ವಲಸೆ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಕೊವಿಡ್-19 ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೈನಂದಿನ ಉಟೋಪಚಾರಕ್ಕಾಗಿ ವಲಸೆ ಕಾರ್ಮಿಕರು ಹಾಗೂ ಕೋವಿಡ್ ಪರಿಸ್ಥಿತಿಯಲ್ಲಿರುವ ರಾಜ್ಯದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆತ್ಮ ನಿರ್ಭರ್ ಭಾರತ ಯೋಜನೆ ಅಡಿಯಲ್ಲಿ ಮೇ ಮತ್ತು ಜೂನ್ ಮಾಹೆಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಈ ವಿಶೇಷ ಯೋಜನೆಯ ಅಕ್ಕಿಯನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವಧಿಯೊಳಗಾಗಿ ಬಳಕೆ ಮಾಡುವ ಬಗ್ಗೆ ಜಿಲ್ಲೆಗೆ 2373.98 ಕ್ವಿಂ ಅಕ್ಕಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರಬಾರದು, ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲು ಎಲ್ಲ ಫಲಾನುಭವಿಗಳಿಂದಲೂ ಅವರ ಆಧಾರ್ ಸಂಖ್ಯೆಯನ್ನು ಪಡೆದು ಆನ್‍ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ವಿತರಿಸತಕ್ಕದ್ದು. ಪ್ರತಿ ಫಲಾನುಭವಿಯ ಆಧಾರ ಸಂಖ್ಯೆ ಪರಿಶೀಲಿಸಿ ಅವರ ಮೊಬೈಲ್ ಸಂಖ್ಯೆಗೆ ಓ.ಟ.ಪಿ. ಬಂದ ನಂತರ ಅದನ್ನು ದಾಖಲಿಸಿ ಪಡಿತರ ವಿತರಣೆಗೆ ಕ್ರಮವಹಿಸಲಾಗುವದೆಂದರು.

ಮೇ 2020ರ ಮಾಹೆಗೆ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ಮೇ 26 ರಿಂದ 31 ರವರೆಗೆ ವಿತರಿಸಲಾಗುವದು. ಹಾಗೂ ಜೂನ್ ಮಾಹೆಯಲ್ಲಿ ಜೂನ್ 1 ರಿಂದ 10 ರವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಕಡಲೆ ಕಾಳನ್ನು ವಿತರಿಸಲಾಗುವದು. ಮೇ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಫಲಾನುಭವಿಗಳು ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳನ್ನು ಪಡೆಯಲು ಅರ್ಹರಿರುತ್ತಾರೆ. ವಲಸಿಗ ಫಲಾನುಭವಿಗಳು ಯಾವುದೇ ಪಡಿತರ ಚೀಟಿ ಹೊಂದಿರಬಾರದು ಹಾಗೂ ಸ್ವಂತ ಮನೆ ಹೊಂದಿರತಕ್ಕದ್ದಲ್ಲ ಮತ್ತು ಆದಾಯ ತೆರಿಗೆ ಪಾವತಿಸುತ್ತಿರಬಾರದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮತ್ತು ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 52ರಡಿ ಅಂತಹವರಿಗೆ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವದು. ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶದ ಆಯ್ದ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವುದು ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕ ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*