ಹಳ್ಳಿಗೆ ಬಂತು ತ್ಯಾಜ್ಯ ನಿರ್ವಹಣಾ ಘಟಕ:ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕಸ ವಿಲೆವಾರಿ ವಾಹನ ಉದ್ಘಾಟನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಗ್ರಾಮೀಣ ಪ್ರದೇಶದ ಪರಿಸರ, ಜನರ ಆರೋಗ್ಯ ಸುಧಾರಣೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು, ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಪಂಚಾಯಿತಿಗಳಲ್ಲಿ ಘನ, ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಜಿಲ್ಲೆಯ ಹಳ್ಳಿಗಳು ‘ನಿರ್ಮಲ ಗ್ರಾಮಗಳಾಗಿ’ ನಳನಳಿಸಲಿವೆ !

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕಸ ವಿಲೆವಾರಿ ಮಾಡಲು 15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತಿಯಿಂದ 2ಲಕ್ಷ ರೂ ಅನುದಾನದೊಂದಿಗೆ, ಜಿಲ್ಲಾ ಪಂಚಾಯತ್ ಬಾಗಲಕೋಟೆ ನೀಡಲಾದ ಕಸ ವಿಲೆವಾರಿ ವಾಹನಕ್ಕೆ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಪೂಜೆ ಸಲ್ಲಿಸುವುದರಮೂಲಕ ನಾಗರಿಕರ ಸೇವೆಗೆ ಸಮರ್ಪಿಸಿದರು.

ಈಗಾಗಲೇ ತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಲು ಗ್ರಾಮ ಪಂಚಾಯತಿ ವ್ಯಾಪ್ತಿಯ ತಳ್ಳಿಕೇರಿ ಗ್ರಾಮದಲ್ಲಿ ಎರಡು ಎಕರೆ ಬಯಲು ಜಾಗೆಯನ್ನು ಗುರುತಿಸಿದ್ದು ಇದರ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ 16ಲಕ್ಷ 82ಸಾವಿರ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಹಸಿ ಕಸ,ಒಣ ಕಸ ಸಂಗ್ರಹಕ್ಕೆ 3000 ಬಕೆಟ್ ಗಳನ್ನು, ಪುಟ್ಟಿಗಳನ್ನು ಹಾಗೂ ಇನ್ನುಳಿದ ಪರಿಕರಗಳನ್ನು ಖರೀದಿಸಲಾಗಿದೆ.ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಸಂಗ್ರಹಿಸಿದ ಕಸದಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ, ಕೊಳೆಯುವ ಕಸವನ್ನು ಗೊಬ್ಬರಕ್ಕೆ ಬಳಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಮಾಹಿತಿ ಹಂಚಿಕೊಂಡರು.

ಪ್ರತಿ ಮನೆಯಲ್ಲಿ ಕಸ ಹಾಕುವ ಮೊದಲು ಹಸಿ, ಒಣ, ಮರು ಬಳಕೆಯಾಗುವ ಕಸ ಎಂದು ವಿಂಗಡಣೆ ಮಾಡುವಂತೆ ಆಯಾ ಗ್ರಾ.ಪಂ. ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ. ಗ್ರಾ.ಪಂ. ಸಿಬ್ಬಂದಿ ಕಸ ಸಾಗಣೆ ವಾಹನಗಳ ಮೂಲಕ ಮನೆಗಳ ಬಳಿಗೆ ಹೋಗಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಿದ್ದಾರೆ.ಆ ನಂತರವಷ್ಟೇ ಕಸವನ್ನು ನಿಗದಿತ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಣೆ ಮಾಡಲಾಗುತ್ತದೆ. ಅಲ್ಲಿನ ಸಿಬ್ಬಂದಿ ಒಣ, ಹಸಿ ಮತ್ತು ಮರು ಬಳಕೆ ಕಸವನ್ನು ಪ್ರತ್ಯೇಕಗೊಳಿಸಲಿದ್ದಾರೆ. ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಸಲು ಸಹ ಉದ್ದೇಶಿಸಲಾಗಿದೆ.

ಏನಿದು ಯೋಜನೆ?: ಘನ, ದ್ರವ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಿರ್ಮಲ ಭಾರತ ಅಭಿಯಾನ ಯೋಜನೆಯ ಒಂದು ಪ್ರಮುಖ ಅಂಗವಾಗಿದೆ. ಗ್ರಾಮ ನೈರ್ಮಲ್ಯ ಕಾಪಾಡಿ ಗ್ರಾಮಾಂತರ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮನೆ ಗಳಲ್ಲಿ ಸೃಷ್ಟಿಯಾಗುವ ಕಸ, ಪ್ಲಾಸ್ಟಿಕ್, ತರಕಾರಿ ತ್ಯಾಜ್ಯ ಗಳು, ಹಸಿ ಮತ್ತು ದ್ರವ ರೂಪದ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ ಅದನ್ನು ಗೊಬ್ಬರವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ. ತ್ಯಾಜ್ಯ ಉತ್ಪಾದನೆಯ ಪ್ರಮಾಣ ಆಧರಿಸಿ ಬಯೋಗ್ಯಾಸ್ ಘಟಕ, ಎರೆಹುಳು ಗೊಬ್ಬರ ತಯಾರಿಕೆ ಘಟಕ, ಗುಂಡಿಗಳನ್ನು ತೆಗೆದು ಮಿಶ್ರ ಗೊಬ್ಬರ ತಯಾರಿಸುವ ಘಟಕಗಳನ್ನು ನಿರ್ಮಿಸಲಾಗುತ್ತದೆ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಪ್ಪಾಸಾಹೇಬ ನಾಡಗೌಡರ,ಗ್ರಾಮ ಪಂಚಾಯತ್ ಸದಸ್ಯರಾದ ಹನಮಂತ ವಡ್ಡರ,ಮಾಸಪ್ಪ ಕಬ್ಬರಗಿ,ವಿರೇಶ ಕಮತರ,ಬಾಬುಸಾಬ ಸಿಮಿಕೇರಿ,ಬಸವರಾಜ ಮಾದರ,ಪಿಕೆಪಿಎಸ್ ಸದಸ್ಯರಾದ ವಜಿರಪ್ಪ ಪೂಜಾರ,ಈರಣ್ಣ ಬೂದಿಹಾಳ, ಮೈಲಾರೆಪ್ಪ ಆಸಂಗಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತಣ್ಣ ನಾಡಗೌಡರ ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*