ರಾಜ್ಯ ಸುದ್ದಿಗಳು
ಕಾರವಾರ
ಜಿಲ್ಲೆಯಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದ ಜು.27ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ನದಿಗಳು ಅಪಾಯಮಟ್ಟವನ್ನು ಮೀರಿ ತುಂಬಿ ಹರಿಯುತ್ತಿವೆ. ಯಾವುದೇ ಕಾರಣಕ್ಕೂ ಜನತೆ ನಿಷೇಧಿತ ಪ್ರದೇಶಗಳಲ್ಲಿ ಸಂಚರಿಸಬಾರದು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಹಿಲನ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿದ ಅವರು ಜಿಲ್ಲೆಯಲ್ಲಿ ಅಪಾರ ಮಳೆಯಾಗುತ್ತಿರುವುದರಿಂದ ಕಾಳಿ ಗಂಗಾವಳಿ ಅಘನಾಶಿನಿ ನದಿಗಳಲ್ಲಿ ಅಪಾರ ನೀರು ಹರಿದು ಬರುತ್ತಿದೆ. ಇದರಿಂದಾ ಕದ್ರಾ ಹಾಗೂ ಕೊಡಸಳ್ಳಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ.
ಅರಣ್ಯ ಪ್ರದೇಶಗಳಲ್ಲಿರುವ ಸಣ್ಣಪುಟ್ಟ ಹಳ್ಳಕೊಳ್ಳಗಳೂ ತುಂಬಿ ಹರಿಯುತ್ತಿದ್ದು ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯ ಜನರು ಕಷ್ಟಕ್ಕೆ ಸಿಲುಕಿದ್ದು ಜಲಾಶಯ ಹಾಗೂ ನದಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಜನರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಮತ್ತು ಪ್ರವಾಹ ಮುನ್ಸೂಚನೆ ಇರುವ ಪ್ರದೇಶಗಳಿಂದ ತಕ್ಷಣವೇ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸಬೇಕು . ಪ್ರವಾಹದಿಂದ ತೊಂದರೆಯಾದರೆ ತಕ್ಷಣವೇ ತಹಶೀಲ್ದಾರ್, ಜಿಲ್ಲಾಡಳಿತ ಅಥವಾ ಪೋಲೀಸರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅಜಾಗರೂಕತೆಯಿಂದ ವರ್ತಿಸಬಾರದು. ರಕ್ಷಣಾ ಪಡೆಗಳೊಂದಿಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯ ಅನೇಕ ಗ್ರಾಮಗಳು ಜಲಾವೃತವಾಗಿದ್ದು ಅಂಕೋಲಾದಲ್ಲಿ 32 , ಕಾರವಾರ 27, ಕುಮಟಾ 9, ಸಿದ್ದಾಪುರ 5, ಹಳಿಯಾಳ 1 ಮುಂಡಗೋಡ 1, ಹಾಗೂ ಶಿರಸಿ 1 ಗ್ರಾಮ ಸೇರಿದಂತೆ ಜಿಲ್ಲೆಯ 79 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಜಿಲ್ಲೆಯ 11,084 ಜನರು ಕಷ್ಟಕ್ಕೆ ಸಿಲುಕಿದ್ದಾರೆ .
ಹೊನ್ನಾವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಒಬ್ಬ ಮಹಿಳೆ ಶಿರಸಿಯಲ್ಲಿ ಕೆಲಸಕ್ಕೆ ಹೋದ ಒಬ್ಬ ವ್ಯಕ್ತಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದು ಅವರ ಮೃತದೇಹ ಪತ್ತೆಯಾಗಿದೆ. ಅಂಕೋಲಾ ತಾಲೂಕಿನಲ್ಲಿ ಇಬ್ಬರು ಕಾಣೆಯಾಗಿದ್ದು ಅವರ ಶೋಧಕಾರ್ಯ ನಡೆಯುತ್ತಿದೆ.
ಮಳೆ ಹಾಗೂ ಪ್ರವಾಹದಿಂದ ಯಲ್ಲಾಪುರ 3 ,ಹೊನ್ನಾವರ 1 ಹಾಗೂ ಕಾರವಾರದಲ್ಲಿ 5 ಮನೆಗಳು ಸೇರಿ 9 ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದು 55 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಪ್ರವಾಹದಲ್ಲಿ ಸಿಲುಕಿದ ಒಟ್ಟೂ 3,776 ಜನರನ್ನು ರಕ್ಷಿಸಲಾಗಿದೆ.ನೆರೆಯಿಂದ ಸಂಕಷ್ಟಕೆ ಸಿಲುಕಿದ ಜನರಿಗೆ ಜಿಲ್ಲೆಯಾದ್ಯಂತ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಕಾರವಾರದಲ್ಲಿ 19 ,ಅಂಕೋಲಾ 19, ಕುಮಟಾ 9, ಹಳಿಯಾಳ 1 , ಸಿದ್ದಾಪುರ 5 , ಯಲ್ಲಾಪುರ 3, ಶಿರಸಿ 1, ಹಾಗೂ ಮುಂಡಗೋಡದಲ್ಲಿ 1 ಸೇರಿದಂತೆ ಒಟ್ಟೂ 58 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟೂ 3,435ಜನರು ಆಶ್ರಯ ಪಡೆದಿದ್ದಾರೆ.ಮಳೆಯಿಂದಾಗಿ ಜಿಲ್ಲೆಯ 143 ರಸ್ತೆಗಳು , 22 ಸೇತುವೆಗಳು 7 ಶಾಲೆಗಳು , 1 ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಹಾನಿಯಾಗಿದೆ.ಕೊಡಸಳ್ಳಿ ಜಲಾಶಯದ 9 ಗೇಟ್ ತೆರೆಯಲಾಗಿದ್ದು 1,83,581 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗಿದ್ದು ಕದ್ರಾ ಜಲಾಶಯದ 10 ಗೇಟ್ ತೆರೆಯಲಾಗಿದ್ದು 2,12,947 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿರುವವರನ್ನು ರಕ್ಷಿಸಲು 20 ಸದಸ್ಯರು ಹಾಗೂ ದೋಣಿಗಳನ್ನು ಒಳಗೊಂಡ ಎನ್‌ಡಿಆರ್‌ಎಫ್‌ನ 1 ತಂಡ, 16 ಸದಸ್ಯರು ಹಾಗೂ ಬೋಟ್ ಒಳಗೊಂಡ ಎಸ್‌ಡಿಆರ್‌ಎಫ್‌ನ 1 ತಂಡ ಹಾಗೂ 17 ಸೈನಿಕರು ಮತ್ತು 5 ಜೆಮಿನಿ ಬೋಟ್ ಒಳಗೊಂಡ ನೌಕಾದಳದ 2 ತಂಡ ಕಾರ್ಯ ನಿರ್ವಹಿಸುತ್ತಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
Be the first to comment