ರಾಜಕೀಯ ಸುದ್ದಿ
ಬೆಂಗಳೂರು, ಜುಲೈ 26: ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ಒಂದು ಗಂಟೆ ಒಂಗೆ ರಾಜ್ಯದ ರೈತರಿಗೆ ಮತ್ತು ನೇಕಾರರಿಗೆ ಭಾರಿ ದೊಡ್ಡ ಉಡುಗೊರೆಯನ್ನು ಸಿಎಂ ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಅವರು ನೇಕಾರರ ಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದರು.
ರೈತರಿಗೂ ಉಡುಗೊರೆ ಘೋಷಿಸಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೊಡುತ್ತಿರುವ ಆರು ಸಾವಿರ ರೂಪಾಯಿಯ ಜೊತೆಗೆ ರಾಜ್ಯ ಸರ್ಕಾರವು ನಾಲ್ಕು ಸಾವಿರ ಹಣವನ್ನು ಹೆಚ್ಚುವರಿಯಾಗಿ ಕೊಡುವುದಾಗಿ ಘೋಷಿಸಿದರು.
ಕೇಂದ್ರ ಸರ್ಕಾರವು ರೈತರಿಗೆ ಎರಡು ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಕೊಡುತ್ತಿದ್ದು, ರಾಜ್ಯ ಸರ್ಕಾರವು ಎರಡು ಸಾವಿರದಂತೆ ಎರಡು ಕಂತುಗಳನ್ನು ನೀಡುವುದಾಗಿ ಘೋಷಿಸಿದರು. ಅಲ್ಲಿಗೆ ಒಟ್ಟಿಗೆ ವರ್ಷಕ್ಕೆ ಹತ್ತು ಸಾವಿರ ರೂಪಾಯಿ ರಾಜ್ಯದ ರೈತರಿಗೆ ಸಿಗಲಿದೆ.
ನೇಕಾರರ ಸಾಲವು ನೂರು ಕೋಟಿ ರೂಪಾಯಿಗಿಂತಲೂ ಹೆಚ್ಚಿಗೆ ಇದ್ದು, ಎಲ್ಲ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಯಡಿಯೂರಪ್ಪ ಅವರು ಹೇಳಿದರು.
ಕುಮಾರಸ್ವಾಮಿ ಅವರು ಘೋಷಿಸಿದ್ದ ರೈತರ ಸಾಲಮನ್ನಾ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ನಿರ್ಣಯ ಪ್ರಕಟಿಸುವದಾಗಿ ಹೇಳಿದರು.
Be the first to comment