ಜಿಲ್ಲಾ ಸುದ್ದಿಗಳು
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷರಾಗಿ ಚಿ.ಮಾ.ಸುಧಾಕರ್ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಿರುವ ಬಗ್ಗೆ ಈಗಾಗಲೇ ಇಡೀ ಜಿಲ್ಲೆಗೆ ತಿಳಿದಿದೆ ಎಂದು ದೇವನಹಳ್ಳಿ ಕಸಾಪ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ (ಆರ್‌ಎನ್‌ಕೆ) ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಮಾಜಿ ಅಧ್ಯಕ್ಷರಾಗಿರುವ ಚಿ.ಮಾ.ಸುಧಾಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಅವರ ಮನೆಯ ಆಸ್ತಿ ಎಂದುಕೊಂಡಿದ್ದಾರೆ. ಮನ ಬಂದಂತೆ ವರ್ತನೆ ತೋರುತ್ತಿದ್ದಾರೆ. ತಾಲೂಕಿನಲ್ಲಿ ತಾಲೂಕು ಅಧ್ಯಕ್ಷನಾಗಿ ಸಾಕಷ್ಟು ಕನ್ನಡ ಪರವಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ದೇವನಹಳ್ಳಿ ಪಟ್ಟಣದಲ್ಲಿ ಇತಿಹಾಸದಲ್ಲಿಯೇ ಬೆರಗು ಮೂಡಿಸುವ ರೀತಿಯಲ್ಲಿ ಸಮ್ಮೇಳನವನ್ನು ನಡೆಸಲಾಗಿತ್ತು. ಇದೀಗ ಏಕಾಏಕೀ ಅಧಿಕಾರ ಇಲ್ಲದಿದ್ದರೂ ಸಹ ನಿಯಮ ಬಾಹಿರವಾಗಿ ಚುನಾವಣೆ ಘೋಷಣೆಯ ನಂತರದ ದಿನಗಳಲ್ಲಿ ನನ್ನನ್ನು ತಾಲೂಕು ಅಧ್ಯಕ್ಷರ ಸ್ಥಾನದಿಂದ ವಜಾಗೊಳಿಸಲು ಉನ್ನಾರ ಮಾಡಿರುತ್ತಾರೆ. ಒಂದು ಸ್ಥಾನಕ್ಕೆ ೫೦ ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಆ ಜಾಗಕ್ಕೆ ತಮಗೆ ಇಷ್ಟಬಂದಂತಹ ಹಾಗೂ ಬೆಂಬಲಿತರ ಪರವಾಗಿ ಆಯ್ಕೆ ಮಾಡಿ ಸಾಹಿತ್ಯ ಪರಿಷತ್ತಿನ ಘನತೆಗೆ ಧಕ್ಕೆ ಬರುವ ಹಾಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ತಾಲೂಕಿನ ಪ್ರತಿಯೊಂದು ಗ್ರಾಮ, ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಬೇಕು. ಆದರೆ, ಇದೊಂದು ಸ್ವಂತ ಮನೆಯಂತೆ ಇವರು ತಾಲೂಕು, ಜಿಲ್ಲಾಧ್ಯಕ್ಷರಾಗಿದಾಗಿನಿಂದಲೂ ವಿಜಯಪುರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಾಹಿತ್ಯದ ಬಗ್ಗೆ ಗಂಧವೇ ಇಲ್ಲದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ನೇಮಿಸಿ, ತಮಗೆ ಬೇಕಾದ ಹಾಗೆ ಸ್ವಇಚ್ಚೆಯಿಂದ ಹಿಟ್ಲರ್‌ನಂತೆ ವರ್ತನೆ ಮಾಡಿರುತ್ತಾರೆ. ಚುನಾವಣೆ ಬರುತ್ತಿರುವುದರಿಂದ ನನ್ನಮೇಲೆ ಇಲ್ಲಸಲ್ಲದನ್ನು ಎತ್ತಿಕಟ್ಟುವ ಕೃತ್ಯವನ್ನು ಕೆಲ ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದಾರೆ. ಇವೆಲ್ಲ ಇವರಿಗೆ ಶೋಭೆ ತರುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ಮತದಾರರೇ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.ಕೂಡಲೇ ಸರಕಾರದ ಕಸಾಪ ರಾಜ್ಯಾಧ್ಯಕ್ಷರಾಗಿರುವ ಮನುಬೆಳಗರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿರುವ ಚಿ.ಮಾ.ಸುಧಾಕರ್ ಅವರ ಬಗ್ಗೆ ಜಿಲ್ಲೆಯ ನಾಲ್ಕು ತಾಲೂಕಿನ ಪದಾಧಿಕಾರಿಗಳನ್ನು ವಿಚಾರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Be the first to comment