ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಜಿಲ್ಲೆಯಲ್ಲಿ ಸದ್ಯ ಲಭ್ಯವಿರುವ ವಿವಿಧ ಸೌಲಭ್ಯಗಳಿರುವ ಬೆಡ್‍ಗಳ ಮಾಹಿತಿಯನ್ನು http://bagalkot.nic.in/bgkbedinfo ವೆಬ್‍ಸೈಟ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 343 ಜನರಲ್ ಬೆಡ್, 8 ಐ.ಸಿ.ಯು ಬೆಡ್, 6 ಎಚ್.ಡಿ.ಯು ಬೆಡ್, 6 ಆಕ್ಸಿಜನ್ ಬೆಡ್ ಸೇರಿ ಒಟ್ಟು 363 ಬೆಡ್‍ಗಳು ಖಾಲಿ ಇರುತ್ತವೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ 135 ರಿಂದ 240 ಕ್ಕೆ ಆಕ್ಸಿಜನ್ ಬೆಡ್‍ಗಳು ಸಿದ್ದಗೊಳ್ಳುತ್ತಿರುವ ಬಗ್ಗೆ ಶಾಸಕ ವೀರಣ್ಣ ಚರಂತಿಮಠ ಅವರು ತಿಳಿಸಿದ್ದಾರೆ. ಬೆಡ್‍ಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವಿವಿದ ಸೌಲಭ್ಯಗಳ ಬೆಡ್‍ಗಳ ಮಾಹಿತಿಯನ್ನು ವೆಬ್ ಪೋರ್ಟಲ್ ಮೂಲಕ ಕ್ಷಣಕ್ಷಣಕ್ಕೂ ಸಾರ್ವಜನಿಕರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಪ್ರತಿದಿನ 120 ರಿಂದ 130 ವರೆಗೆ ರೆಮಿಡಿಸ್ವಿಯರ್ ಚುಚುಮದ್ದು ಅವಶ್ಯವಿದ್ದು, ಈಗಾಗಲೇ ಮಾರ್ಚ 15 ರಿಂದ ಇಲ್ಲಿಯವರೆಗೆ 2987 ಚುಚುಮದ್ದು ಸ್ವೀಕೃತಿಯಾದರೆ ಅದರ ಪೈಕಿ 2955 ಉಪಯೋಗಿಸಲಾಗಿದೆ. 32 ಚುಚುಮದ್ದು ಮಾತ್ರ ಲಭ್ಯವಿರುತ್ತದೆ. ಪ್ರತಿದಿನ 500 ರೆಮಿಡಿಸ್ವಿಯರ್ ಬೇಡಿಕೆ ಇದ್ದು, ಎಪ್ರೀಲ್ 22 ರಿಂದ ಇಲ್ಲಿಯವರೆಗೆ 3179 ರೆಮಿಡಿಸ್ವಿಯರ್ ಪೂರೈಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ 18 ರೆಮಿಡಿಸ್ವಿಯರ್ ಲಭ್ಯವಿದ್ದು, ರೋಗಿಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿದ 76014 ಜನರಿಂದ ಒಟ್ಟು 7311289 ರೂ.ಗಳ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ 28 ಮದುವೆಗಳಿಗೆ ಪ್ರಕರಣದ ದಾಖಲಿಸಲಾಗಿದೆ. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡುವ ವರ್ತಕರ ವಿರುದ್ದ ವಿಶೇಷ ತಂಡದ ಮೂಲಕ 16 ಕಡೆ ದಾಳಿ ಮಾಡಿ 53,500 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಎನ್.ಐ.ಸಿಯ ಗಿರಿಯಾಚಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇನ್ನು ಮುಂದೆ ಮದುವೆಗೆ ಅನುಮತಿ ಇಲ್ಲ
ಮದುವೆಗಳಿಂದಲೂ ಸಹ ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಈ ಹಿನ್ನಲೆಯಲ್ಲಿ ಇನ್ನು ಮುಂದೆ ಮದುವೆ ಕಾರ್ಯಕ್ರಮಕ್ಕೆ ನೀಡುತ್ತಿರುವ ನಿರಾಕ್ಷೇಪಣಾ ಪತ್ರ ಹಾಗೂ ಅನುಮತಿಯನ್ನು ರದ್ದುಪಡಿಸಲಾಗಿದೆ. ಈಗಾಗಲೇ ನಿರಾಕ್ಷೇಪಣಾ ಪತ್ರ ಹಾಗೂ ಅನುಮತಿ ಪಡೆದ ಮದುವೆ ಆಯೋಜಕರು 50 ಜನಕ್ಕಿಂತ ಹೆಚ್ಚಿನ ಜನ ಸೇರುವಂಗಿಲ್ಲ. ಅಲ್ಲದೇ ಕಾಲಕಾಲಕ್ಕೆ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
Be the first to comment