ಸರಳ, ಅರ್ಥಪೂರ್ಣ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆಗಸ್ಟ 15 ರಂದು ಆಚರಿಸಲ್ಪಡುವ ಸ್ವಾತಂತ್ರ್ಯೋತ್ಸವವನ್ನು ಕೊರೊನಾ ತಡೆಗೆ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್‍ಗಳಿಗೆ ಗೌರವ ಸಲ್ಲಿಸುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆ ಕುರಿತ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಗಸ್ಟ 15 ರಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ, 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಜಹಣ ಕಾರ್ಯಕ್ರಮ ಜರುಗಲಿದ್ದು, ಅಧಿಕಾರಿಗಳಿಗೆ ಕಾರ್ಯಕ್ರಮದ ಅಗತ್ಯ ಸಿದ್ದತೆ ಕೈಗೊಳ್ಳಲು ಸೂಚಿಸಿದರು. ಈ ಬಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿರುವದಿಲ್ಲವೆಂದು ತಿಳಿಸಿದರು.

ಈ ಬಾರಿ ಸ್ವಾತಂತ್ರ್ಯ ದಿನವನ್ನು ಕೊರೊನಾ ತಡೆಗೆ ಶ್ರಮಿಸುತ್ತಿರುವ ವೈದ್ಯರು, ಸ್ಪಾಪ್ ನರ್ಸ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆ ಇತರರಿಗೆ ಗೌರವ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಬೇಕಿದೆ. ಇದರಿಂದ ಕಾರ್ಯಕ್ರಮಕ್ಕೂ ಅರ್ಥಪೂರ್ಣ ಬರಲಿದೆ. ಆದ್ದರಿಂದ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದವರನ್ನು ಗುರುತಿಸಿ ಸನ್ಮಾನಿಸಲು ತಿಳಿಸಿದರು. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಿಸಲು ತಿಳಿಸಲಾಯಿತು.

ಪಥಸಂಚಲನ ಕಾರ್ಯಕ್ರಮದಲ್ಲಿ ಪೋಲಿಸ್, ಗೃಹರಕ್ಷಕದಳ, ಸ್ಕೌಟ್ಸ್ ಮತ್ತು ಗೈಡ್ಸ್ ಅವರನ್ನು ಮಾತ್ರ ಆಹ್ವಾನಿಸಲು ತಿಳಿಸಲಾಯಿತು. ಪಥ ಸಂಚಲನದಲ್ಲಿ ಭಾಗವಹಿಸುವರಿಗೆ ಒಂದು ದಿನ ಮುಂಚಿತವಾಗಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡತಕ್ಕದ್ದು. ಪಥ ಸಂಚಲನಕ್ಕೆ ವೇದಿಕೆ ಮುಂಬಾಗದಲ್ಲಿ ಮ್ಯಾಟ್ ಹಾಕುವ ವ್ಯವಸ್ಥೆ ಮಾಡಲು ತಿಳಿಸಿದರು. ಧ್ವಜಾರೋಹಣ ವ್ಯವಸ್ಥೆ ಮಾಡಲು ಭಾರತ ಸೇವಾದಳ, ಪೋಲಿಸ್ ಇಲಾಖೆ, ತಹಶೀಲ್ದಾರ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿಗಳಿಗೆ ವಹಿಸಲಾಯಿತು. ಪೋಲಿಸ್ ಬಂದೂಬಸ್ತಿ ವ್ಯವಸ್ಥೆ ಮಾಡುವಂತೆ ಪೋಲಿಸ್ ಇಲಾಖೆಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾವಾಗಿ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳು ಭಾಗವಹಿಸುವಂತಿಲ್ಲ. ಕಾರ್ಯಕ್ರಮದಂದು ಸ್ಯಾನಿಟೈಜರ್ ವಿತರಣೆ, ಸಿಂಪಡಣೆ ವ್ಯವಸ್ಥೆ ಕೈಗೊಳ್ಳಲಾಗುವುದು. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟ್ಯಾಜರ್ ವ್ಯವಸ್ಥೆ ಮಾಡಲು ತಿಳಿಸಿದರು. ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ಪಾಲಿಸಬೇಕು. ಶಿಷ್ಟಾಚಾರಕ್ಕೆ ಲೋಪವಾಗದಂತೆ ಧ್ವಜ ಸಂಹಿತೆಗೆ ಯಾವುದೇ ತರಹ ಅಪಚಾರವಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಕ್ರೀಡಾಂಗಣದಲ್ಲಿ ಸ್ಟೇಜ್ ನಿರ್ಮಾಣ, ಗಣ್ಯರಿಗೆ, ಶಾಸಕರಿಗೆ, ಸಂಸದರುಗಳಿಗೆ ಹಾಗೂ ಕೋವಿಡ್ ವಾರಿಯರ್ಸ್‍ಗಳಿಗೆ ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆಯನ್ನು ಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಗೃಹರಕ್ಷಕದಳ, ಭಾರತ ಸೇವಾದಳದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*