ಬಿಡುಗಡೆಯಾದ ಅನುದಾನ ಸಂಪೂರ್ಣ ಬಳಕೆಯಾಗಲಿ : ಬಾಯಕ್ಕ ಮೇಟಿ

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ: ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸರಕಾರದಿಂದ ಬಿಡುಗಡೆಯಾದ ಅನುದಾನ ಸಂಪೂರ್ಣ ಬಳಕೆಯಾಗಬೇಕು. ಯಾವುದೇ ರೀತಿಯಲ್ಲಿ ಹಿಂದಿರುಗದಂತೆ ಕ್ರಮಕೈಗೊಳ್ಳಲು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

  ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಕರ್ನಾಟಕ ಅಭಿವೃದ್ದಿ ಕಾಮಗಾರಿಗಳ ಅಕ್ಟೋಬರ ಮಾಹೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಪಂಚಾಯತ ಪಿಆರ್‍ಇಡಿ ವಿಭಾಗದಿಂದ ಕಳೆದ ಸಾಲಿನಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ. ಅದಲ್ಲಿ ಲ್ಯಾಪ್ಸ್ ಆದ ಹಣವೆಷ್ಟು, ಲ್ಯಾಪ್ಸ್ ಆದ ಹಣಕ್ಕೆ ಜವಾಬ್ದಾರರು ಯಾರು ಎಂಬ ಪ್ರಶ್ನೆಗಳನ್ನು ಕೇಳಿದರು. ಅಲ್ಲದೇ ಕಳೆದ 2-3 ವರ್ಷಗಳಿಂದ ಕೈಗೊಂಡ ಕಾಮಗಾರಿ ಮುಗಿದಿಲ್ಲ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರಸಕ್ತ ಸಾಲಿನ ಬಿಡುಗಡೆಯಾದ ಯಾವುದೇ ಕಾರಣಕ್ಕೂ ಹಿಂದಿರುಗದಂತೆ ಕ್ರಮವಹಿಸಲು ಸೂಚಿಸಿದರು.

     ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡರು ಬಿಲ್ಲು ಪಾವತಿಯಾಗುತ್ತಿಲ್ಲ. ಯಾಕೆ ತಡವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬರುತ್ತಿವೆ. ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು. ವಿವಿಧ ಇಲಾಖೆಯ ಅಧಿಕಾರಿ ತಾವು ತೆಗೆದುಕೊಳ್ಳುವ ನಿರ್ಣಯಗಳಿಗೆ ಜಿ.ಪಂ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

     ನಂತರ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ನರೇಗಾ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು, ಆರೋಗ್ಯ, ಪಶು ಪಾಲನೆ ಸೇರಿದಂತೆ ಇತರೆ ಇಲಾಖೆ, ಹಾಗೂ ವಿವಿಧ ನಿಗಮಗಳ ಪ್ರಗತಿ ಪರಿಶೀಲನೆ ಮಾಡಿದರು. ಕೃಷಿ ಇಲಾಖೆಯಲ್ಲಿ ಬೀಜ ವಿತರಣೆಯಲ್ಲಿ ಶೇ.77.3 ರಷ್ಟು, ರಾಸಾಯನಿಕ ಗೊಬ್ಬರ ವಿತರಣೆಯಲ್ಲಿ ಶೇ.90.9 ರಷ್ಟು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.82 ರಷ್ಟು ಸಾಧನೆಯಾಗಿರುವುದಾಗಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.                     

         ತೋಟಗಾರಿಕೆ ಇಲಾಖೆಯಲ್ಲಿ ಕೇಂದ್ರ ವಲಯದ ಯೋಜನೆಗಳಲ್ಲಿ ಶೇ.72.91, ರಾಜ್ಯ ವಲಯದಲ್ಲಿ ಶೇ.91.68, ಜಿಲ್ಲಾ ವಲಯದಲ್ಲಿ ಶೇ.87 ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು. ಸಾಮಾಜಿಕ ಅರಣ್ಯದಲ್ಲಿ ಗಿಡ ಬೆಳೆಸಲು ವಾರ್ಷಿಕ 1683 ಹೆಕ್ಟೇರ್ ಗುರಿಗೆ 1931 ಹೆಕ್ಟೇರ್‍ನಷ್ಟು ಸಾಧಿಸಲಾಗಿದೆ. ರೇಷ್ಮೆ ಇಲಾಖೆಯ ಕಚ್ಚಾ ರೇಷ್ಮೆ ಉತ್ಪಾದನೆ, ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ ಶೇ.29.54 ರಷ್ಟು ಸಾಧನೆ ಮಾಡಲಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಗುರಿಗೆ ಅಕ್ಟೋಬರ ಅಂತ್ಯಕ್ಕೆ ಶೇ.100.52 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಲೂಕಾವಾರು ಬಿಡುಗಡೆಯಾದ ಅನುದಾನಕ್ಕೆ ಕ್ರೀಯಾ ಯೋಜನೆ ತಯಾರಿಸಿ, ಆಡಳಿತಾತ್ಮಕ ಅನುಮೋದನೆಗೆ ಪಡೆದಿದ್ದು, ಈ ತಿಂಗಳ ಅಂತ್ಯಕ್ಕೆ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡು ಕಾಮಗಾರಿ ಪ್ರಾರಂಭವಾಗಬೇಕು. ಪಿಎಂಜಿಎಸ್‍ವೈನಡಿ ನಬಾರ್ಡ ಮಾಲಿಕೆ ರಸ್ತೆ ಅಭಿವೃದ್ದಿ ಯೋಜನೆ ಅಡಿಯಲ್ಲಿ 4 ಕಾಮಗಾರಿಗಳ ಪೈಕಿ 3 ಕಾಮಗಾರಿಗಳು ಮುಕ್ತಾಯಗೊಂಡಿರುವುದಾಗಿ ಪಿಆರ್‍ಇಡಿ ಇಇ ಸಭೆಗೆ ತಿಳಿಸಿದರು. ಆರೋಗ್ಯ ಇಲಾಖೆಯ ಎರಡು ಮಕ್ಕಳ ಸೂತ್ರದಲ್ಲಿ ಶೇ.55, ವಿವಿಧ ಲಸಿಕೆ ಕಾರ್ಯಕ್ರಮದಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
            ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ಖೋತ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಮೇಟಿ, ಜಿ.ಪಂ ಸಿಇಓ ಟಿ.ಭೂಬಾಲನ, ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಎಸ್.ಸಿ.ಉಕ್ಕಲಿ, ಯೋಜನಾ ನಿರ್ದೇಶಕ ಎಂ.ವಿ.ಚೆಳಗೇರಿ, ಮುಖ್ಯ ಯೋಜನಾಧಿಕಾರಿ ಪ್ರಭು ಮಾನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*