ಇಲಕಲ್ಲ ತಾಲೂಕಾ ವ್ಯಾಪ್ತಿಯಲ್ಲಿ ನೊಣಗಳ ಹಾವಳಿ;ಹೈರಾಣಾದ ಕೆಲೂರ ಗ್ರಾಮದ ಜನರು!

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಕೊರೋನಾ ಆತಂಕದ ಜೊತೆಗೆ ನೊಣಗಳ ಹಾವಳಿ ಗ್ರಾಮದ ಜನರನ್ನು ಹೈರಾಣಾಗಿಸಿದೆ. ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ಊರಿನವರ ಸಮಸ್ಯೆ ಪರಿಹರಿಸಬೇಕಿದೆ. ಇಲ್ಲದಿದ್ದರೆ ಮುಂದೆ ಈ ಭಾಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಟ್ಟಂತೆ ಆಗಲಿದೆ.

ಕೋಳಿ ಸಾಕಣೆ ಘಟಕಗಳಿಂದ ನೊಣಗಳ ಹಾವಳಿ ವಿಪರೀತವಾಗಿದ್ದು ಇವುಗಳನ್ನು ನಿಯಂತ್ರಿಸದಿದ್ದರೆ ಕೆಲವೇ ದಿನಗಳಲ್ಲಿ 60ಕ್ಕೂ ಹೆಚ್ಚು ರೋಗಗಳು ಪಸರಿಸುವ ಅಪಾಯಗಳು ಉಂಟು. ನೊಣಗಳು ಮನುಷ್ಯರ ಆರೋಗ್ಯವನ್ನು ಬಾಧಿಸುವಂತೆ ಜಾನುವಾರುಗಳ ಆರೋಗ್ಯಸ್ಥಿತಿಗೂ ಧಕ್ಕೆ ತರುತ್ತವೆ. ಹೈನುಸಾಕಣೆ ಕೇಂದ್ರಗಳಲ್ಲಿ ಹಾಲಿಗೆ ರೋಗಾಣುಗಳು ಬಾಧಿಸದಂತೆ ನೋಡಿಕೊಳ್ಳುವ ಅಗತ್ಯವಿರುತ್ತದೆ.

ಯಾರಾದರೂ ಮನೆಗೆ ಬಂದರೆ ಅವರಿಗೆ ಚಹಾ ಕೊಡಲೂ ನಾವು ಹಿಂದೆ ಮುಂದೆ ನೋಡುವಂತಾಗಿದೆ. ಎಲ್ಲಿ ನೊಣ ಬಿದ್ದಿರುತ್ತದೋ ಎಂಬ ಅಳುಕು ಕಾಡುತ್ತದೆ. ಹಾಗಾಗಿ ಮನೆಗೆ ನೆಂಟರು ಬರುತ್ತಾರೆ ಎಂದರೆ ನಮಗೇ ನಾಚಿಕೆಯಾಗುತ್ತಿದೆ…’ ಎಂಬುದು ಕೆಲೂರ ಗ್ರಾಮದ ಜನತೆಯ ಬೇಸರದ ಮಾತುಗಳು ಇವು.

ಮನೆಯಲ್ಲಿ ಮಲಗಲಾಗದೆ, ಕುಳಿತುಕೊಳ್ಳಲಾಗದೆ, ಸರಿಯಾಗಿ ಊಟ ಮಾಡಲು ಕೂಡ ಆಗದೆ ನೊಣಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ‌ಎಲ್ಲೆಂದರಲ್ಲಿ ಎಲ್ಲ ಪದಾರ್ಥಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಮುತ್ತಿಕೊಳ್ಳುತ್ತಿವೆ. ನೊಣಗಳ ಹಾವಳಿಗೆ ಜನರು ರೋಸಿ ಹೋಗಿದ್ದು, ಮನೆ ಬಿಟ್ಟು ಇದೀಗ ಬೀದಿಯಲ್ಲಿ ಇರುವಂತಾಗಿದ್ದು, ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೋಳಿ ಫಾರ್ಮ್‌ನವರು ಇದಕ್ಕೆ ಏನಾದರೂ ಮಾಡಬೇಕು’ ಎಂದು ಗೃಹಿಣಿ ಮಲ್ಲಮ್ಮ ಸಮಸ್ಯೆ ತೆರೆದಿಟ್ಟರು.

ಗ್ರಾಮ ಪಂಚಾಯತಿಗೆ ಈಗಾಗಲೆ ನೊಣಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಗ್ರಾಮದ ಪಿಡಿಓ ರವರಿಗೆ ಪತ್ರ ಬರೆಯಲಾಗಿದೆ .ಆಹಾರದ ಮೇಲೆ ನೊಣ ಕೂರುವುದರಿಂದ ಆಗಾಗ ವಾಂತಿ–ಭೇದಿಯೂ ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಶ್ರೀಮತಿ ಎ.ವಾಯ್.ಮಡಿವಾಳರ.

‘ನೊಣಗಳ ಹಾವಳಿಯಿಂದ ಊಟ ಮಾಡುವುದೂ ಕಷ್ಟ, ನೀರು ಕುಡಿಯುವುದೂ ಕಷ್ಟ. ನಾವು ತುಂಬಾ ಮುತುವರ್ಜಿ ವಹಿಸುವುದರಿಂದ ರೋಗ ಬಂದಿಲ್ಲ ಮುಂದೆ ಹೇಗೆ ಎಂದು ಗೊತ್ತಿಲ್ಲ. ನೊಣ ಬಾರದಂತೆ ಮಾಡಬೇಕು’ ಎಂದು ಕೆಲೂರ ಗ್ರಾಮದ ಜನತೆ ಒತ್ತಾಯಿಸುತ್ತಾರೆ.

ಗ್ರಾಮ ಪಂಚಾಯತಿ, ತಾಲೂಕಾ ಆಡಳಿತ, ಜಿಲ್ಲಾಡಳಿತ ಸೇರಿ ನೊಣಗಳ ಹಾವಳಿಯನ್ನು ನಿಯಂತ್ರಿಸಬೇಕು. ಅವು ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋಳಿ ಫಾರ್ಮ್‌ ಮಾಲೀಕರಿಗೆ ಸೂಚನೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ನಿಯಂತ್ರಣಕ್ಕೆ ಕ್ರಮ

ಕೆಲೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಈಗಾಗಲೆ ಗ್ರಾಮದಲ್ಲಿ ನೊಣಗಳ ಹಾವಳಿ ಕಡಿಮೆ ಮಾಡಲು ಮೆಲಾಥಿನ್ ಪೌಡರ ಸಿಂಪಡಿಸಿದ್ದಾರೆ ಮತ್ತು ಫೌಲ್ಟ್ರಿ ಫಾರ್ಮ ಗಳಿಗೆ ಭೇಟಿ ನೀಡಿ ಜನರು ರೊಚ್ಚಿಗೇಳುವ ಮೊದಲೆ ನೊಣಗಳ ನಿಯಂತ್ರಣಕ್ಕಾಗಿ ತಮ್ಮ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.ಎಂಬ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.

‘ಬೆಲ್ಲದ ಪಾಕದ ಜತೆಗೆ ಔಷಧ ಬೆರೆಸಿ ಇಟ್ಟು ನೊಣ ಸಾಯುವಂತೆ ಮಾಡುತ್ತಿದ್ದೇವೆ. ಸಕ್ಕರೆ ಜತೆ ಔಷಧ ಪುಡಿ ಹಾಕಿ ಚೆಲ್ಲುತ್ತೇವೆ. ಬಾಕ್ಸ್‌ ಇಟ್ಟು ಅದರ ಒಳಗೆ ನೊಣ ಬರುವಂತೆ ಆಕರ್ಷಿಸಿ ಅಲ್ಲೇ ಸಾಯುವಂತೆ ಮಾಡುತ್ತಿದ್ದೇವೆ’ ಅದರ ಜೊತೆಗೆ ಕೇರಳದಿಂದ ನೊಣಗಳು ಸಾಯುವ ಔಷಧ ತರಿಸಿ ಪ್ರತಿ ದಿನ ಸ್ಪ್ರೇ ಮಾಡಲಾಗುತ್ತಿದೆ ಎಂದು ಕೋಳಿ ಫಾರ್ಮ್‌ನ ಮಾಲಿಕ ಪ್ರಕಾಶ ಹಾದಿಮನಿ ಮತ್ತು ವಿನೋಧ ಜಿತೂರಿ ನೊಣ ನಿಯಂತ್ರಣಕ್ಕೆ ತಾವು ಕೈಗೊಂಡಿರುವ ಕ್ರಮಗಳನ್ನು ತೋರಿಸಿದರು.

ಮಳೆಗಾಲ ಆರಂಭವಾಗುವ ಹೊತ್ತು ನೊಣಗಳ ಸೀಸನ್‌ ಕೂಡ ಆಗಿರುತ್ತದೆ. ಹಣ್ಣು ಹಂಪಲು ಕೂಡ ನೊಣ ಜಾಸ್ತಿಯಾಗಲು ಕಾರಣ ಮತ್ತು ಹಸಿರು ಹೆಚ್ಚಾಗಿದ್ದು ಹಸಿರಿಗೆ ನೊಣಗಳು ಹೆಚ್ಚಗಿವೆ ಎಂದು ಪೌಲ್ಟ್ರಿ ಫಾರ್ಮ ಮಾಲಿಕ ವಿನೋಧ ಜಿತೂರಿ ಮಾಹಿತಿ ಹಂಚಿಕೊಂಡರು.

Be the first to comment

Leave a Reply

Your email address will not be published.


*