ಅಪೂರ್ಣ ಮಾಹಿತಿ ನೀಡಿ ಜನತೆಗೆ ಮೋಸ; ಗ್ರಾ.ಪಂ ಕಾರ್ಯದರ್ಶಿ ವಿರುದ್ಧ ಆರೋಪ

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ 

CHETAN KENDULI

ಕುಮಟಾ: ಸರ್ಕಾರ 2005 ನೆಯ ಸಾಲಿನಲ್ಲಿ ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೊಳಿಸಿದ್ದು, ಈ ಕಾಯಿದೆಯ ಅಡಿಯಲ್ಲಿ ಭಾರತದ ನಾಗರಿಕರಿಗೆ ಸರ್ಕಾರದ ಮಟ್ಟದಲ್ಲಿ ನಡೆಯುವ ಕಾರ್ಯಚಟುವಟಿಕೆ ಪರಿಶೀಲಿಸಲು ಮತ್ತು ಮುದ್ರಿತ ರೂಪದಲ್ಲಿ ಪಡೆಯಲು ಅವಕಾಶವಿದೆ. ಆದರೆ ಇತ್ತೀಚೆಗೆ ಕೆಲ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ತಾಲೂಕಿನ ಕೋಡಕಣಿ ಗ್ರಾ.ಪಂ ಕಾರ್ಯದರ್ಶಿ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ತಿರುಮಲೇಶ ನಾಯ್ಕ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಅರವಿಂದ ಶ್ಯಾನಭಾಗ ಆರೋಪಿಸಿದ್ದಾರೆ.ಕೋಡಕಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಏ. 2016 ರಿಂದ ಮಾ. 2021 ರವರೆಗೆಗಿನ ವಿವಿಧ ರೀತಿಯ ಕರಗಳನ್ನು ಪಾವತಿಸಿದವರ ಮತ್ತು ಪಾವತಿಸದೇ ಇರುವವರ ಹೆಸರು ಮತ್ತು ಮೊಬಲಗು ಮಾಹಿತಿಯೊಂದಿಗೆ ಕರಬಾಕಿ ಉಳಿಸಿಕೊಂಡಿರುವ ಗ್ರಾಮಸ್ಥರಿಂದ ಹಣಸಂದಾಯ ಮಾಡಿಸಿಕೊಳ್ಳಲು ಗ್ರಾ.ಪಂ ಕೈಗೊಂಡಿರುವ ಕ್ರಮಗಳ ಕುರಿತು ಅರವಿಂದ ಶ್ಯಾನಭಾಗ ಮಾಹಿತಿ ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ತಿರುಮಲೇಶ ನಾಯ್ಕ 29 ಮೇ 2021 ರಂದು 33 ಪುಟಗಳ ಮಾಹಿತಿಯನ್ನು ನೀಡಿದ್ದು, ಮೇಲ್ನೋಟಕ್ಕೆ ಮಾಹಿತಿ ಸರಿ ಇರುವಂತೆ ಕಂಡುಬಂದರೂ, ಪ್ರತ್ಯೇಕವಾಗಿ ಕರದಾತರು ಪಾವತಿಸಿದ ರಶೀದಿಯೊಂದಿಗೆ ತಾಳೆ ಹಾಕಿದಾಗ ಕಾರ್ಯದರ್ಶಿ ನೀಡಿರುವ ಮಾಹಿತಿ ತಪ್ಪು ಎನ್ನುವುದು ಅರ್ಜಿದಾರರ ಗಮನಕ್ಕೆ ಬಂದಿದೆ.

ಅನುಬಂಧ ಒಂದರಲ್ಲಿರುವ ಅನುಕ್ರಮ ಸಂಖ್ಯೆಗಳಾದ 15, 17, 157, 167, 173, 174, 558, 561, 565 ರ ಮುಂದಿರುವ ಕರದ ಮಾಹಿತಿ ತಪ್ಪಾಗಿ ನೀಡಿರುತ್ತಾರೆ. ಕೇವಲ ಮನೆ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕ ಕರ, ನೀರಿನ ಕರದ ಮಾಹಿತಿಯಿದೆ. ಆದರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಆಕರಣೆಯಾಗುತ್ತಿರುವ ಮನರಂಜನಾ ತೆರಿಗೆ, ಮೀನು ಮಾರುಕಟ್ಟೆ ತೆರಿಗೆ, ಉಸುಕು-ಕಲ್ಲುಕಣಿ ಮುಂತಾದ ತೆರಿಗೆಗಳ ಬಗ್ಗೆ ಮಾಹಿತಿ ಮುಚ್ಚಿಡಲಾಗಿದೆ. ಪಾರದರ್ಶಕ ಆಡಳಿತದ ಕುರಿತು ಅಧಿಕಾರಿಯನ್ನು ವಿಚಾರಿಸಿದರೆ ಅದು ವೆಬ್‍ಸೈಟ್‍ನಿಂದ ತೆಗೆದಿರುವುದು. ಡಾಟಾ ಎಂಟ್ರಿಯವರ ಕಣ್ತಪ್ಪು ಎನ್ನುವುದಾಗಿ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.

ಈ ಉತ್ತರದಿಂದ ಸಮಾಧಾನಿತರಾಗದ ಅರವಿಂದ ಶ್ಯಾನಭಾಗ, ಕಾರ್ಯದರ್ಶಿಯ ವಿರುದ್ಧ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರಿಂದಲೂ ಸ್ಪಷ್ಟ ಮಾಹಿತಿ ದೊರೆತ್ತಿಲ್ಲ. ಕೇಳಿರುವ ಮಾಹಿತಿ 2016 ರಿಂದ 2021ರವರೆಗಿನದ್ದಾದರೂ ಮಾಹಿತಿ ಅಧಿಕಾರಿ ನೀಡಿರುವುದು ಕೇವಲ 2020-21 ನೆಯ ವರ್ಷದ್ದು. ಕೇವಲ 30 ದಿನಗಳಲ್ಲಿ ನೀಡಬೇಕಾದ ಮಾಹಿತಿಯನ್ನು 64 ದಿನಗಳಷ್ಟು ಸುದೀರ್ಘ ಅವಧಿಯನ್ನು ಪಡೆದು, ತಪ್ಪು ಮಾಹಿತಿ ನೀಡಲಾಗಿದೆ. ಅಲ್ಲದೇ,178 ರೂ. ಕರ ಪಾವತಿಸಿದವರ ಮಾಹಿತಿ 128 ರೂ. ಹಾಗೂ 183 ರೂ. ಕರ ಪಾವತಿಸಿದವರ ಮಾಹಿತಿ 363 ರೂ. ಎಂದು ಮಾಹಿತಿ ಹಕ್ಕಿನಲ್ಲಿ ನಮೂದಿಸಲಾಗಿದೆ ಎಂದು ಆರೋಪಿಸಿದರು.

ಕೆಲವು ಧಾರ್ಮಿಕ ಸ್ಥಳ, ಇನ್ನಿತರ ಕಟ್ಟಡ, ಅಂಗಡಿಗಳು, ಬ್ಯಾಂಕ್, ದೂರವಾಣಿ ಕೇಂದ್ರ, ಚರ್ಚ್ ಮುಂತಾದವುಗಳ ಬಗ್ಗೆ ವಸೂಲಿ ಮಾಡಲಾದ ಕರದಲ್ಲೂ ಸಾಕಷ್ಟು ಗೊಂದಲವಿದೆ. ಕರವನ್ನು ಯಾವ ಮಾನದಂಡವನ್ನಿಟ್ಟು ಸಂಗ್ರಹಿಸಿದ್ದಾರೆ ಎನ್ನುವುದು ಇನ್ನೂ ಗೋಜಲಿನ ಸಂಗತಿಯಾಗಿದೆ. ಒಟ್ಟಿನಲ್ಲಿ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯು ಸಂದೇಹಗಳನ್ನು ನಿವಾರಿಸುವುದಕ್ಕಿಂತ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದ್ದು, ಹತ್ತು ವರ್ಷಗಳಿಗೂ ಅಧಿಕ ಸಮಯದಿಂದ ಕೋಡಕಣಿಯ ಗ್ರಾ.ಪಂ ಕಾರ್ಯದರ್ಶಿಯಾಗಿರುವ ತಿರುಮಲೇಶ ನಾಯ್ಕ ನೀಡಿರುವ ಈ ತಪ್ಪು ಮಾಹಿತಿಯು ಅಧಿನಿಯಮದ ಸ್ಪಷ್ಟ ಉಲ್ಲಂಘನೆಯನ್ನು ಎತ್ತಿ ತೋರಿಸಿದೆ. ಈ ಎಲ್ಲ ಕಾರಣಗಳಿಂದ ತಪ್ಪು ಮತ್ತು ಅಪೂರ್ಣ ಮಾಹಿತಿ ನೀಡಿರುವ ಅಧಿಕಾರಿಗೆ ಗರಿಷ್ಟ ದಂಡ ವಿಧಿಸುವಂತೆ ರಾಜ್ಯ ಮಾಹಿತಿ ಆಯೋಗಕ್ಕೂ ಮೇಲ್ಮನವಿ ನೀಡಲು ತೀರ್ಮಾನಿಸಿದ್ದೇನೆ ಎಂದು ಅರವಿಂದ ಶ್ಯಾನಭಾಗ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*