ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ಸಾಧಿಸಿ ತೋರಿಸಿದ ಮೂಡಲಗಿಯ ಸಾಫ್ಟವೇರ್ ಇಂಜಿನಿಯರ್

ವರದಿ: ಅಮರೇಶ ಕಾಮನಕೇರಿ ಸಂಪಾದಕರು

ನಮ್ಮವರು ಹೆಮ್ಮೆಯವರು

ಹೀಗೊಬ್ಬ ಯುವಕ. ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸೀನಿಯರ್ ಟ್ಯಾಕ್ಸ್ ಅಸೋಸಿಯೇಟ್ ಆಗಿ ಐದಂಕಿಯ ಸಂಬಳ ಪಡೆಯುತ್ತಿದ್ದ. ಯಾಕೊ ಮರಳಿ ಊರಿಗೆ ಹೋಗಿ ಭೂಮಿಯ ಸೇವೆ ಮಾಡಬೇಕೆನ್ನಿಸಿತು. ಮುಲಾಜಿಲ್ಲದೇ ಕೆಲಸ ಬಿಟ್ಟು ನಡೆದೇಬಿಟ್ಟ. ಮನೆಯಲ್ಲಿ ಅಚ್ಚರಿ. ಪ್ರತಿ ತಿಂಗಳು ಅರಸಿ ಬರುವ ಸಂಬಳವನ್ನು ಬಿಟ್ಟು ದುಡ್ಡನ್ನು ಅರಸಿಕೊಂಡು ಹೋಗುವ ಕೃಷಿ ಕೆಲಸಕ್ಕೆ ಬಂದುಬಿಟ್ಟಿದ್ದಾನಲ್ಲಾ ಎಂಬ ಆತಂಕ! ಅಕ್ಕಪಕ್ಕದ ರೈತರ ಮೂದಲಿಕೆ. ಅದರಲ್ಲೂ ರಾಸಾಯನಿಕಗಳನ್ನು ಬಳಸದ ನೈಸರ್ಗಿಕ ಕೃಷಿಯನ್ನು ಮಾಡುತ್ತೇನೆಂದಾಗಲಂತೂ ಎಲ್ಲರೂ ನಕ್ಕವರೇ. ಈತ ಛಲ‌ ಬಿಡಲಿಲ್ಲ. ಮುಂದಿನ ಪ್ರಯತ್ನಗಳಿಗಾಗಿ ಬ್ಯಾಂಕಿಗೆ ಹೋಗಿ ಸಾಲ ಕೇಳಿದಾಗಲೇ ಮನೆಯವರು ಅದಾಗಲೇ ಸಾಲ ಮಾಡಿಬಿಟ್ಟಿದ್ದಾರೆಂದು ಗೊತ್ತಾಗಿದ್ದು! ಬ್ಯಾಂಕ್ ಮ್ಯಾನೇಜರ್ ಮನವೊಲಿಸಿ ಆ ಸಾಲವನ್ನೂ ತೀರಿಸುತ್ತೇನೆಂಬ ಭರವಸೆ ಕೊಟ್ಟು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಕೆಲಸ ಮುಂದುವರಿಸಿದ.

ಮೊತ್ತಮೊದಲಿಗೆ ದೇಸೀ ಹಸುಗಳನ್ನು ಸಾಕಿದ. ಅಲ್ಲಿಂದಾಚೆಗೆ ಗೋಮಯ, ಗೋಮೂತ್ರಗಳನ್ನು ಬಳಸಿ ಕಬ್ಬು ಬೆಳೆದ. ಎಲ್ಲರಂತೆ ಅದನ್ನು ಕಾರ್ಖಾನೆಗೆ ಕಳಿಸದೇ ಗಾಣಕ್ಕೊಯ್ದು ಬೆಲ್ಲ ಮಾಡಿಸಿದ. ಟೆಕ್ಕಿಯಾಗಿದ್ದರಿಂದ ಆನ್‌ಲೈನ್‌ನಲ್ಲೇ ಅದನ್ನು ಮಾರಾಟ ಮಾಡುವ ದಾರಿಯನ್ನೂ ಹುಡುಕಿಕೊಂಡ. ನಿಧಾನವಾಗಿ ಈರುಳ್ಳಿ, ಸಿರಿಧಾನ್ಯ, ಕೆಲವೊಂದಿಷ್ಟು ತರಕಾರಿಗಳನ್ನು ಬೆಳೆದು ನೈಸರ್ಗಿಕ ಕೃಷಿಕರಿಗೆ ಮಾರ್ಗದರ್ಶಕನೂ ಆಗಿಬಿಟ್ಟ!

ಈ ಪುಣ್ಯಾತ್ಮನ‌ ಸಾಧನೆಯನ್ನು ನೋಡಿ ದೆಹಲಿಯ ಸಂಸ್ಥೆಯೊಂದು modern farmer ಪ್ರಶಸ್ತಿಯನ್ನು ಕೊಟ್ಟು ಅಭಿನಂದಿಸಿತೂ ಕೂಡ. ಈಗ ತಾನಷ್ಟೇ ಅಲ್ಲದೇ ತನ್ನೊಂದಿಗೆ ಇನ್ನೊಂದಷ್ಟು ರೈತರನ್ನು ನೈಸರ್ಗಿಕ ಕೃಷಿಯತ್ತ ಎಳೆದುಕೊಂಡು ಬಂದು ಜನರಿಗೆ ಆರೋಗ್ಯ ಹಂಚುವ ಕಾಯಕದಲ್ಲಿ ನಿರತನಾಗಿದ್ದಾನೆ. ಬೆಳಗಾವಿಯ ಗೋಕಾಕಿನ ಯರಗುದ್ದಿ ಎಂಬ ಹಳ್ಳಿಯ ವೆಂಕಟೇಶ್ ಮೂಲಿಮನಿ ಲಾ‌ಕ್‌ಡೌನಿನ ಹೊತ್ತಿನಲ್ಲಿ ಎಲ್ಲರಂತೆ ಹಳ್ಳಿಗೆ ಹೋದವನಲ್ಲ. ಬದಲಿಗೆ ಹಳ್ಳಿಯಲ್ಲಿ ಕುಳಿತು ಲಾಕ್‌ಡೌನಿನ ಹೊತ್ತಿನಲ್ಲಿ ಓಡಿ ಬರುತ್ತಿರುವವರನ್ನು ಕಂಡು ನಗುತ್ತಿದ್ದ!

ಊರಿನಲ್ಲಿ ಜಮೀನು ಹೊಂದಿದ್ದು ಬೆಂಗಳೂರಿನ ಧಾವಂತದ ಜೀವನ ಬೇಸರ ತಂದ ನಂತರವೂ ಅನಿವಾರ್ಯವಾಗಿ ದುಡಿಯುತ್ತಿರುವವರೆಲ್ಲರಿಗೂ ಆತ ಮಾದರಿ. ನಿಮಗೂ ಲಾಕ್‌ಡೌನ್ ಮುಗಿದ ನಂತರ ಬೆಂಗಳೂರಿಗೆ ಬರದೇ ಹಳ್ಳಿಯಲ್ಲೇ ಉಳಿಯಬೇಕೆಂಬ ಮನಸ್ಸಿದ್ದರೆ Venkey L Mulimani ಬಳಿಯೊಮ್ಮೆ ಚರ್ಚಿಸಿ. ನಿಮಗೆ ಸಾಕಷ್ಟು ಮಾಹಿತಿ ಕೊಡಬಲ್ಲ. ಪ್ರೇರಣೆಯೂ ಆಗಬಲ್ಲ.
9902670073

Be the first to comment

Leave a Reply

Your email address will not be published.


*