ತೃಪ್ತಿ ನೀಡಿದೆ. ನ್ಯಾಯಾಲಯದ ಎಲ್ಲ ಸಹದ್ಯೋಗಿಗಳ ಸಹಕಾರದಿಂದ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಲು ಸಾದ್ಯವಾಯಿತು. ತಮಗೆ ದೊರೆತ ಹುದ್ದೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಹೈಕೋರ್ಟನಿಂದ ಹೊರಡಿಸಿದ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಶೇ50 ರಷ್ಟು ಸಿಬ್ಬಂದಿಗಳೊಂದಿಗೆ ನ್ಯಾಯಾಲಯದ ಕಾರ್ಯಗಳನ್ನು ನಿರ್ವಹಿಸಲು ಸಹಕಾರ ನೀಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಆಡಳಿತ ಭಾಗವಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇನೆ. ಅನ್ಯತಾ ತಪ್ಪು ಭಾವಿಸಬಾರದು. ಎಲ್ಲರ ಸಹಕಾರದಿಂದಲೇ ನನಗೆ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಬಾಗಲಕೋಟೆ ನ್ಯಾಯಾಲಯದ ಸಿಬ್ಬಂದಿಗಳು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಕೆಲಸ ಮಾಡಿದ್ದೀರಿ ಎಂದರು.
ಹಿರಿಯ ದಿವಾನಿ ನ್ಯಾಯಾಧೀಶರು ಮತ್ತು ಸಿಜೆಎಂ ಕಲ್ಪನಾ ಎಂ.ಎಸ್ ಮಾತನಾಡಿ ನಿವೃತ್ತ ನ್ಯಾಯಾಧೀಶರು ಸದಾ ಹಸಮ್ನುಖರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಗುಮುಖದಿಂದ ಸೇವೆ ಸಲ್ಲಿಸುವದರ ಜೊತೆಗೆ ಎಲ್ಲ ಸಿಬ್ಬಂದಿಗಳು ಸಂತೋಷದಿಂದ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದರು. ಎಲ್ಲ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಜಿಲ್ಲಾ ಮತ್ತು ಅಧೀನ ನ್ಯಾಯಾಲಯದ ಸಿಬ್ಬಂದಿಗಳ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರು. ತಮ್ಮ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿ ಹೊಂದಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲೆಂದು ಹಾರೈಸೋಣ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಎಮ್.ಎಚ್.ಕಡಕೋಳ ಮಾತನಾಡಿ ನಿವೃತ್ತ ನ್ಯಾ.ಕಲ್ಪನಾ ಕುಲಕರ್ಣಿಯವರು 25 ವರ್ಷಗಳ ಕಾಲ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈ ಅಲ್ಪ ಅವಧಿಯಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯದ ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೂರದಿಂದ ಟ್ರಾವೆಲ್ ಮಾಡುವುದನ್ನು ತಪ್ಪಿಸುವ ಮೂಲಕ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅವರ ಅಧಿಕಾರ ಅವಧಿಯಲ್ಲಿ ಕೆಲಸ ಮಾಡಲು ಅವಕಾಶ ದೊರೆತಿದ್ದು, ನಮ್ಮ ಪುಣ್ಯ ಎಂದರು.
ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಾದ ಎಂ.ಯು.ಅಲಗೋಳ, ಅಪ್ಸರಾ ಸುಲ್ತಾನ, ಅರ್ಜುನ ದೊಡಮನಿ, ಜಾದವ ಮೆಡಮ್, ಸಿ.ಜೆ.ಮುದಗಲ್ಲ ಸೇರಿದಂತೆ ಇತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮೇ 31 ರಂದು ವಯೋನಿವೃತ್ತಿ ಹೊಂದಿದ ಜಿಲ್ಲಾ ನ್ಯಾಯಾಲಯದ ಪ್ರೊಸೆಸ್ ಸರ್ವರ್ ಬಿ.ಎಸ್.ಖ್ಯಾಡದ ಅವರನ್ನು ಸಹ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಸಿ.ಬಿ, ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶೀಲಾ ಎನ್, 1ನೇ ಹೆಚ್ಚುವರಿ ದಿವಾನಿ ನ್ಯಾಯಾಧೀಶರಾದ ಪಲ್ಲವಿ ಆರ್, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶರಾದ ದ್ಯಾವಪ್ಪ ಎಸ್.ಬಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಪ್ರಧಾನ ದಿವಾನಿ ನ್ಯಾಯಾಧೀಶರಾದ ನಾಗರಾಜ ಎನ್ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ನಿವೃತ್ತ ನ್ಯಾ.ಕಲ್ಪನಾ ಕುಲಕರ್ಣಿ ಅವರ ಸಯೋದರ ಅನಂತ ಕುಲಕರ್ಣಿ, ಅವರ ಪತ್ನಿ ಚಂದ್ರಾ, ಪುತ್ರ ಕಾಂತೇಶ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಸವರಾಜ ಬಾದವಾಡಗಿ ಸ್ವಾಗತಿಸಿದರು.
Be the first to comment