ನೇಕಾರರಿಗೆ 2 ಸಾವಿರ ನೆರವು : ಅರ್ಜಿ ಸಲ್ಲಿಕೆ ಜೂನ್ 30 ಕೊನೆ.

ಬಾಗಲಕೋಟೆ: ಕೋವಿಡ್-19 ಮಹಾಮಾರಿ ಲಾಕ್‍ಡೌನ್ ಪರಿಣಾಮದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿದ್ಯುತ್ ಮಗ್ಗಗಳಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ರಾಜ್ಯ ಸರಕಾರ ಒಂದು ಬಾರಿ ತಲಾ 2 ಸಾವಿರ ರೂ.ಗಳ ಪರಿಹಾರಧನವನ್ನು ಘೋಷಿಸಿದೆ.

ಅದರಂತೆ ಬಾಗಲಕೋಟೆ ಜಿಲ್ಲೆಯಲ್ಲಿನ 1 ರಿಂದ 20 ಹೆಚ್.ಪಿ ಗಳ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಘಟಕಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ವಿದ್ಯುತ್ ಮಗ್ಗ ನೇಕಾರರು ಸರ್ಕಾರವು ಘೋಷಿಸಿರುವ ಆರ್ಥಿಕ ನೆರವನ್ನು ಪಡೆಯಬಹುದಾಗಿರುತ್ತದೆ. ಪರಿಹಾರಧನವನ್ನು ನೇರವಾಗಿ ವಿದ್ಯುತ್ ಮಗ್ಗ ನೇಕಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕಾಗಿರುವುದರಿಂದ ನೇಕಾರರು ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಈಗಾಗಲೇ ಸೇವಾ ಸಿಂಧು ತಂತ್ರಾಂಶದಲ್ಲಿ ವಿದ್ಯುತ್ ಮಗ್ಗ ನೇಕಾರರ ನೊಂದಣಿ ಕಾರ್ಯ ಪ್ರಾರಂಭವಾಗಿದ್ದು, ಸಂಬಂಧಪಟ್ಟ ವಿದ್ಯುತ್ ಮಗ್ಗ ಘಟಕಗಳ ಮಾಲೀಕರು, ನೇಕಾರರು ತಮ್ಮ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ನೇಕಾರರ ಪೂರ್ಣ ವಿವರದೊಂದಿಗೆ ರೂ.20/- ಗಳ ಇಸ್ಟಾಂಪ್ (ಬಾಂಡ್ ಪೇಪರ್) ನ ಮುಚ್ಚಳಿಕೆ ಪತ್ರ ಹಾಗೂ ಇತರೆ ಅಗತ್ಯದಾಖಲೆಗಳೊಂದಿಗೆ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ, ಬಾಗಲಕೋಟೆ ಹಾಗೂ ಕರ್ನಾಟಕ ಮುಂದುವರೆದ ಕೈಮಗ್ಗ ತರಬೇತಿ ಕೇಂದ್ರ, ಜಮಖಂಡಿ ಕಛೇರಿಗಳಿಗೆ ಭೇಟಿ ನೀಡಿ ಜೂನ್-30 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ: 140/ 141, ಜಿಲ್ಲಾ ಪಂಚಾಯತ, ನವನಗರ-ಬಾಗಲಕೋಟೆ, ದೂರವಾಣಿ ಸಂಖ್ಯೆ: 08354-235463 ಇವರ ಕಛೇರಿಗೆ ಸಂಪರ್ಕಿಸಲು ತಿಳಿಸಲಾಗಿದೆ.

Be the first to comment

Leave a Reply

Your email address will not be published.


*