ರಾಜಕೀಯ ಸುದ್ದಿ
ಅಂಬಿಗ ನ್ಯೂಸ್ (ಜು.26): ಬಿಜೆಪಿಯ ‘ಅಪರೇಶನ್ ಕೊಳಚೆಗುಂಡಿ’ಗೆ ಒಳಗಾಗಿ ಉಂಡ ಮನೆಗೆ ದ್ರೋಹ ಬಗೆದಿದ್ದ ಕಾಂಗ್ರೆಸ್-ಜೆಡಿಎಸ್ ನ ‘ಅತೃಪ್ತ’ ಶಾಸಕರನ್ನು ಮುಂಬೈಯ ಐಶಾರಾಮಿ ಹೋಟೆಲಿನಲ್ಲಿ ಅಕ್ಷರಶಃ ಅಕ್ರಮ ಬಂಧನದಲ್ಲಿರಿಸಲಾಗಿದ್ದು, ಹೊರ ಬರಲು ಪ್ರಯತ್ನಿಸಿದ ಮೂವರು ಶಾಸಕರ ಮೇಲೆ ಮಹಾರಾಷ್ಟ್ರ ಬಿಜೆಪಿಯ ಬೌನ್ಸರ್ ಗೂಂಡಾಗಳು ಹಲ್ಲೆ ನಡೆಸಿದ್ದು, ಅವರನ್ನು ಹೊರಬರದಂತೆ ಬಲವಂತವಾಗಿ ತಡೆಯಲಾಗಿದೆ ಎಂದು ವರದಿಯಾಗಿದೆ. ಬಿಜೆಪಿಯ ಬಲವಂತದ ಕೂಡಿ ಹಾಕುವಿಕೆಗೆ ಶಾಸಕರು ಕಂಗೆಟ್ಟಿದ್ದು, ಹೇಗಾದರೂ ಮಾಡಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ತಮ್ಮ ಪಕ್ಷಗಳಿಗೆ ದ್ರೋಹ ಬಗೆದ ಈ ‘ಅತೃಪ್ತ’ ರ ಸ್ಥಿತಿ ಈಗ ಡೋಲಾಯಮಾನವಾಗಿದೆ.
ಬಿಜೆಪಿಯ ಆಮಿಷಗಳಿಗೆ ಬಲಿಯಾಗಿ ರಾಜ್ಯ ಸರಕಾರದ ಪತನಕ್ಕೆ ಕಾರಣವಾಗಿದ್ದ ಶಾಸಕರಲ್ಲಿ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಅನರ್ಹಗೊಳಿಸಿದ್ದರ ಬಿಸಿ ಇತರರಿಗೂ ತಟ್ಟಿದ್ದು, ಹೇಗಾದರೂ ಮಾಡಿ ರಾಜ್ಯಕ್ಕೆ ವಾಪಾಸ್ ಬರುವ ಆಲೋಚನೆಯಲ್ಲಿದ್ದಾರೆ. ದೂರವುಳಿದರೆ ಅನರ್ಹತೆಯ ತೂಗುಕತ್ತಿ ತಲೆ ಮೇಲೆ ಬೀಳುವ ಸಾಧ್ಯತೆಯನ್ನು ಇತರರು ಮನಗಂಡಿದ್ದಾರೆ. ಮಾತ್ರವಲ್ಲ, ಈ ನಡುವೆ ತರಾತುರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿರುವ ಬಿ ಎಸ್ ಯಡಿಯೂರಪ್ಪನವರು ಸದನದಲ್ಲಿ ಬಲಾಬಲ ಪರೀಕ್ಷೆಯ ವೇಳೆ ಅತೃಪ್ತರು ಹಾಜರಿದ್ದು, ಬಿಜೆಪಿಯ ವಿರುದ್ಧ ಮತ ಚಲಾಯಿಸಿದರೆ ಬಿಜೆಪಿ ಸರಕಾರವೂ ಉಳಿಯಲ್ಲ ಎಂಬ ಆತಂಕವೂ ಬಿಜೆಪಿಗಿದೆ. ಹಾಗೊಂದು ವೇಳೆ ಸದನದಲ್ಲಿ ಹಾಜರಿದ್ದು ಬಿಜೆಪಿ ಪರ ಮತ ಚಲಾಯಿಸಿದರೆ ತಮ್ಮ ಪಕ್ಷದ ವಿಪ್ ಉಲ್ಲಂಘಿಸಿದ ಕಾರಣ ತನ್ನಿಂತಾನೇ ಶಾಸಕ ಸ್ಥಾನದಂದ ಅನರ್ಹಗೊಳ್ಳುತ್ತೇವೆ ಎಂಬ ಭಯವೂ ‘ಅಲ್ಪ ತೃಪ್ತರ’ ನ್ನು ಕಾಡುತ್ತಿದೆ.
ಒಟ್ಟಿನಲ್ಲಿ ಬಿಜೆಪಿಯನ್ನು ನಂಬಿಕೊಂಡು ತಮ್ಮ ಪಕ್ಷಗಳಿಗೆ ವಿಶ್ವಾಸ ಘಾತುಕತನ ಮಾಡಿರುವ ಶಾಸಕರ ‘ಅತೃಪ್ತಿ’ ಸದ್ಯದ ಮಟ್ಟಿಗೆ ತೃಪ್ತಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಮೈತ್ರಿ ಸರಕಾರ ಬಿದ್ದ ತಕ್ಷಣ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಅತೃಪ್ತರನ್ನು ನಾವು ‘ತ್ರಿಶಂಕು ಸ್ವರ್ಗ’ದಲ್ಲಿರಿಸುತ್ತೇವೆ, ಕಾದು ನೋಡಿ” ಎಂದಿದ್ದರು. ಸದ್ಯದ ರಾಜಕೀಯ ಪರಿಸ್ಥಿತಿಗಳನ್ನು ಗಹನವಾಗಿ ಅವಲೋಕಿಸಿದರೆ ‘ಅತೃಪ್ತ’ ರಿಗೆ ಸಿದ್ಧರಾಮಯ್ಯನವರು ಹೇಳಿದ್ದ ‘ತ್ರಿಶಂಕು ಸ್ವರ್ಗ’ ನಿರ್ಮಾಣವಾಗಿದೆಯೇ ಎಂಬ ಗುಮಾನಿ ಸಹಜವಾಗಿ ಮೂಡುತ್ತಿದೆ.
Be the first to comment