ಬೀದರ್:-.31ರವರೆಗೆ ಕಲಂ 144 ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ

ಬೀದರ್:- ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಕಲಂ 144ರ ನಿಷೇಧಾಜ್ಞೆಯನ್ನು ಕಂಟೇನಮೆಂಟ್ ವಲಯ ಎಂದು ಘೋಷಣೆ ಮಾಡಿರುವ ಪ್ರದೇಶವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ, ಕೆಲವು ಷರತ್ತುಗಳಿಗೆ ಒಳಪಟ್ಟು ಮೇ.31ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಆದೇಶ ಹೊರಡಿಸಿದ್ದಾರೆ.

ಈ ಆದೇಶವು ಮೇ.20 ರಿಂದ ಮೇ31ರ ಮಧ್ಯರಾತ್ರಿ 12 ಗಂಟೆಯವರೆಗೆ ಚಾಲ್ತಿಯಲ್ಲಿ ಇರುತ್ತದೆ ಮತ್ತು ಕಂಟೇನಮೆಂಟ್ ಝೋನ್ ವಲಯಕ್ಕೆ ಈ ಆದೇಶವು ಅನ್ವಯಿಸುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕರು ಗುಂಪು ಸೇರುವುದು ಹಾಗೂ ನಿಷೇಧಾಜ್ಞೆಯ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸದರಿಯವರ ವಿರುದ್ಧ 188 ಐ.ಪಿ.ಸಿ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬೀದರ್ ಜಿಲ್ಲೆ ಕಿತ್ತಳೆ ಬಣ್ಣ ಎಂದು ಘೋಷಿಸಿರುವುದರಿಂದ ಸರ್ಕಾರದಿಂದ ಈಗಾಗಲೆ ಕೋವಿಡ್-19 ಹರಡದಂತೆ ಕೈಗೊಂಡಿರುವ ನಿರ್ಬಂಧಗಳಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿರುತ್ತಾರೆ. ಬೀದರ್ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಈಗಾಗಲೇ ಆದೇಶಿಸಲಾಗಿತ್ತು. ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಜನದಟ್ಟಣೆಯನ್ನು ತಡೆಗಟ್ಟುವುದು ಅನಿವಾರ್ಯವಾಗಿರುತ್ತದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿರುವುದರಿಂದ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರ ನಿಷೇಧಾಜ್ಞೆ ಆದೇಶವನ್ನು ಮೇ.31ರವರೆಗೆ ವಿಸ್ತರಿಸುವುದು ಅತ್ಯವಶ್ಯಕವಾಗಿದ್ದು, ದಂಡ ಪ್ರಕ್ರಿಯಾ ಸಂಹಿತೆ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ಷರತ್ತುಗಳು ಏನೇನು*: ಬೀದರ್ ಜಿಲ್ಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದ್ದು ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಇರಬೇಕು. ಆದರೆ ವೈದ್ಯಕೀಯ ಕ್ಷೇತ್ರ ಮತ್ತು ಇತರೆ ಅತ್ಯಗತ್ಯ ಕ್ಷೇತ್ರಗಳ ಸೇವೆಗೆ ವಿನಾಯಿತಿ ನೀಡಲಾಗಿರುತ್ತದೆ. ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುತ್ತದೆ.

ಭಾನುವಾರದಂದು ಹೆಚ್ಚುವರಿಯಾಗಿ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳು, ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ. ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯ ಧರಿಸಬೇಕು. ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಲಾಗಿದ್ದು ಈ ನಿಯಮದ ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸಲಾಗುವುದು.

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರಿಗೆಯಲ್ಲಿ ಎಲ್ಲ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು.
ಮದುವೆಗಳನ್ನು 50 ಜನ ಮೀರದಂತೆ ಸಂಬಂಧಪಟ್ಟ ತಹಸೀಲ್ದಾರರ ಅನುಮತಿ ಪಡೆದ ನಂತರವೇ ಆಯೋಜಿಸಲು ಅನುಮತಿಸಿದೆ. ಮದುವೆಗಳಲ್ಲಿ ಆಯುಕ್ತರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ರವರು ಹೊರಡಿಸಿರುವ ನಿಯಮಗಳನ್ನು ಪಾಲಿಸಬೇಕು. ಶವ ಸಂಸ್ಕಾರ, ಅಂತಿಮ ಯಾತ್ರೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಗರಿಷ್ಠ 20 ಜನರಿಗಿಂತ ಮೇಲೆ ಸೇರದೇ ಇರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ. ಅಂಗಡಿಗಳಲ್ಲಿ ಗ್ರಾಹಕರು ಕನಿಷ್ಠ ಆರು ಅಡಿ ದೂರದಲ್ಲಿರುವುದನ್ನು ಖಚಿತಪಡಿಸುವುದು ಮತ್ತು ಅಂಗಡಿಯಲ್ಲಿ 2ಕ್ಕೂ ಹೆಚ್ಚು ವ್ಯಕ್ತಿಗೆ ಏಕಕಾಲದಲ್ಲಿ ಪ್ರವೇಶ ನೀಡಬಾರದು. ಕೆಲಸದ ಸ್ಥಳಗಳಲ್ಲಿ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಥರ್ಮಲ್ ಸ್ಕಾನಿಂಗ್, ಕೈತೊಳೆಯುವುದಕ್ಕೆ ಮತ್ತು ಸ್ಯಾನಿಟೈಜರ್‌ಗೆ ಅವಕಾಶ ಕಲ್ಪಿಸಬೇಕು. ಸಾಮೂಹಿಕವಾಗಿ ಧಾರ್ಮಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮಾಲ್, ಮಲ್ಟಿಪ್ಲಕ್ಸ್, ಸಿನಿಮಾ ಮಂದಿರಗಳು ತೆರೆಯಲು ಅನುಮತಿ ಇರುವುದಿಲ್ಲ. ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದೆ. ಹೋಟೆಲಗಳಲ್ಲಿ ಪಾರ್ಸಲಗಳ ಮೂಲಕ ಮಾತ್ರವೇ ಸೇವೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.         ವರದಿ:- ಚಂದ್ರಕಾಂತ ಹಳ್ಳಿಖೇಡಕರ ಬೀದರ್.

Be the first to comment

Leave a Reply

Your email address will not be published.


*