ಶಿರೂರ, ಮನ್ನಿಕಟ್ಟಿ ಗ್ರಾಮಕ್ಕೆ ಶಾಸಕ, ಡಿಸಿ, ಸಿಇಓ ಭೇಟಿ:ಗ್ರಾಮದ ಜನರಲ್ಲಿ ಆತ್ಮಸೈರ್ಯ ತುಂಬಿದ ಶಾಸಕರು, ಅಧಿಕಾರಿಗಳು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆ ತಾಲೂಕಿನ ಶಿರೂರ ಮತ್ತು ಮನ್ನಿಕಟ್ಟಿ ಗ್ರಾಮಗಳಿಗೆ ಶಾಸಕರಾದ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ ಭೇಟಿ ನೀಡಿ ಗ್ರಾಮದ ಜನರ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸೈರ್ಯ ತುಂಬುವ ಕಾರ್ಯ ಮಾಡಿದರು.
ಮಂಗಳವಾರ ಭೇಟಿ ನೀಡಿದ ಶಾಸಕರು ಮತ್ತು ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಸಂಚಾರದ ವೇಳೆಯಲ್ಲಿ ಕೊವಿಡ್ ಲಕ್ಷಣಗಳನ್ನು ಹೊಂದಿದವರಿಗೆ ಮೇಡಿಶಿನ್ ಕಿಟ್‍ಗಳನ್ನು ವಿತರಿಸಿದರು. ಕೋವಿಡ್ ಹಳ್ಳಿಯ ಕಡೆಗೂ ಪಸರಿಸುತ್ತಿದ್ದು, ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ ಶಾಸಕ ವೀರಣ್ಣ ಚರಂತಿಮಠ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಪಾಜಿಟಿವ್ ಕೇಸ್‍ಗಳು ದೃಡಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚಿಸಿದರು. ಕೆಮ್ಮು, ನೆಗಡಿ, ಜ್ವರ ಇದ್ದವರು ತಕ್ಷಣ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮದ ಆರೋಗ್ಯದ ದೃಷ್ಠಿಯಿಂದ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದಿಂದ 9 ಜನ ಎಂ.ಬಿ.ಬಿ.ಎಸ್ ವೈದ್ಯರನ್ನು ಶಿರೂರ ಮತ್ತು ಮನ್ನಿಕೇರಿ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಎರಡು ಗ್ರಾಮಗಳಲ್ಲಿ ವೈದ್ಯರ ಜೊತೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನು ನೀಡಿ ತಂಡಗಳನ್ನು ರಚಸಿ ಆರೋಗ್ಯ ತಪಾಸಣೆ ಕೈಗೊಳ್ಳಲು ಕ್ರಮವಹಿಸುವಂತೆ ತಾಲೂಕಾ ವೈದ್ಯಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ಅವರಿಗೆ ಸೂಚಿಸಿದರು. ಗ್ರಾಮದ ಜನರು ಜಾಗೃತಿಯಿಂದ ಇರಬೇಕು. ಪಾಜಿಟಿವ್ ದೃಡಪಟ್ಟವನ್ನು ತಾಲೂಕಿನ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲು ತಿಳಿಸಿದರು.

ಭೇಟಿ ಸಂದರ್ಭದಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಮಂಜುನಾಥ ಡೋಂಬರ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿನೋದ ಹಾದಿಮನಿ, ಗ್ರಾಮ ಲೆಕ್ಕಾಧಿಕಾರಿ ಆನಂದ ಅಳ್ಳಿಗಿಡದ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*