ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕೋವಿಡ್-19 2ನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಕಾರಣವಾಗಿದ್ದರ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕ ನಷ್ಟ ಉಂಟಾಗಿರುವುದರಿಂದ 11 ವರ್ಗಗಳ ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಅಗಸರು, ಗೃಹಕಾರ್ಮಿಕರು, ಟೈಲರ್‍ಗಳು, ಮೆಕ್ಯಾನಿಕಲ್ ಚಿಂದಿ ಆರುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ₹2000 ರೂ.ಗಳ ಒಂದು ವಿಶೇಷ ಪ್ಯಾಕೇಜ್ ಘೋಷಿಸಲಾಗಿತ್ತು. ಹಿಂದಿನ ಮಾರ್ಗಸೂಚಿಯಂತೆ ನೆರವಿನ ಮೊತ್ತವನ್ನು ಪಡೆಯಲು ಅಗತ್ಯ ದಾಖಲೆಗಳೊಂದಿಗೆ https://sevasindhu.karnataka.gov.in/ ಪೋರ್ಟಲ್ ನಲ್ಲಿ ಜುಲೈ 31 ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹಿಂದಿನ ಮಾರ್ಗಸೂಚಿಯಂತೆ ನೆರವಿನ ಮೊತ್ತವನ್ನು ಪಡೆಯಲು ನಿಗದಿಪಡಿಸಿದ ಅಧಿಕಾರಿಗಳಿಂದ ಉದ್ಯೋಗ ದೃಢೀಕರಣ ಪತ್ರವನ್ನು ಸಲ್ಲಿಸಲು ತಿಳಿಸಲಾಗಿರುತ್ತದೆ. ಆದರೆ ಡಬ್ಲ್ಯೂಪಿ ಸಂಖ್ಯೆ 2563/ 2021ರ ಪ್ರಕರಣದಲ್ಲಿ ಜುಲೈ 1 ಉಚ್ಚ ನ್ಯಾಯಾಲಯದಲ್ಲಿ ನಡೆದ ನಡಾವಳಿಯಲ್ಲಿ ಗೃಹ ಕಾರ್ಮಿಕರಿಗೆ ಸಂಬಂಧಿಸಿದಂತೆ ಅರ್ಜಿಯೊಂದಿಗೆ ಸಲ್ಲಿಸಬೇಕಾದ ಉದ್ಯೋಗ ದೃಢೀಕರಣ ಪತ್ರದಲ್ಲಿ ಗೃಹ ಕಾರ್ಮಿಕರು ವೃತ್ತಿ ನಿರ್ವಹಿಸುತ್ತಿರುವ ಮಾಲಿಕರಿಂದ ಸಹಿ ಪಡೆಯಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿರುತ್ತಾರೆ.
ಅದರಂತೆ ಗೃಹ ಕಾರ್ಮಿಕರಿಗೆ ಸಂಬಂಧಿಸಿದಂತೆ ಮಾತ್ರ ನಿಗದಿಪಡಿಸಿದ ಅಧಿಕಾರಿಗಳಿಂದ ಅಥವಾ ಅವರು ಕಾರ್ಯನಿರ್ವಹಿಸುತ್ತಿರುವ ಮಾಲಿಕರಿಂದ ಸಹ ಸಹಿ ಮಾಡಿಸಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ನಮೂನೆಯ ಉದ್ಯೋಗ ದೃಢೀಕರಣ ಪ್ರಮಾಣ ಪತ್ರವನ್ನು ಹೊರಡಿಸಲಾಗುತ್ತದೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸುವುದನ್ನು ಐಚ್ಛಿಕಗೊಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214, ಶಿವಾನಂದ ಮಾದರ (9731778394) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment