ಜೀಲ್ಲಾ ಸುದ್ದಿಗಳು
ಬೀದರ. ಏಪ್ರಿಲ್ ೨೩ (ಅಂಬಿಗ ನ್ಯೂಸ್ ): ಲಾಕ್‌ಡೌನ್ ಹಿನ್ನೆಲೆ ಮತ್ತು ಕೋವಿಡ್-೧೯ ಕರೋನಾ ವೈರಾಣು ಹರಡುವಿಕೆ ತಡೆಗೆ ವಹಿಸಲಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಏ.೨೩ರಂದು ಭಾಲ್ಕಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಆಸ್ಪತ್ರೆಗಳು, ಚೆಕ್‌ಪೋಸ್ಟ್ ಮತ್ತು ಕ್ವಾರಂಟೈನ್ ಸೇಂಟರಗಳಿಗೆ ಖುದ್ದು ಭೇಟಿ ನೀಡಿ, ಮಾಹಿತಿ ಪಡೆದರು.
ಭಾಲ್ಕಿಯ ತಾಲೂಕು ಆಸ್ಪತ್ರೆ ಹಾಗೂ ಧನ್ನೂರ ಮತ್ತು ಖಟಕ್‌ಚಿಂಚೋಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆಯಲ್ಲಿ ಆಸ್ಪತ್ರೆಯಲ್ಲಿನ ಸ್ಥಿತಿಗತಿ ಬಗ್ಗೆ ಜಿಲ್ಲಾಧಿಕಾರಿಗಳು ಅಲ್ಲಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಗೆ ಚರ್ಚಿಸಿದರು.
ಕರೋನಾ ವೈರಾಣು ಪಸರಿಸುತ್ತಿರುವ ಇಂತಹ ಸಂದರ್ಭದಲ್ಲಿ ಜನರಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಸ್ಪತೆಗಳನ್ನು ಎಲ್ಲ ರೀತಿಯಿಂದ ಸುಸಜ್ಜಿತವಾಗಿಟ್ಟುಕೊಳ್ಳಲು ಮತ್ತು ಏನಾದರು ಕೊರೆತೆ ಕಾಣಿಸಿದಲ್ಲಿ ಕೂಡಲೇ ತಮಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಲೂಕು ವೈದ್ಯಾಧಿಕಾರಿ ಜ್ಞಾನೇಶ್ವರ ನಿರಗುಡೆ ಸೇರಿದಂತೆ ಇನ್ನೀತರರಿಗೆ ತಿಳಿಸಿದರು. ಆಶಾ ಕಾರ್ಯಕರ್ತೆಯರಿಗೆ ಆಗಾಗ ತರಬೇತಿಗೆ ವ್ಯವಸ್ಥೆ ಮಾಡಿ ಮನೆಮನೆ ಸರ್ವೆಕಾರ್ಯವನ್ನು ಮತ್ತೊಮ್ಮೆ ನಡೆಸಲು ಜಿಲ್ಲಾಧಿಕಾರಿಗಳು ವೈದ್ಯಾಧಿಕಾರಿಗಳಿಗೆ ಇದೆ ವೇಳೆಯಲ್ಲಿ ಸೂಚಿಸಿದರು. ಪಿವರ್ ಕ್ಲಿನಿಕ್‌ಗಳು ಒಂದೇ ಕಡೆಗೆ ಇರದೇ ಅಂತರದಲ್ಲಿರುವಂತೆ ನೋಡಿಕೊಳ್ಳಲು ಸಲಹೆ ಮಾಡಿದರು.
ಕಟ್ಟಿತುಗಾಂವ್ ಚೆಕ್‌ಪೋಸ್ಟಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಚೆಕ್‌ಪೋಸ್ಟಗಳು ಇನ್ನಷ್ಟು ಬಿಗಿಯಾಗಬೇಕು. ತಪಾಸಣೆ ಕಾರ್ಯವು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚಿಸಿದರು.
ಹೊರಗಡೆಯಿಂದ ಆಗಮಿಸುವವರನ್ನು ಕ್ವಾರಂಟೈನ್‌ದಲ್ಲಿ ಇಡಲು ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ತೆರೆಯಲಾದ ಕ್ವಾರಂಟೈನ್ ಸೆಂಟರ್‌ಗಳ ಸ್ಥಿತಿಗತಿ ತಿಳಿಯಲು ಖಟಕ್‌ಚಿಂಚೋಳಿಯಲ್ಲಿನ ಕ್ವಾರಂಟೈನ್ ಸೆಂಟರ್‌ಗು ಕೂಡ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಇಲ್ಲಿಗೇಕೆ ಬಂದಿದ್ದೀರಿ? ಹೇಗೆ ಬಂದಿದ್ದೀರಿ? ಎಂದು ಜಿಲ್ಲಾಧಿಕಾರಿಗಳು ಕೇಳಿದರು. ಹೊರಗಿನಿಂದ ಜಿಲ್ಲೆಗೆ ಬಂದು ಕ್ವಾರಂಟೈನದಲ್ಲಿ ಉಳಿದವರೊಂದಿಗೆ ಮಾತನಾಡಿದರು.
*ಆಶಾ ಕಾರ್ಯಕರ್ತೆಯರಿಗೆ ಭೇಟಿ:* ಜಿಲ್ಲಾಧಿಕಾರಿಗಳು ತಮ್ಮ ಪ್ರವಾಸದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೂ ಭೇಟಿ ಮಾಡಿದರು. ನಾವು ಜನರ ಬಳಿ ಹೋಗಿ ಅವರಿಗೆ ಸ್ಪಂದನೆ ಮಾಡಬೇಕಾದ ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವಾಕಾರ್ಯವು ಅತ್ಯವಶ್ಯವಿದ್ದು, ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಭಾಲ್ಕಿ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್, ಡಿವೈಎಸ್‌ಪಿ ಡಾ.ಬಿ.ದೇವರಾಜ್, ಗ್ರೇಡ್-೨ ತಹಸೀಲ್ದಾರ ದಿಲ್‌ರಾಜ್ ಹಾಗೂ ಇತರರು ಇದ್ದರು.
Be the first to comment