ರಾಜ್ಯ ಸುದ್ದಿಗಳು
ಯಲಹಂಕ:
ನಗರದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ಈಗಿರುವ ಆಕ್ಸಿಜನ್ ಸ್ಥಾವರವನ್ನು ಮೇಲ್ದರ್ಜೆಗೇರಿಸಲು ಯಲಹಂಕದ ರೈಲು ಮತ್ತು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಗಾಲಿ ವಿಭಾಗದಲ್ಲಿ ನವೀಕರಣ ಕಾರ್ಯಗಳು ಭರದಿಂದ ನಡೆಯುತ್ತಿದೆ. ಕೆಲವೇ ವಾರದೊಳಗೆ ಈ ಸ್ಥಾವರ ತನ್ನ ಕಾರ್ಯ ಆರಂಭಿಸಲಿದೆ.
ರೈಲು ಮತ್ತು ಗಾಲಿ ಕಾರ್ಖಾನೆಯು ಪ್ರತಿ ದಿನ ದೊಡ್ಡ ಪ್ರಮಾಣದ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮಾಡಲು ರಾಜ್ಯ ಔಷಧ ನಿಯಂತ್ರಣ ಇಲಾಖೆಯು ಕೋರಿದೆ.
ಇದರಂತೆ ಆರ್‌ಡಬ್ಲ್ಯುಎಫ್ ಸಹ ನಾಗಪುರದ ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸೀವ್ಸ್ ಸೇಫ್ಟಿ ಆರ್ಗನೈಸೇಶನ್ ಮತ್ತು ಡ್ರಗ್ಸ್ ಕಂಟ್ರೋಲ್ ಇಲಾಖೆಯಿಂದ ಅಗತ್ಯವಾದ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದೆ. ಘಟಕದಲ್ಲಿ ಒಂದು ಗಂಟೆಗೆ 6 ಸಿಲಿಂಡರ್‌ಗಳಂತೆ ದಿನಕ್ಕೆ ಗರಿಷ್ಟ 104 ಸಿಲಿಂಡರ್ ತುಂಬಬಹುದು ಎಂದು ಕಾರ್ಖಾನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಾರ್ಖಾನೆಯ ಜನರಲ್ ಮ್ಯಾನೇಜರ್ ರಾಜೀವ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ನಮ್ಮ ಆಮ್ಲಜನಕ ಸ್ಥಾವರ ಪ್ರಸ್ತುತ ಕೇವಲ 12 ಬಾರ್ (ಅಟ್ಮಾಸ್ಪಿಯರಿಕ್ ಪ್ರೆಷರ್)ನ ಲೆಟ್ ಒತ್ತಡವನ್ನು ಹೊಂದಿದೆ. ಆದರೆ ಆಕ್ಸಿಜನ್ ಸಿಲಿಂಡರ್‌ಗಳನ್ನು ತುಂಬಲು 150 ಬಾರ್ ಹೊಂದಿರಬೇಕು. ಆದ್ದರಿಂದ, ಸ್ಥಾವರ ಸ್ಥಾಪಿಸಲು 55.7 ಲಕ್ಷ ರೂ. ವೆಚ್ಚದ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.
ನಗರದ ಎರಡು ರೈಲ್ವೆ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಕೆ ಮಾಡುವ ಯೋಜನೆ ನಮ್ಮದಾಗಿದೆ. ಕೊರೊನಾ ಪ್ರಕರಣ ಹೆಚ್ಚಿರುವ ಕಾರಣ ಆಸ್ಪತ್ರೆಗಳಲ್ಲಿ ಹೆಚ್ಚಿನ ಆಮ್ಲಜನಕದ ಅಗತ್ಯವಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.
Be the first to comment