ಜಿಲ್ಲಾ ಸುದ್ದಿಗಳು
ಉತ್ತರ ಕನ್ನಡ
ಪ್ರಸಕ್ತ ವರ್ಷದ ತೀವ್ರ ಮಳೆಯಿಂದ ಅರಣ್ಯ ಅತಿಕ್ರಮಣದಾರರ ಮನೆ, ಕೊಟ್ಟಿಗೆ ಇನ್ನೀತರ ಕೃಷಿ ಚಟುವಟಿಕೆಯ ಕಟ್ಟಡ ಅನಾಹುತ ಮತ್ತು ನಷ್ಟಕ್ಕೆ ಒಳಗಾಗಿದ್ದು, ಸದ್ರಿ ಕಟ್ಟಡ ಪುನರ್ ಸ್ಥಾಪಿಸಲು ಮತ್ತು ರಿಪೇರಿ ಕಾಮಗಾರಿಗೆ ಆತಂಕ ಮಾಡದಂತೆ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು.
ಜಿಲ್ಲಾದ್ಯಂತ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಮಾಡಿಕೊಂಡಿರುವ ಅರಣ್ಯ ಅತಿಕ್ರಮಣದಾರರ ನೂರಾರು ಮನೆ, ಕೊಟ್ಟಿಗೆ, ಬಚ್ಚಲು ಮನೆ, ಪಡಿಮಾಡು ಅತೀವೃಷ್ಟಿಯಿಂದ ನಷ್ಟವಾಗಿದ್ದು ಇವರೆಲ್ಲ ಭೂರಹಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ತೊಂದರೆ ನೀಡಿದರೇ ಸಂತ್ರಸ್ಥ ಅರಣ್ಯ ಅತಿಕ್ರಮಣದಾರರಿಗೆ ಜೀವನಕ್ಕೆ ಸಮಸ್ಯೆ ಆಗುವುದು ಎಂದು ಅವರು ಹೇಳಿದರು.
ಅನಾದಿಕಾಲದಿಂದಲೂ ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿ ವಾಸ್ತವ್ಯದ ಮನೆ ರಿಪೇರಿ, ಪುನರ್ ಸ್ಥಾಪಿಸಲು ಜಿಲ್ಲೆಯ ಅರಣ್ಯಾಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಕಿರುಕುಳ ಮತ್ತು ದೌರ್ಜನ್ಯ ನಡೆಸುತ್ತಿರುವುದರಿಂದ ಜಿಲ್ಲಾಡಳಿತದಿಂದ ಸ್ಪಷ್ಟ ನಿರ್ದೇಶನ ಅವಶ್ಯ ಎಂದು ಅವರು ಒತ್ತಾಯಿಸಿದ್ದಾರೆ.
ನಷ್ಟ ಪರಿಹಾರಕ್ಕೆ ಒತ್ತಾಯ: ಅತೀವೃಷ್ಟಿಯಿಂದ ನಷ್ಟಕ್ಕೆ ಒಳಗಾಗಿರುವ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯದ ಕಟ್ಟಡ ಮತ್ತು ಸಾಗುವಳಿ ಬೆಳೆಗೂ ಸೂಕ್ತ ಪರಿಹಾರ ನೀಡಬೇಕು ಈ ದಿಶೆಯಲ್ಲಿ ಸರಕಾರವು ದ್ವಂದ್ವ ನೀತಿ ಅನುಸರಿಸಬಾರದೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
Be the first to comment