ಯೂರಿಯಾ ಕೃತಕ ಅಭಾವ ಸೃಷ್ಟಿಸಿದರೆ ಕಾನೂನು ಕ್ರಮ : ಜಿಲ್ಲಾಧಿಕಾರಿ ರಾಜೇಂದ್ರ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೃತಕ ಅಭಾವ ಸೃಷ್ಟಿಯಾದರೆ ಸಂಬಂಧಪಟ್ಟ ರಸಗೊಬ್ಬರ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶನಿವಾರ ಜಿಲ್ಲೆಯ ರಸಗೊಬ್ಬರ ಮಾರಾಟಗಾರರ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ 40,133 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಹಂಚಿಕೆ ಮಾಡಲಾಗಿದ್ದು, ಅನಗತ್ಯವಾಗಿ ಸ್ಟಾಕ್ ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸನ್ಸ್ ರದ್ದುಪಡಿಸುವದರ ಜೊತೆಗೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಈಗಾಗಲೇ ಕೆಲವೊಂದು ಕಡೆಗಳಲ್ಲಿ ಅಭಾವ ಸೃಷ್ಟಿಯಾಗಿರುವ ಬಗ್ಗೆ ತಿಳಿದು ಬಂದಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು. ರೈತರಲ್ಲಿ ರಸಗೊಬ್ಬರದ ಬಗ್ಗೆ ಗೊಂದಲ ಸೃಷ್ಟಿಯಾಗಬಾರದು. ಈ ಬಾರಿ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಇನ್ನು ಬೇಕಾದಲ್ಲಿ ತರಿಸಿಕೊಳ್ಳಲಾಗುತ್ತಿದೆ. ಯಾವುದೇ ರೈತರು ಗೊಬ್ಬರ ಸಿಕ್ಕಿಲ್ಲವೆಂದು ಬರಿಗೈಯಲ್ಲಿ ಹೋಗುವ ಸ್ಥಿತಿ ಉಂಟಾಗಬಾರದು. ರಸಗೊಬ್ಬರಗಳ ಸಮರ್ಪಕವಾಗಿ ವಿತರಣೆಯಾಗಬೇಕು ಎಂದರು. ಅಲ್ಲದೇ ಜಿಲ್ಲೆಯ ರೈತರಿಗೆ ಹೊರತುಪಡಿಸಿ ಬೇರೆ ಜಿಲ್ಲೆಯ ರೈತರಿಗೆ ಮಾರಾಟ ಮಾಡುವಂತಿಲ್ಲವೆಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಗೆ ಬ್ಲಾಕ್ ಮಾರಾಟ ಮಾಡಿ ಅಭಾವ ಸೃಷ್ಟಿ ಮಾಡಿದಲ್ಲಿ, ಸಂಬಂದಪಟ್ಟ ಅಧಿಕಾರಿಗಳು ರಸಗೊಬ್ಬರ ಹಂಚಿಕೆ ಮಾಡಿದ ಮೇಲೆ ತಮ್ಮ ಜವಾಬ್ದಾರಿ ಮುಗಿಯಿತೆಂದು ತಿಳಿಯದೇ ಹಂಚಿಕೆಯಾದ ರಸಗೊಬ್ಬರ ರೈತರಿಗೆ ವಿತರಣೆ ಯಾಗುತ್ತಿರುವ ಬಗ್ಗೆ ನಿಗಾ ವಹಿಸುವ ಕೆಲಸವಾಗಬೇಕು. ಸೂಕ್ತ ತರಬೇತಿ ನೀಡಿದ ಮೇಲೆಯೇ ಲೈಸನ್ಸ್ ನೀಡಲಾಗಿರುತ್ತದೆ. ಆದ್ದರಿಂದ ಸರಿಯಾಗಿ ನಿರ್ವಹಣೆಯಾಗಬೇಕು ಎಂದರು.

ರಸಗೊಬ್ಬರ ಅಭಾವ ಸೃಷ್ಟಿಗೆ ಅವಕಾಶ ಕೊಡದೇ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಗೊಬ್ಬರ ರೈತರಿಗೆ ವಿತರಣೆಯಾಗಬೇಕು. ಮಾರಾಟಗಾರರು ಅನಗತ್ಯವಾಗಿ ಸ್ಟಾಕ್ ಇಟ್ಟುಕೊಂಡಿದ್ದರೆ ಕೂಡಲೇ ಅದನ್ನು ಜಪ್ತ ಆಗಬೇಕು. ಈ ಕುರಿತು ಸರಗೊಬ್ಬರ ಮಾರಾಟಗಾರರು ಸಭೆ ನಡೆಸಿ ಅಭಾವ ಸೃಷ್ಟಿ, ಗಲಾಟೆ, ಪ್ರತಿಭಟನೆಗಳು ನಡೆಯಲು ಅವಕಾಶ ನೀಡಬಾರದು. ಇಂತಹ ಘಟನೆಗಳು ನಡೆದಲ್ಲಿ ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕಾನೂನಿನ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ 440 ರಸಗೊಬ್ಬರ ಮಾರಾಟಗಾರರು, 76 ಸಗಟು ಮಾರಾಟಗಾರರು ಇದ್ದಾರೆ. ಅದರಲ್ಲಿ 127 ಸಹಕಾರ ಸಂಘಗಳು ಮತ್ತು 313 ಖಾಸಗಿ ಮಾರಾಟಗಾರರು ಇದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟಗಾರರಲ್ಲಿ 1166 ಮೆಟ್ರಿಕ್ ಟನ್ ಯೂರಿಯಾ, 3716 ಮೆ.ಟನ್ ಡಿಎಪಿ, 6974 ಮೆ.ಟನ್ ಕಾಂಪ್ಲೇಕ್ಸ್, 2969 ಮೆ.ಟನ್ ಎಂ.ಓಪಿ ಹಾಗೂ 629 ಮೆ.ಟನ್ ಎಸ್‍ಎಸ್‍ಪಿ ಮತ್ತು ಇತರೆ ರಸಗೊಬ್ಬರ ಲಭ್ಯವಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಕೃಷಿ ಇಲಾಖೆಯ ಉಪ ನಿರ್ದೇಶಕ ಕೊಂಗವಾಡ ಸೇರಿದಂತೆ ತಾಲೂಕಾ ಕೃಷಿ ಸಹಾಯಕ ನಿರ್ದೇಶಕರು, ಜಿಲ್ಲೆಯ ಎಲ್ಲ ರಸಗೊಬ್ಬರ ಮಾರಾಟ ಮತ್ತು ಸಗಟು ಮಾರಾಟಗಾರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*