ಮದುವೆ ಕಾರ್ಯಕ್ರಮಗಳಿಗೆ ನೀಡಿದ ಅನುಮತಿ ರದ್ದು: ಬೆಡ್‍ಗಳ ಮಾಹಿತಿಗಾಗಿ ಸಹಾಯವಾಣಿ ಸ್ಥಾಪನೆ : ಡಿಸಿ ರಾಜೇಂದ್ರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಕೋವಿಡ್ ಚಿಕಿತ್ಸೆಗಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವಿವಿಧ ತರಹದ ಬೆಡ್‍ಗಳ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಲಾಗಿದ್ದು, 08354-235512 ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈಗಾಗಲೇ ಬಾಗಲಕೋಟೆ ವೆಬ್‍ಪೋರ್ಟಲ್ ಮೂಲಕ ಬೆಡ್ ಲಭ್ಯತೆ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ಸಹಾಯವಾಣಿ ಮೂಲಕವು ಸಹ ಕೋವಿಡ್ ಚಿಕಿತ್ಸೆಗೆ ಜನರಲ್ ಬೆಡ್, ಆಕ್ಸಿಜನ್ ಬೆಡ್, ಐ.ಸಿ.ಯು, ಐ.ಸಿ.ಯು ಮತ್ತು ವೆಂಟಿಲೇಟರ್ ಹೊಂದಿದ ಬೆಡ್, ಎಚ್.ಡಿ.ಯು ಹಾಗೂ ಆಕ್ಸಿಜನ್ ಬೆಡ್‍ಗಳ ಲಭ್ಯತೆ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಲಸಿಕೆ ಪಡೆದರು ಸಹ ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೋವಿಡ್ ಲಕ್ಷಣಗಳು ಕಂಡುಬಂದವರಿಗೆ ಕೋವಿಡ್ ಚಿಕಿತ್ಸೆಯಲ್ಲಿ ನೀಡುವಂತ ಮಾತ್ರೆಗಳ ಕಿಟ್‍ಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ವಿತರಿಸಲಾಗುತ್ತಿದೆ. ಕಿಟ್ ವಿತರಣೆಗೆ ಅಭಿಯಾನ ಹಮ್ಮಿಕೊಂಡಿದ್ದು, ಈಗಾಗಲೇ 29 ಸಾವಿರ ಕಿಟ್ ವಿತರಿಸಲಾಗಿದೆ. ಲಕ್ಷಣಗಳು ಹೊಂದಿರುವವರನ್ನು ಕಡ್ಡಾಯವಾಗಿ ಸಿಸಿಸಿ ಕೇಂದ್ರಗಳಿಗೆ ಶಿಪ್ಟ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ 44 ವರ್ಷ ಒಳಗಿನವರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಗಿದ್ದು, ನೊಂದಣಿ ಮಾಡಿಕೊಂಡು ಎಸ್.ಎಂ.ಎಸ್ ಬಂದ ಮೇಲೆನೆ ಲಸಿಕೆ ಪಡೆಯಲು ಆಸ್ಪತ್ರೆಗೆ ಬರಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ಮಾಡುತ್ತಿದ್ದ 584 ದ್ವಿಚಕ್ರ ವಾಹನಗಳನ್ನು ಲಾಕ್‍ಡೌನ್ ಮೊದಲ ದಿನ ಜಪ್ತ ಮಾಡಲಾಗಿದೆ. ಎರಡನೇ ದಿನ 350 ವಾಹನಗಳನ್ನು ಜಪ್ತ ಮಾಡಲಾಗಿದೆ. ದಿನದಿ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10 ವರೆಗೆ ಅವಕಾಶ ಕಲ್ಪಿಸಿದೆ. ಆದರೆ ಮುಧೋಳ ನಗರದಲ್ಲಿ ದಿನಸಿ ಮಾರಾಟದ ವರ್ತಕರು ಸಂಪೂರ್ಣ ಅಂಗಡಿ ಬಂದ್ ಮಾಡಿ ಒಂದೊಂದು ಏರಿಯಾದಲ್ಲಿ ಹೋಮ್ ಡಿಲೇವರಿ ಮಾಡುವ ಕಾರ್ಯ ಕೈಗೊಂಡಿದ್ದಾರೆ. ಇವರ ಮಾದರಿಯಲ್ಲಿಯೇ ಉಳಿದ ಕಡೆ ಈ ವ್ಯವಸ್ಥೆ ಮಾಡಿದಲ್ಲಿ ಹೊರಗಡೆ ಬರುವುದನ್ನು ತಪ್ಪಿಸಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ ಮಾತನಾಡಿ ವಿವಿದೆಡೆಯಿಂದ ಇಲ್ಲಿಯವರೆಗೆ 4886 ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಅಲ್ಲದೇ ಮೇ 10 ರಂದು 528 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರೆಲ್ಲರ ಕೋವಿಡ್ ಮಾದರಿ ತೆಗೆದುಕೊಳ್ಳಲಾಗಿದೆ. ಇಲ್ಲಿವರೆಗೆ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರ ಪೈಕಿ 396 ಜನರಿಗೆ ಕೋವಿಡ್ ಪಾಜಿಟಿವ್ ಬಂದಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅವರುಗಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ವಾರ್‍ರೂಪ್ ಸ್ಥಾಪಿಸಲಾಗಿದೆ. ಲಕ್ಷಣಗಳು ಇದ್ದಲ್ಲಿ ಅಂತವರನ್ನು ಸಿಸಿಸಿ ಕೇಂದ್ರಗಳಿಗೆ ದಾಖಲಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಶಾಲೆಗಳನ್ನು ಸಿಸಿಸಿ ಕೇಂದ್ರ ಸ್ಥಾಪನೆಗೆ ಮುಂಜಾಗ್ರತವಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ‌‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಇದ್ದರು.


ಮದುವೆ ಕಾರ್ಯಕ್ಕೆ ನೀಡಿದ ಅನುಮತಿ ರದ್ದು

ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳಿಗೆ ನೀಡಿದ ಅನುಮತಿಯನ್ನು ರದ್ದುಪಡಿಸಲಾಗಿದೆ. ಯಾವುದೇ ರೀತಿಯಲ್ಲಿ ಸಾಮೂಹಿಕವಾಗಿ ಮದುವೆ ಮಾಡುವಂತಿಲ್ಲ. ಮನೆಯಲ್ಲಿಯೇ ಸರಳವಾಗಿ ಮದುವೆ ಕಾರ್ಯ ನಡೆಸಬಹುದೇ ವಿನಃ ಸಾರ್ವಜನಿಕವಾಗಿ ಮಾಡುವಂತಿಲ್ಲ. ಮದುವೆ ಕಾರ್ಯದ ನೆಪ ಒಡ್ಡಿ ಅನಾವಶ್ಯಕವಾಗಿ ಓಡಾಡುವಂತಿಲ್ಲ. ನಿಯಮ ಉಲ್ಲಂಘನೆಯಾದಲ್ಲಿ ನಿರ್ದಾಕ್ಷಣ್ಯ ಕ್ರಮಕೈಗೊಳ್ಳಲಾಗುವುದು.


ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ


Be the first to comment

Leave a Reply

Your email address will not be published.


*