ಜಿಲ್ಲಾ ಸುದ್ದಿ
ಮೊದಲನೇಯದು ಪುರಾತನ ನಗರವಾದ ಕಾಶಿಯಲ್ಲಿ ಹಾಗೂ ಎರಡನೆಯದು ಮಯೂರವರ್ಮನ ವೈಜಯಂತಿಯ ಬಂಕಾಪುರದಲ್ಲಿ ….!!ಬೆಳಗಿನ ಜಾವದ ಸಕ್ಕರೆ ನಿದ್ದೆಯಲ್ಲಿದ್ದ ರಾಮಚಂದ್ರ ಕುರಂದ್ವಾಡರು ದಡಕ್ಕನೆ ಎದ್ದು ಕುಳಿತರು…!!ನಡೆದ ಘಟನೆಗಳನ್ನೆಲ್ಲ ಮತ್ತೊಮ್ಮೆ ಜ್ಞಾಪಿಸಿಕೊಂಡರು, ಆಗ ಅವರಿಗೆ ಅರ್ಥವಾಯಿತು ಘಟನೆಗಳು ನಡೆದಿದ್ದು ತಮ್ಮ ಕನಸಿನಲ್ಲಿ ಎಂದು …!ಸಾಕ್ಷಾತ್ ಗಣಪತಿಯೇ ಅವರನ್ನು ಕೈಬೀಸಿ ಕರೆದಿದ್ದು ಕನಸಿನಲ್ಲಿ ಎಂದು ಅಲಕ್ಷ್ಯ ಮಾಡದೆ ಕೊಲ್ಲಾಪುರದ ಸಮೀಪದ ನರಸಿಂಗ ವಾಡಿಯ ಪಕ್ಕದ ಕುರಂದ್ ವಾಡ ದಿಂದ ಕೈ ಬೀಸಿ ಕರೆದ ಗಣಪತಿಯ ದನಿಯನ್ನು ಹಿಂಬಾಲಿಸುತ್ತಾ ಬಂದ ರಾಮಚಂದ್ರರಿಗೆ ಒಂಟಿ ಕಾಲಿನ ಮೇಲೆ ನಿಂತುಕೊಂಡಿದ್ದ ಗಣಪತಿಯು ದರ್ಶನ ಕೊಟ್ಟಿದ್ದು ಮಯೂರವರ್ಮನ ವೈಜಯಂತಿಯ ಬಂಕಾಪುರದಲ್ಲಿ..!!
ಹೀಗೆ ಹತ್ತನ್ನೆರಡು ತಲೆಮಾರುಗಳ ಹಿಂದೆ ಕೈ ಬೀಸಿ ಕರೆದ ಗಣಪತಿಯ ಸೇವೆಗಾಗಿ ಕುರಂದ್ವಾಡದಿಂದ ಬಂಕಾಪುರಕ್ಕೆ ಬಂದು ನೆಲೆಸಿದ ರಾಮಚಂದ್ರ ಕುರಂದ್ ವಾಡ್ ವಂಶಸ್ಥರು ಹೊಂಬಾಳಿ ವಂಶಸ್ಥರಾದ ಸ್ವಾರಸ್ಯಕರ ಘಟನೆಯ ಹಿಂದೆ ಒಂಟಿ ಕಾಲಿನ ಗಣಪತಿಯ ಮಹಾತ್ಮೆ ಅತ್ಯಂತ ರೋಮಾಂಚಕಾರಿ…!ನಿಮ್ದುಕ್ಕೆ ದೇವ್ರು ನಿಜ ಇದ್ರೆ, ನಿಮ್ದುಕ್ಕೆ ತಾಕತ್ ಇದ್ರೆ, ನೀವು ನಮ್ದುಕ್ಕೆ ಒಂದು ಭೇಷ್ ಆಗಿರೋ ಪವಾಡ ಮಾಡಿ ದಿಖಾವೋ, ಆಗ ನಮ್ದು ನಿಮ್ಮನ್ನ ಖುದಾ ಕಾ ಬಂಧ ಅಂತ ಮರ್ಯಾದೆ ಮಾಡುತ್ತೆ ” ಎಂದು ಸವಣೂರಿನ ನವಾಬ ಅಬ್ಬರಿಸಿ ಬಿಟ್ಟಅವಧೂತ ಚಿದಂಬರ ಕುರಂದ್ವಾಡ್ ರವರು ನವಾಬನ ಅಬ್ಬರಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಹ ನೀಡಲಿಲ್ಲಅಂದು ಸಂಜೆಯಿಂದ ನವಾಬರ ಸಮ್ಮುಖದಲ್ಲಿ ಬಹಳಷ್ಟು ವಾದ ವಿವಾದಗಳು ನಡೆದಿದ್ದವು, ಈಗ ಹೆಚ್ಚು ಕಡಿಮೆ ಮಧ್ಯರಾತ್ರಿಯು ಸಮೀಪಿಸಿತ್ತು.
ಕೊನೆಗೆ ನವಾಬನು ಅವಧೂತರ ನಿಂದನೆಯನ್ನು ಮಾಡುತ್ತಾ ಮಾಡುತ್ತಾ ಅಬ್ಬರಿಸಿ ಅವರಿಗೆ ಪಂಥಾಹ್ವಾನವನ್ನು ಕೊಟ್ಟುಬಿಟ್ಟ, ಅರಮನೆಯ ಉಪ್ಪರಿಗೆಯ ಮೇಲೆ ನವಾಬನಿಗೆ ಎದುರಾಗಿ ಕುಳಿತುಕೊಂಡಿದ್ದ ಅವಧೂತರು ಶಾಂತಚಿತ್ತರಾಗಿ ಅವನ ನಿಂದನೆಯ ಮಾತುಗಳನ್ನು ಆಲಿಸುತ್ತಾ ಕ್ಷಣ ಕಾಲ ಕಣ್ಮುಚ್ಚಿ ತಮ್ಮ ವಂಶದ ಮೂಲ ಪುರುಷರಾದ ರಾಮಚಂದ್ರ ಕುರಂದವಾಡ್ ರವರನ್ನು ನೆನಪಿಸಿಕೊಂಡರು ನಂತರ ತಮ್ಮ ಆರಾಧ್ಯ ದೈವವಾದ ಬಂಕಾಪುರದ ಒಂಟಿ ಕಾಲಿನ ಗಣಪತಿಯನ್ನು ಧ್ಯಾನಿಸಿದರು ಆ ನಂತರ ಕಣ್ಬಿಟ್ಟು ಮುಗುಳ್ನಗುತ್ತಾ ನವಾಬನ ಮುಖವನ್ನು ದೃಷ್ಟಿಸಿದರು ಹಾಗೂ ಹೊರಗಿನ ವಿಶಾಲವಾದ ಆಕಾಶವನ್ನು ಒಮ್ಮೆ ನೋಡಿದರು.
ಅವಧೂತರ ಜೊತೆ ಹೊರಗಿನ ಬಾನಿನ ಅಂಗಳವನ್ನು ನೋಡಿದ ನವಾಬ ಅಂಬೋ ಎಂದು ಸೀದಾ ಅವಧೂತರ ಕಾಲುಗಳ ಮೇಲೆ ಬಿದ್ದು ನಮ್ದುಕ್ಕೆ ಮಾಫ್ ಮಾಡಬೇಕು ….!! ನಮ್ದು ಗಲತ್ ಆಗಿದೆ ..!! ಎಂದು ಅವಧೂತರನ್ನು ಬೇಡಿಕೊಂಡ.ಮಧ್ಯರಾತ್ರಿ ಸಮಯದಲ್ಲಿ ವಿಶಾಲವಾದ ಬಾನಿನಲ್ಲಿ ತೇಜೋಮಾನವಾಗಿ ಪಳ ಪಳನೆ ಕಣ್ಣು ಕೋರೈಸುವಂತೆ ಪ್ರಕಾಶಿಸುತ್ತಿದ್ದ ಸೂರ್ಯದೇವ…!ಕಾಲಿನ ಮೇಲೆ ಬಿದ್ದ ನವಾಬರನ್ನು ಅತ್ಯಂತ ಪ್ರೀತಿಯಿಂದ ಎಬ್ಬಿಸಿ ಆಲಂಗಿಸಿಕೊಂಡರು ಚಿದಂಬರ ಕುರಂದ್ವಾಡ್ ರವರು.ಆ ಕ್ಷಣವೇ ನವಾಬ ಒಂದು ಹೊನ್ನಿನ ಬಳೆಯನ್ನು ತರಿಸಿ ಚಿದಂಬರ ಕುರಂದ್ವಾಡ್ ರವರ ಕೈಗಳಿಗೆ ತೊಡಿಸಿದನು.ಹೊನ್ನಿನ ಬಳೆಯನ್ನು ತೊಟ್ಟುಕೊಂಡ ಕುರಂದ್ವಾಡ್ ರವರನ್ನು ಅಂದಿನಿಂದ “ಚಿದಂಬರ ಹೊನ್ನ್ ಬಳಿ” ಎಂದು ಜನ ಪ್ರೀತಿಯಿಂದ ಕರೆದರು.ಕಾಲಾಂತರದಲ್ಲಿ ಹೊನ್ನ್ ಬಳಿ ಯಾವಾಗ ಹೊಂಬಾಳಿ ಯಾಗಿ ಬದಲಾಯಿತು ಎಂದು ಈಗಿರುವ ಹೊಂಬಾಳಿ ವಂಶಸ್ಥರಿಗೂ ತಿಳಿದಿಲ್ಲ. ಆದರೂ ಅವರಾರೂ ಒಂಟಿ ಕಾಲಿನ ಗಣಪತಿಯ ಸೇವೆಯನ್ನು ಮರೆತಿಲ್ಲ..!!!
Be the first to comment