ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

ಅಂಕಣ

ಪತ್ರಕರ್ತ ಮತ್ತು ಪತ್ರಿಕಾವೃತ್ತಿ ಕುರಿತ ‘ದ ಕ್ಯಾರವಾನ್’ ಪ್ರಕಟಿಸಿರುವ ಅದರ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ ಜೋಸ್ ಅವರ ಲೇಖನದ(ಬೆಂಗಳೂರಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ’ ಘಟಿಕೋತ್ಸವದಲ್ಲಿ ಮಾಡಿದ ಭಾಷಣ) ಆಯ್ದಭಾಗ ಇಂದಿನಿಂದ ಸರಣಿ ರೂಪದಲ್ಲಿ ಪ್ರಕಟವಾಗಲಿದೆ. ಆ ಸರಣಿಯ ಮೊದಲ ಕಂತು ಇಲ್ಲಿದೆ;

ಕರೋನಾ ಸಂಕಷ್ಟದ ಹೊತ್ತಲ್ಲಿ ಭಾರತದ ಮಟ್ಟಿಗೆ ಅದು ಆಳುವ ಸರ್ಕಾರಗಳ ಮಿತಿ ಹಾಗೂ ಆಳುವ ಮಂದಿಯ ಮಿತಿಗಳೂ ಬಯಲಾಗಿವೆ. ಹಾಗೇ ಪತ್ರಿಕೋದ್ಯಮದ ಕಾಳಜಿಗಳೇನು. ಪತ್ರಿಕೋದ್ಯಮ ಯಾರ ಹಿತ ಕಾಯುತ್ತಿದೆ ಎಂಬುದೂ ಬಯಲಾಗಿದೆ. ಒಂದು ಮಾರಣಾಂತಿಕ ಮಹಾಮಾರಿಯನ್ನೂ ಧರ್ಮ, ಜಾತಿ, ಹಣಕಾಸು ಶಕ್ತಿ, ಪ್ರಭಾವಗಳ ನೆಲೆ ಮೇಲೆ ಹೆಸರಿಸಿ, ವಿಂಗಡಿಸಿ ಪತ್ರಿಕಾವೃತ್ತಿ ಧರ್ಮ ಹೇಗಿರಬಾರದು ಎಂಬುದಕ್ಕೆ ಭಾರತೀಯ ಮುಖ್ಯವಾಹಿನಿ ಮಾಧ್ಯಮ ಮಾದರಿ ಹಾಕಿಕೊಟ್ಟಿದೆ. ಇದೇ ಹೊತ್ತಿಗೆ ಪತ್ರಿಕಾವೃತ್ತಿ ಧರ್ಮದ ಹೆಗ್ಗಳಿಕೆಯ ಸಾಧನೆಗಾಗಿ ಕಾಶ್ಮೀರದ ಮೂವರು ಪತ್ರಕರ್ತರು ಪ್ರತಿಷ್ಠಿತ ಪುಲಿಟ್ಜರ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ರಾಜಕಾರಣಿಗಳು ಬಹುತೇಕ ಆಡುವ ಮಾತುಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಅಮೆರಿಕದ ಮಾಜಿ ಅಧ್ಯಕ್ಷ ಥಿಯೋಡರ್ ರೋಸ್ ವೆಲ್ಟ್ ನ ಈ ಮಾತುಗಳು ಮಾತ್ರ ನಮ್ಮ ವೃತ್ತಿಗೆ ಬಹಳ ಸೂಕ್ತವಾಗಿವೆ ಎನಿಸಿದೆ.

1904ರ ಏಪ್ರಿಲ್ ನಲ್ಲಿ ರೋಸ್ ವೆಲ್ಟ್ ಹೇಳಿದ:

ತಿಂಗಳು, ವಾರ, ದಿನವೆನ್ನದೆ ನಿರಂತರವಾಗಿ ಬರೆಯುವ ಮನುಷ್ಯ, ನಮ್ಮ ಜನಗಳ ಗ್ರಹಿಕೆಯನ್ನು ರೂಪಿಸುವ ಸರಕನ್ನು ಒದಗಿಸುತ್ತಾನೆ. ಮುಖ್ಯವಾಗಿ ಆತ ಇತರರಿಗಿಂತ ಹೆಚ್ಚು ಜನರ ವ್ಯಕ್ತಿತ್ವ ಮತ್ತು ಆ ಜನ ಯಾವ ತರಹದ ಸರ್ಕಾರವನ್ನು ಹೊಂದಬೇಕು ಎಂಬುದನ್ನು ನಿರ್ಧರಿಸುತ್ತಾನೆ.

ಅಂದರೆ ಪತ್ರಕರ್ತರ ಹೊಣೆಗಾರಿಕೆ ದೊಡ್ಡದಿದೆ ಎಂದರ್ಥ. ತಿಂಗಳು, ವಾರ, ದಿನವೆನ್ನದೆ ನಿರಂತರ ಆತ/ಆಕೆ ಮಾಡುವ ವರದಿಗಳು, ತಮ್ಮ ಕರ್ತವ್ಯ ನಿಭಾಯಿಸದೆ ಮತ್ತು ತಮ್ಮ ನೀತಿಗಳ ಬಗ್ಗೆ ಉತ್ತರದಾಯಿಯಲ್ಲದ ನಾಯಕರು ತಮ್ಮ ಅಧಿಕಾರ ಸ್ಥಾನದಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಡುವುದು ಅಥವಾ ಅನರ್ಹ ನಾಯಕ ಅಥವಾ ಸರ್ಕಾರವೊಂದನ್ನು ಹೊಗಳುವುದು, ಅಥವಾ ಒಬ್ಬ ನಾಯಕ ಅಥವಾ ಸರ್ಕಾರದ ವಿರುದ್ಧದ ವಾಸ್ತವಾಂಶ ಮತ್ತು ಸಾಕ್ಷ್ಯಗಳನ್ನು ಕಡೆಗಣಿಸುವುದು ಮಾಡಿದ್ದಲ್ಲಿ; ಜನ ಎಂಥ ಸರ್ಕಾರವನ್ನು ಹೊಂದಬೇಕು ಎಂಬ ವಿಷಯದಲ್ಲಿ ಆತ/ ಆಕೆ ಪಕ್ಷಪಾತ ಮಾಡಿದಂತಾಗುತ್ತದೆ. ರೋಸ್ ವೆಲ್ಟ್ ಗುರುತಿಸಿದ ಪತ್ರಕರ್ತರ ಈ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿಯೇ ಇತಿಹಾಸದುದ್ದಕ್ಕೂ ಅಧಿಕಾರಸ್ಥರು ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳನ್ನು ಪಳಗಿಸುವ ಮಹತ್ವ ಅರಿತಿದ್ದರು. ಕೆಲವು ದೇಶಗಳಲ್ಲಿ ನಾಯಕರು ಬೇರೆಲ್ಲದಕ್ಕಿಂತ ಯಶಸ್ವಿಯಾಗಿ ಪತ್ರಕರ್ತರು ಮತ್ತು ಮಾಧ್ಯಮವನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಲ್ಲರು. ಆದರೆ, ಒಬ್ಬ ಪ್ರಭಾವಿ ವ್ಯಕ್ತಿ ತನ್ನ ಕಾಲದ ಮಾಧ್ಯಮಕ್ಕೆ ಎಷ್ಟರಮಟ್ಟಿಗೆ ಲಗಾಮು ಹಾಕಬಲ್ಲ ಎಂಬುದು ಅಂತಿಮವಾಗಿ ವ್ಯಕ್ತಿಗತವಾಗಿ ಪತ್ರಕರ್ತನ ಕೈಯಲ್ಲಿರುತ್ತದೆ.

ಇಂದು ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥೆಗಳ ಸ್ಥಿತಿಗತಿ ನೋಡುವ ಮುನ್ನ; ಅಂದು ಪತ್ರಕರ್ತರನ್ನು ಬಗೆಬಗೆಯಲ್ಲಿ ಬಣ್ಣಿಸಿದ ರೋಸ್ ವೆಲ್ಟ್, ಸ್ವತಃ ತನ್ನ ವಿರುದ್ಧವೇ ಭ್ರಷ್ಟಾಚಾರ ಹಗರಣ ಬಯಲಿಗೆಳೆದ ತೀಕ್ಷ್ಣಮತಿ ಪತ್ರಕರ್ತನ ಬಗ್ಗೆ ಏನು ಮಾಡಿದರು ಎಂದು ಗಮನಿಸೋಣ.

1909ರಲ್ಲಿ ಹಾಗೆ ರೋಸ್ ವೆಲ್ಟ್ ವಿರುದ್ಧವೇ ಗಂಭೀರ ಪ್ರಕರಣ ಬಯಲಿಗೆಳೆದ ಆ ಪತ್ರಕರ್ತ, ಬೇರಾರೂ ಅಲ್ಲ ಪತ್ರಿಕೋದ್ಯಮದ ದಂತಕಥೆಯಾಗಿರುವ ಜೋಸೆಫ್ ಪುಲಿಟ್ಜರ್. ತನ್ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯಲ್ಲಿ ಪನಾಮಾ ಕಾಲುವೆ ನಿರ್ಮಾಣ ಯೋಜನೆಯಲ್ಲಿ ಬರೋಬ್ಬರಿ 40 ಮಿಲಯನ್ ಡಾಲರ್ ಹಣದ ಅವ್ಯವಹಾರ ನಡೆದಿರುವ ಕುರಿತ ತನಿಖಾ ವರದಿ ಪ್ರಕಟಿಸಿದರು. ಯೋಜನಾ ಮೊತ್ತದಲ್ಲಿ ಹಾಗೆ ದುರ್ಬಳಕೆಯಾದ ಹಣ ಜೆಪಿ ಮಾರ್ಗನ್ ಎಂಬ ಅಮೆರಿಕ ಕಂಪನಿ ಮತ್ತು ಸ್ವತಃ ರೋಸ್ ವೆಲ್ಟ್‌ನ ಬಾವಮೈದುನನ ಪಾಲಾಗಿದೆ ಎಂಬುದನ್ನೂ, ವಾರಗಟ್ಟಲೆ, ದಿನಗಟ್ಟಲೆ ನಿರಂತರ ಕೆಲಸ ಮಾಡಿದ ಆ ವರದಿಗಾರ ಸಾಕ್ಷ್ಯಸಹಿತ ಉಲ್ಲೇಖಿಸಿದ್ದ. ಆದರೆ, ಆ ವರದಿಯ ಹಿನ್ನೆಲೆಯಲ್ಲಿ ರೋಸ್ ವೆಲ್ಟ್, ಪತ್ರಕರ್ತ ಪುಲಿಟ್ಜರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಜೈಲಿಗೆ ಕಳಿಸುವ ಬೆದರಿಕೆ ಹಾಕಿದರು. ಪ್ರಕರಣ ಮೂರು ವರ್ಷ ಕಾಲ ನಡೆಯಿತು. ಅಂತಿಮವಾಗಿ ಅಮೆರಿಕ ಸುಪ್ರೀಂಕೋರ್ಟಿನಲ್ಲಿ ಪುಲಿಟ್ಜರ್ ಪರ ತೀರ್ಪು ಬಂದಿತು. ದೇಶದ ಪ್ರಭಾವಿ ವ್ಯಕ್ತಿಯೊಬ್ಬರ ವಿರುದ್ಧ ಪತ್ರಕರ್ತನೊಬ್ಬ ಸೆಣೆಸಿ ಜಯಗಳಿಸಿದ ಆರಂಭದ ಪ್ರಕರಣಗಳಲ್ಲಿ ಇದೂ ಒಂದು. ಆ ಬಳಿಕ ವಾಟರ್ ಗೇಟ್ ಪ್ರಕರಣ, ಪೆಂಟಗಾನ್ ಪೇಪರ್ಸ್ ನಂತಹ ಹಲವು ಪ್ರಕರಣಗಳಲ್ಲಿ ಪತ್ರಕರ್ತರು ಮೇಲುಗೈ ಸಾಧಿಸಿದರು.

ಪುಲಿಟ್ಜರ್, ದ ವಾಷಿಂಗ್ಟನ್ ಪೋಸ್ಟ್, ದ ನ್ಯೂಯಾರ್ಕ್ ಟೈಮ್ಸ್ ಗೆ ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವದ ಅತ್ಯಂತ ಪ್ರಭಾವಿ ಶಕ್ತಿಗಳ ವಿರುದ್ಧ ಹೋರಾಡಿದ ಹೆಗ್ಗಳಿಕೆ ಇದೆ. ಆದರೆ, ಪತ್ರಕರ್ತರು ಮತ್ತು ಅವರ ಕೆಲಸದ ಕಾರಣಕ್ಕಾಗಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಎಷ್ಟು ಪತ್ರಿಕೆಗಳು ತಮ್ಮ ನೆಲದ ಪ್ರಭಾವಿ ಶಕ್ತಿಗಳ ವಿರುದ್ಧ ಅಂತಹ ಹೋರಾಟ ನಡೆಸಿವೆ? ಎಂಬ ಪ್ರಶ್ನೆಗೆ ಉತ್ತರ ವಿರಳ.

ಪತ್ರಿಕಾವೃತ್ತಿ ಎಂಬುದು ನಮ್ಮಿಂದ ಬಹಳಷ್ಟು ನಿರೀಕ್ಷೆ ಮಾಡುವ ಒಂದು ಉದ್ಯೋಗ. ಪತ್ರಕರ್ತನಾದವನಿಗೆ ಬಹಳಷ್ಟು ಸಂಗತಿಗಳ ಬಗ್ಗೆ ಆಳ ಅರಿವು ಬೇಕಾಗುತ್ತದೆ. ಅತಿ ಮಹತ್ವದ ವಿಷಯಗಳ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳುವ ಶಕ್ತಿ ಇರಬೇಕಾಗುತ್ತದೆ. ಸಮಾಜದ ಪ್ರಭಾವಿಗಳ ಆಕ್ರೋಶ ಮತ್ತು ದಬ್ಬಾಳಿಕೆಗೂ ಬಲಿಯಾಗಬೇಕಾಗುವುದರಿಂದ ಪತ್ರಕರ್ತರು, ತಮ್ಮ ವರದಿಗಳ ವಿಷಯದಲ್ಲಿ ಪ್ರಕಟಣಾಪೂರ್ವದಲ್ಲಿ ಮತ್ತು ಪ್ರಕಟಣೆಯ ಬಳಿಕ ಪತ್ರಕರ್ತರು ಬಹಳಷ್ಟು ಜಾಣ್ಮೆ ಮತ್ತು ತಂತ್ರಗಾರಿಕೆಯನ್ನೂ ಹೊಂದಿರಬೇಕಾಗುತ್ತದೆ. ಇಂತಹ ಸವಾಲಿನ ವೃತ್ತಿಯಲ್ಲಿ ಮೇಲೆ ಬರಬೇಕೆಂದರೆ ಪತ್ರಕರ್ತರಾದವರು ಸಾಕಷ್ಟು ತಯಾರಿ ನಡೆಸಬೇಕಾಗುತ್ತದೆ, ತಮ್ಮದೇ ಆದ ರಕ್ಷಣಾತ್ಮಕ ತಂತ್ರಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅಂತಹ ಅಸ್ತ್ರಗಳು ಸದಾ ಹರಿತವಾಗಿರುವಂತೆಯೂ ನೋಡಿಕೊಳ್ಳಬೇಕಾಗುತ್ತದೆ.

ಆದರೆ, ಭಾರತೀಯ ಮಾಧ್ಯಮ ಸಂಸ್ಥೆಗಳ ವಿಷಯದಲ್ಲಿ ನೈಜ ಪತ್ರಕರ್ತರು ಇನ್ನಷ್ಟು ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ, ಅಲ್ಲಿ ಸುಲಭವಾಗಿ ಹೊಗಳಿಕೆಯ ಮೂಲಕವೇ ಅಂತಹವರನ್ನು ಮಣಿಸುವ ಕಲೆಗಾರಿಕೆ ಸಿದ್ಧಿಸಿರುವವರು ಹೆಚ್ಚಿದ್ದಾರೆ. ಹೊಗಳಿ ಅಟ್ಟಕ್ಕೇರಿಸಿ ನಿಮ್ಮೊಳಗೆ ಇಲ್ಲದ ಭ್ರಮೆ ಬಿತ್ತಿ ಆತ್ಮ ತೃಪ್ತಿ ಮತ್ತು ಅದು ತರುವ ಜಡ್ಡುಗಟ್ಟಿದ ಮನಸ್ಥಿತಿಯೇ ಪತ್ರಕರ್ತರಾಗಿ ನಿಮ್ಮ ಕ್ರಿಯಾಶೀಲತೆ ಮತ್ತು ವೃತ್ತಿಪರತೆಯನ್ನು ಕೊಂದುಹಾಕಬಲ್ಲದು. ಪ್ರಸಂಶೆ ಎಂಬುದು ಆತ್ಮವಿಶ್ವಾಸ ಮತ್ತು ಆತ್ಮಗೌರವದ ವಿಷಯದಲ್ಲಿ ಅಗತ್ಯವೇ. ಆದರೆ, ಅದು ಅಧಿಕಾರಸ್ಥರ ಏಜೆಂಟರ ಕಡೆಯಿಂದ ಬಂದಾಗ, ಅದು ನಿಮ್ಮೊಂದಿಗೆ ನಂಟು ಬೆಸೆಯುವ ಕಳ್ಳ ಹೆಜ್ಜೆ ಎಂಬುದನ್ನು ನೀವು ಅರಿಯದೇ ಹೋದರೆ, ಅನಾಹುತ ಖಚಿತ. ಪ್ರಸಂಶೆಯ ಮಾತುಗಳೊಂದಿಗೆ ಒಂದು ವರದಿ ಹೇಗಿರಬೇಕು, ಯಾಕೆ ಕೆಲವು ವಿಷಯಗಳ ಕುರಿತು ವರದಿ ಮಾಡದಿರುವುದು ಒಳಿತು ಎಂಬ ಆಪ್ತ ಸಲಹೆಯೂ ನಿಮಗೆ ಪುಗಸಟ್ಟೆಯಾಗಿ ಸಿಗುತ್ತದೆ. ಅಂತಿಮವಾಗಿ, ನಿಮ್ಮ ಕೆಲಸದ ಕುರಿತು ಅವರ ತೀರ್ಮಾನವೇ ಅಂತಿಮವಾಗಿಬಿಡುತ್ತದೆ!

ಇಂತಹ ಹುನ್ನಾರಗಳನ್ನು ಮೆಟ್ಟಿ ಬೆಳೆಯಲು ಪತ್ರಕರ್ತನಾದವನಿಗೆ ತನ್ನದೇ ವಿವೇಚನೆ, ವಿವೇಕ ಮತ್ತು ನೈತಿಕ ಸ್ಥೈರ್ಯ ಬೇಕಾಗುತ್ತದೆ. ಆ ದಿಸೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸುವವರು ಮುಖ್ಯವಾಗಿ ಐದು ವಿಷಯಗಳಲ್ಲಿ ಪರಿಣತಿ ಸಾಧಿಸಬೇಕಾಗುತ್ತದೆ. ಆ ಮೂಲಕ ತಮ್ಮನ್ನು ನೈಜ ವೃತ್ತಿಪರತೆಯಿಂದ ವಿಮುಖಗೊಳಿಸುವ, ಎದೆಗುಂದಿಸುವ ಶಕ್ತಿಗಳಿಗೆ ಬಲಿಯಾಗದಂತೆ ತಮ್ಮನ್ನೂ ತಮ್ಮ ವೃತ್ತಿಧರ್ಮವನ್ನೂ ಉಳಿಸಿಕೊಳ್ಳುವುದು ಸಾಧ್ಯ. ಜೊತೆಗೆ ಪತ್ರಕರ್ತನಾಗಿ ಪ್ರಯೋಜನಕ್ಕೆ ಬಾರದ ಕೆಲಸ ಮಾಡುವ ಏಕತಾನತೆಯಿಂದ ಪಾರಾಗುವುದು ಕೂಡ ಸಾಧ್ಯ.

ಸುದ್ದಿಯ ಗ್ರಹಿಕೆ, ಖಚಿತ ವಿವೇಚನಾ ಶಕ್ತಿ, ನೈತಿಕ ಸ್ಥೈರ್ಯ, ವಿಷಯ ತಜ್ಞತೆ ಮತ್ತು ವರದಿಗಾರಿಕೆಯ ಕೌಶಲ್ಯ; ಇವೇ ಆ ಐದು ಅಂಶಗಳು. ಪತ್ರಕರ್ತರಾಗಿ ನಿಮ್ಮ ವೃತ್ತಿ ಯಶಸ್ಸು ಮತ್ತು ಸಾಧನೆ ಈ ಐದು ವಿಷಯಗಳಲ್ಲಿ ನೀವೆಷ್ಟು ನಿಮ್ಮನ್ನು ಸೂಕ್ಷ್ಮಗೊಳಿಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿಂತಿರುತ್ತದೆ.

ಸುದ್ದಿ ಗ್ರಹಿಕೆ ಎಂಬುದು ಹುಟ್ಟಿನಿಂದಲೇ ಬರುತ್ತದೆಯೇ? ಪತ್ರಕರ್ತನೊಬ್ಬ ಹುಟ್ಟುತ್ತಲೇ ಪತ್ರಕರ್ತನಾಗಿರುತ್ತಾನೆ, ಪತ್ರಕರ್ತರನ್ನು ತಯಾರಿಸಲಾಗದು ಎಂಬ ಮಾತು ನಿಜವೇ? ಧೈರ್ಯ, ಸ್ಥೈರ್ಯದಂತಹ ಕೆಲವು ಮೂಲಭೂತ ಗುಣಗಳು ವ್ಯಕ್ತಿಯೊಬ್ಬನಲ್ಲಿ ಹುಟ್ಟಿನಿಂದಲೇ ಬರುತ್ತವೆ. ಯಾವುದು ಸುದ್ದಿ ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ಶಕ್ತಿ ಕೆಲವೊಮ್ಮೆ ಬಾಲ್ಯದ ಅನುಭವ, ಅಭ್ಯಾಸಗಳಿಂದಲೇ ಬರುತ್ತದೆ. ಆದರೆ, ತರಬೇತಿ ಮತ್ತು ಅನುಭವ ಈ ಶಕ್ತಿಯನ್ನು ಇನ್ನಷ್ಟು ಸ್ಪುಟಗೊಳಿಸುತ್ತದೆ. ಬಾಲ್ಯದಿಂದಲೇ ಅಂತಹ ಗ್ರಹಿಕೆ ಇಲ್ಲದವೂ ತರಬೇತಿ ಮತ್ತು ಅಭ್ಯಾಸದ ಮೂಲಕ ರೂಢಿಸಿಕೊಳ್ಳಬಹುದು ಕೂಡ.

ಸುದ್ದಿ ಗ್ರಹಿಕೆಯ ಜೊತೆಗೆ ಎದುರಾಗುವ ಪ್ರಶ್ನೆ ಪತ್ರಕರ್ತನೆಂದರೆ ಯಾರು? ಎಂಬುದು.

ಪುಲಿಟ್ಜರ್ ಆ ಕುರಿತು ಹೇಳುವುದು ಕೇಳಿ;

ಪತ್ರಕರ್ತನೆಂದರೆ ಯಾರು? ಆತನ ಯಾವುದೇ ಉದ್ಯಮದ ವ್ಯವಸ್ಥಾಪಕನಲ್ಲ, ಅಥವಾ ಪ್ರಕಾಶಕನೂ ಅಲ್ಲ. ಮಾಲೀಕ ಕೂಡ ಅಲ್ಲ. ದೇಶವೆಂಬ ಹಡಗಿನ ಕಣ್ಗಾವಲುಗಾರನಂತೆ ಆತ. ಹಡಗಿನ ಸಾಗುವ ದಾರಿಯ ಅಡ್ಡಿಆತಂಕಗಳು, ಅಪಾಯಗಳ ಮುನ್ಸೂಚನೆ ನೀಡುವ ಕೆಲಸ ಆತನದ್ದು. ತನ್ನ ಸಂಬಳ ಅಥವಾ ತನ್ನ ಮಾಲೀಕನ ಲಾಭದ ಹಂಗು ತೊರೆದು ತನ್ನ ವೃತ್ತಿಧರ್ಮ ಪಾಲಿಸುವುದು ಪತ್ರಕರ್ತನ ಕರ್ತವ್ಯ. ತನ್ನ ಮೇಲೆ ನಂಬಿಕೆ ಇಟ್ಟಿರುವ ಜನರ ಹಿತ ಮತ್ತು ಸುರಕ್ಷತೆಯ ಮೇಲೆ ಕಣ್ಗಾವಲು ಇಡುವುದು ಪತ್ರಕರ್ತನ ಹೊಣೆ. ಪತ್ರಕರ್ತನ ಸುದ್ದಿ ಗ್ರಹಿಕೆ ಈ ಪ್ರಾಥಮಿಕ ಹೊಣೆಗಾರಿಕೆಯ ಪ್ರೇರಣೆಯೊಂದಿಗೆ ಜೊತೆಯಾಗಿ ಸಾಗಬೇಕಾಗುತ್ತದೆ. ಹಾಗಾಗಿ ಪತ್ರಕರ್ತರಾಗುವುದೆಂದರೆ, ಒಬ್ಬ ಕಲಾವಿದೆ, ಒಬ್ಬ ಚಿಂತಕ, ಒಬ್ಬ ಸಾಹಿತಿ ಅಥವಾ ಸಾರ್ವಜನಿಕ ಹಿತಾಸಕ್ತಿಯ ವಕೀಲರಷ್ಟೇ ಸಾಮಾಜಿಕ ಹೊಣೆಗಾರಿಕೆಗೆ ಹೆಗಲಾಗುವುದು. ಹಾಗಾಗಿ ಪತ್ರಕರ್ತ ಉದ್ಯಮಿಯಲ್ಲ; ದಲ್ಲಾಳಿಯಲ್ಲ; ವ್ಯಾಪಾರಿಯಲ್ಲ, ರಾಜಕಾರಣಿಯಲ್ಲ. ಲಾಭನಷ್ಟದ ಮೇಲೆ ಕಣ್ಣಿಟ್ಟು ಕೆಲಸ ಮಾಡುವ ವೃತ್ತಿ ಪತ್ರಕರ್ತನದ್ದಲ್ಲ.

(ಕೃಪೆ: ದಿ ಕ್ಯಾರವಾನ್) (ಮುಂದುವರಿಯುವುದು)

Be the first to comment

Leave a Reply

Your email address will not be published.


*