ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಜಿಲ್ಲೆಯ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಕಳುಹಿಸಿಲಾಗುತ್ತಿದ್ದು, ಔಷಧ ಪೂರೈಕೆಯಾದ ತಕ್ಷಣ ಇನ್ನು ಮುಂದೆ ಬಾಗಲಕೋಟೆಯಲ್ಲಿಯೇ ಚಿಕಿತ್ಸೆ ಪ್ರಾರಂಭಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ತಿಳಿಸಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯನ್ನು ನೋಡಲ್ ಸೆಂಟರನ್ನಾಗಿ ಮಾಡಲಾಗಿತ್ತು. ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚಿಕಿತ್ಸೆಗೆ ತೊಂದರೆಯಾಗುತ್ತಿರುವದನ್ನು ಕಂಡು ಮುಖ್ಯಮಂತ್ರಿಗಳು ಆಯಾ ಜಿಲ್ಲೆಯಲ್ಲಿಯೇ ಚಿಕಿತ್ಸೆ ಪ್ರಾರಂಭಿಸಲು ತಿಳಿಸಿದ್ದಾರೆ. ಚಿಕಿತ್ಸೆಗೆ ಬೇಕಾದ ಔಷಧಿ ಪೂರೈಕೆಯಾದ ನಂತರ ಚಿಕಿತ್ಸೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಕ್ಯಾನಿಂಗ್‍ಗೆ ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಜಿಲ್ಲೆಯಲ್ಲಿರುವ ಸ್ಕ್ಯಾನ್ ಬಗ್ಗೆ ಮಾಹಿತಿ ಪಡೆದ ಸಚಿವರು ಇದಕ್ಕೆ ಸಂಬಂಧಿಸಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ಅವರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಿದರು. ಹೆಚ್ಚಿನ ದರ ಪಡೆದದ್ದು ಕಂಡುಬಂದಲ್ಲಿ ಅಂತಹ ಸ್ಕ್ಯಾನಿಂಗ್ ಸೆಂಟರ್‍ಗಳ ಅನುಮತಿಯನ್ನು ರದ್ದುಪಡಿಸಲು ಸೂಚಿಸಿದರು. ಬೇಟಿ ನೀಡಿ ಪರಿಶೀಲಿಸಿದ ಬಗ್ಗೆ ವರದಿ ನೀಡಲು ಸಚಿವರು ಸೂಚಿಸಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಕೋವಿಡ್ ರೋಗಿಗಳಿಗೆ ಸ್ಟಿರಾಯರ್ಡ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀಡುತ್ತಿರುವುದರಿಂದ ಹಾಗೂ ಆಕ್ಸಿಜನ್ ನಳಿಕೆಯಲ್ಲಿ ಶುದ್ದ ನೀರು ಹಾಕದೇ ಅದರ ಬದಲು ಸಾದಾ ನೀರು ಹಾಕುತ್ತಿರುವದರಿಂದ ಬ್ಲ್ಯಾಂಕ್ ಫಂಗಸ್ ಕಂಡು ಬರಲು ಕಾರಣವಾಗಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆ ನಡೆಸಿ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿತ್ತು. ಈ ಬಗ್ಗೆ ವೈದ್ಯರ ಸಭೆ ಕರೆದು ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದಾಗಿ ತಿಳಿಸಿದರು. ಈ ಸೋಂಕು ಹೊಸದೇನಲ್ಲ. ಹಿಂದಿನಿಂದಲೂ ಇರುವ ಕಾಯಿಲೆ ಯಾಗಿರುವುದಾಗಿ ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಮನೆ ಮನೆ ಸರ್ವೆ ಕಾರ್ಯ ಚುರುಕುಗೊಳಿಸಬೇಕು. ಯಾವುದೇ ಕಾರಣಕ್ಕೆ ಕೋವಿಡ್ ಚಿಕಿತ್ಸೆಗೆ ಹೋಮ್ ಐಸೋಲೇಷನ್ ಅವಕಾಶ ಕೊಡಬಾರದು. ತೋಟದ ಮನೆ, ಪ್ರತ್ಯೇಕ ಗುಡಿಸಲು ಇದ್ದರೂ ಸಹ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಬೇಕು. ಗ್ರಾಮಗಳಲ್ಲಿರುವ ಸೋಂಕಿತರಿಂದ ಇತರರಿಗೆ ಹರಡದಂತೆ ಕ್ರಮವಹಿಸಲು ತಿಳಿಸಿದ ಸಚಿವರು ಗ್ರಾಮೀಣ ಭಾಗದಲ್ಲಿ ಕಂಡುಬಂದ ಸಕ್ರಿಯ ಪ್ರಕರಣಗಳ ಬಗ್ಗೆ ಉಪವಿಭಾಗಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಸ್ಯಾಂಪಲ್ ತೆಗೆಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸಭೆಗೆ ತಿಳಿಸಿದಾಗ ಸ್ಯಾಂಪಲ್ ತೆಗೆದ ತಕ್ಷಣ ಪರೀಕ್ಷೆಗೆ ಕಳುಹಿಸದೇ 5-6 ದಿನಗಳ ಕಾಲ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಪರೀಕ್ಷೆ ತಡವಾಗುತ್ತಿರುವದರಿಂದ ಸೋಂಕು ಹರಡಲು ಅವಕಾಶ ಕೊಟ್ಟಂತಾಗುತ್ತದೆ. ಈ ಬಗ್ಗೆ ಕ್ರಮವಹಿಸುವಂತೆ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದ್ದು, ಮುಂದೆ ಈ ರೀತಿಯಾಗದಂತೆ ನಿಗಾವಹಿಸಲು ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬರುತ್ತಿದ್ದು, ಈಗಾಗಲೇ ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್‍ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೂ ಸಹ ಲಸಿಕೆ ನೀಡಲಾಗುತ್ತಿದ್ದು, 18 ರಿಂದ 44 ವರ್ಷದೊಳಗಿನ ವಯೋಮಾನದವರಿಗೆ ಮುಂಚೂನಿಯಲ್ಲಿರುವ ಕಾರ್ಯಕರ್ತರಿಗೆ ಮಾತ್ರ ಮೊದಲ ಡೋಸ್ ನೀಡಲಾಗುತ್ತಿದೆ. ಆದರೆ ಸಾಮಾನ್ಯ ಜನರಿಗ ಲಸಿಕೆ ನೀಡುವದನ್ನು ಸರಕಾರದ ಆದೇಶದನ್ವಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪಡಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾಡಳಿತಕ್ಕೆ ಸೋಂಕು ನಿವಾರಣಾ ದ್ರಾವಣ ಕೊಡುಗೆ
ಸೇವಾ ಭಾರತಿ ಟ್ರಸ್ಟ್ ಹಾಗೂ ಎಂ.ಆರ್.ಎನ್(ನಿರಾಣಿ) ಫೌಂಡೇಶನ್ ವತಿಯಿಂದ ಸೋಂಕು ನಿವಾರಣಾ ದ್ರಾವಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರ ಮೂಲಕ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯ ನೇಕಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕ ವೀರಣ್ಣ ಚರಂತಿಮಠ, ಎಂ.ಆರ್.ಎಲ್ ಸಮೂಹದಿಂದ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಸಿಇಓ ಟಿ.ಭೂಬಾಲನ್ ಸೇರಿದಂತೆ ಇತರರು ಇದ್ದರು.
Be the first to comment