ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಜರುಗಿದ ದೌರ್ಜನ್ಯ ಪ್ರಕರಣವೊಂದರಲ್ಲಿ ಮೃತರಾದ ಬಸಮ್ಮ ಷಣ್ಮುಖಪ್ಪ ಮಾದರ ಕುಟುಂಬಕ್ಕೆ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ ಅಧೀಕ್ಷಕ ಅನಿಲ ಭೂಮರೆಡ್ಡಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಮೊದಲ ಕಂತಿನ 4,12,500 ರೂ.ಗಳ ಪರಿಹಾರಧನದ ಚೆಕ್ ವಿತರಿಸಿದರು.
ಮೃತ ಬಸಮ್ಮಳ ತಂದೆಯಾದ ಷಣ್ಮುಖಪ್ಪ ಮಾದರ ಅವರ ಜೊತೆ ಮಾತನಾಡಿ ವಿವರ ಪಡೆದುಕೊಂಡರು. ಪೊಲೀಸ್ ಇಲಾಖೆಯಿಂದ ದಾಖಲಾದ ಎಫ್‍ಐಆರ್ ನಲ್ಲಿರುವ ಅಂಶಗಳ ಕುರಿತು ಚರ್ಚಿಸಿದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ನ್ಯಾಯ ಒದಗಿಸಿ ಕೊಡುವುದಾಗಿ ನೊಂದ ಕುಟುಂಬಕ್ಕೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೌರ್ಜನ್ಯದಲ್ಲಿ ಮೃತಪಟ್ಟ ಬಸಮ್ಮ ಮಾದರ ಅವರ ತಂದೆ-ತಾಯಿಗಳ ಹೆಸರಿನಲ್ಲಿ ಮೊದಲ ಕಂತಿನ 4,12,500 ರೂ.ಗಳ ಪರಿಹಾರಧನದ ಚೆಕ್ ನೀಡಲಾಗಿದೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವುದಾಗಿ ತಿಳಿಸಿದರು.
ನಂತರ ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ ಅಧೀಕ್ಷಕ ಅನಿಲ ಭೂಮರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸಂಚರಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಗ್ರಾಮಸ್ಥರಿಗೆ ತಿಳಿಸಿದರು.
ಭೇಟಿ ಸಂದರ್ಭದಲ್ಲಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಿರಿಜಾ ಬಂಡಿ, ಹುನಗುಂದ ಸಿಪಿಐ ಹೊಸಕೇರಪ್ಪ ಕೆ, ಪಿಎಸ್‍ಐ ಎಸ್.ಆರ್.ನಾಯಕ, ಅಮೀನಗಡ ಪಿಎಸ್‍ಐ ಎಂ.ಜಿ.ಕುಲಕರ್ಣಿ, ನಾಗರಿಕ ಹಕ್ಕು ನಿರ್ದೇಶನಾಲಯದ ಇನ್ಸಪೆಕ್ಟರ ಶೋಭಾ ಕೆ.ಟಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಸಿಬ್ಬಂದಿ ಜಗದೀಶ ಪಟ್ಟಣಶೆಟ್ಟಿ, ಮುಖಂಡರಾದ ಪರಶುರಾಮ ನೀಲನಾಯಕ, ವಿಠಲ ಲೋಕಾಪೂರ, ಚಂದ್ರಶೇಖರ ಹಾದಿಮನಿ, ಶಿವು ಕಟ್ಟಿಮನಿ, ಬಸವರಾಜ ಕಿರಸೂರ, ಕುಮಾರ ಕಾಳಮ್ಮನವರ, ತುಳಜಾರಾಮ ನೀಲನಾಯಕ, ಅಜಿತ ಪರಸನ್ನವರ ಇದ್ದರು.
Be the first to comment