ಜಿಲ್ಲಾ ಸುದ್ದಿಗಳು
ಜೀವಕ್ಕೆ ರಕ್ಷಣೆ ಇಲ್ಲದೆ ಬದುಕು ಅತಂತ್ರ|ಮುಳ್ಳು ಕಂಟೆಗಳಿಗೆ ಬಲೆ ಸಿಕ್ಕು ಅಪಾರ ನಷ್ಟ|ಶೈಕ್ಷಣಿಕ ಪ್ರಗತಿ ಶೂನ್ಯ|ಸಮಾಜದ ಇತರರೊಂದಿಗೆ ಬೆರೆಯುವುದು ಕಷ್ಟ|ಇಂಥವರು ಬದುಕು ಕಟ್ಟಿಕೊಳ್ಳುವುದು ಹೇಗೆ|ಅಲೆಮಾರಿಗಳಿಗೆ ಶಾಶ್ವತ ಪರಿಹಾರ ಇಲ್ಲವೆ?
ಬಾಗಲಕೋಟೆ:ಅಲೆಮಾರಿ ಅರೆಅಲೆಮಾರಿ ಗಳಾದ ಕಟಬು ಸಮುದಾಯದ ಹಲವು ಜನರಿಗೆ ಇಂದಿಗೂ ಒಂದು ನಿರ್ದಿಷ್ಟ ನೆಲೆಯಿಲ್ಲದೆ ಜಿಲ್ಲೆಯಾದ್ಯಂತ ವಾಸಿಸುತ್ತಿದ್ದಾರೆ. ಇವರಿಗೆ ಪ್ರಾದೇಶಿಕವಾಗಿ ಶಿಳ್ಳೆಕ್ಯಾತ,ಕಿಳ್ಳಿಕ್ಯಾತ,ಕಟಬು,ಕಟಬರ ಎಂಬ ಬಹುನಾಮಗಳಿಂದ ಕರೆಯಲ್ಪಡುವ ಇವರ ಪ್ರಮುಖ ವೃತ್ತಿ ಮೀನುಗಾರಿಕೆಯಾಗಿದೆ.
ಇವರು ಮರಾಠಿ ಮಾತನಾಡುವಾಗ ಅದರಲ್ಲಿ ಕನ್ನಡ ಪದಗಳನ್ನು ಸೇರಿಸಿ ಉಚ್ಚರಿಸುತ್ತಾರೆ. ಬೇರೆಬೇರೆ ಗ್ರಾಮಗಳಲ್ಲಿ ಕೆರೆ-ಹೊಂಡ,ಡ್ಯಾಮ್ ಗಳಲ್ಲಿ, ನದಿಗಳಲ್ಲಿ ಸ್ಥಳೀಯ ಆಡಳಿತದ ಅನುಮತಿಯೊಂದಿಗೆ ಒಂದೆ ಸಾರಿ 5 ರಿಂದ 10 ಸಾವಿರ ಮೀನಿನ ಮರಿಗಳನ್ನು ಹಾಕುವುದರ ಮೂಲಕ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 6 ತಿಂಗಳ ನಂತರ ಬಲೆಗಳಿಂದ ಮೀನುಗಳನ್ನು ಹಿಡಿಯುವುದರೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.ಈಗ ಇವರ ಬದುಕು ಅತಂತ್ರ ಸ್ಥಿತಿಯಲ್ಲಿರುತ್ತದೆ.
ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆಮಾಡಿ ಬಲೆಗಳನ್ನು ಹಾಕಿ ತಮ್ಮ ಜೀವದ ಹಂಗನ್ನು ತೊರೆದು ನದಿಗಳಲ್ಲಿ ಇಳಿದು,ಮುಳ್ಳು ಕಂಟೆಗಳಿರುವ ಕೆರೆ-ಹೊಂಡಗಳಲ್ಲಿ ಇಳಿದು ರಾತ್ರಿ ಹಗಲು ಎನ್ನದೆ ಮೀನುಗಳನ್ನು ಹಿಡಿಯುತ್ತಾರೆ.ಮುಳ್ಳು ಕಂಟೆಗಳಿಗೆ ಮೀನಿನ ಬಲೆ ಸಿಕ್ಕು ಹರಿದು ನಷ್ಟ ಅನುಭವಿಸುತ್ತಾರೆ.
ಸದ್ಯ ಕೊರೊನಾ ಮಹಾಮಾರಿಯ ಲಾಕ್ ಡೌನ್ ದಿಂದಾಗಿ ಮೀನುಗಳನ್ನು ಹಿಡಿದು ಮಾರಾಟ ಮಾಡಲು ಅವಕಾಶ ಇಲ್ಲದಂತಾಗಿದೆ.ಬಹುತೇಕ ಗ್ರಾಮ ನಗರಗಳಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ದಿಂದಾಗಿ ವಾರದಲ್ಲಿ ಎರಡು ದಿನ ಮಾತ್ರ ಅವಕಾಶ ನೀಡಿದ್ದು ಅದು ನಮಗೆ ಯಾವುದೇ ರೀತಿ ಪ್ರಯೋಜನವಾಗಿಲ್ಲ.ಮೀನು ಹಿಡಿಯಲು ಹೋಗುವಾಗ ದಾರಿಯಲ್ಲಿ ಪೋಲಿಸರ ಭಯ ಕಾಡುತ್ತಿದ್ದು ಒಟ್ಟಿನಲ್ಲಿ ನಮ್ಮ ಬದುಕು ಕಷ್ಟದಾಯಕವಾಗಿದೆ ಎಂದು ಬದಾಮಿ ತಾಲೂಕು ಕಟಾಪೂರ ಗ್ರಾಮದ ಪರಶುರಾಮ ಶಿಳ್ಳಿಕ್ಯಾತರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಅಲೆಮಾರಿ ಜನಾಂಗದವರು ಕೇವಲ ಲಾಕ್ ಡೌನ್ ನಲ್ಲಿ ಮಾತ್ರ ವಲ್ಲದೆ ದಿನನಿತ್ಯದ ಜೀವನದಲ್ಲಿ ಕೂಡಾ ಇಂಥಹ ಹಲವಾರು ಸಮಸ್ಯೆಗಳನ್ನು ಪ್ರತಿನಿತ್ಯ ಎದುರಿಸುತ್ತಿದ್ದಾರೆ.ಸರ್ಕಾರ ಇಂಥವರ ಸಮಸ್ಯೆಯನ್ನು ಮನಗಂಡು ಲಾಕ್ ಡೌನ್ ಪರಿಹಾರದ ಜೊತೆಗೆ ಶಾಶ್ವತ ಪರಿಹಾರ ಘೋಷಣೆ ಮಾಡಬೇಕಾಗಿದೆ.
Be the first to comment