ಜಿಲ್ಲಾ ಸುದ್ದಿಲಗಳು
ಮುದ್ದೇಬಿಹಾಳ:
ಕೊರೊನಾ ಹೆ್ಮಾರಿ ವಿಜಯಪುರ ಜಿಲ್ಲಾದ್ಯಂತ ಹಬ್ಬಿದ್ದು ಸರಕಾರ ವಿವಿಧ ಯೋಜನೆಗಳನ್ನು ಬಿಟ್ಟು ಮೊದಲು ಬಡವರಿಗೆ ಕುಡಿಯುವ ನೀರು, ಆಹಾರ, ಉದ್ಯೋಗ ಕಲ್ಪಸಿಕೊಡುವತ್ತ ಗಮನ ಹರಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ಕೆಲವಡೆ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಟಾಸ್ಕಫೋರ್ಸನಲ್ಲಿ ಹಣವಿಲ್ಲ. ಬೋರ್ ಕೊರೆಯಲು ಹಣವಿಲ್ಲದಂತಾಗಿದೆ. ಒಂದೊಂದು ಗ್ರಾಮ ಪಂಚಾಯತಿಯಲ್ಲಿ ಲಕ್ಷದಿಂಧಕೋಟಿವರೆಗೂ ಎನ್.ಆರ್.ಇ.ಜಿ ಕೆಲಸ ಮಾಡಲು ಅವಕಾಶವಿದ್ದು ಇದರಿಂದ ಬಡ ಜನರಿಗೆ ಉದ್ಯೋಗ ನೀಡುವಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ತಿಳಿಹೇಳಿದರು.
ನಮಗೇನೂ ಕೊರತೆ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಇಂಥ ಕಷ್ಟಕಾಲದಲ್ಲೂ ಆರ್ಥಿಕ ಪರಿಸ್ಥಿತಿ ಜಾಣತನದಿಂದ ನಿಭಾಯಿಸಬೇಕು. ಹಿಂದಿನ ಸರ್ಕಾರಗಳೆಲ್ಲ ಇಂಥ ಪರಿಸ್ಥಿತಿ ಎದುರಿಸಿವೆ. ಈ ವಿಪತ್ತನ್ನು ನಿಭಾಯಿಸುವುದೇ ಸರ್ಕಾರದ ಜಾಣತನ. ಇವತ್ತು ಯಾರಿಗೂ ಧ್ವನಿ ಇಲ್ಲ, ಮಾತಾಡುವಂತಿಲ್ಲ. ಕಷ್ಟ ಹೇಳಿಕೊಳ್ಳುವಂತಿಲ್ಲ, ಭಾವನೆ ಸರ್ಕಾರಕ್ಕೆ ಮುಟ್ಟಿಸುವ ಮಾರ್ಗ ತಿಳಿದಿಲ್ಲ. ಜನ ವಿಲಿವಿಲಿ ಒದ್ದಾಡುತ್ತಿದ್ದಾರೆ. ಇದು ಕೆಲವರಿಗೆ ಮಜಾ ಮಾಡುವ ಸಂದರ್ಭ ಎನ್ನಿಸಿಕೊಂಡುಬಿಟ್ಟಿದೆ. ಇದರ ದುರ್ಲಾಭ ಹೆಚ್ಚಾಗುತ್ತಿದೆ ಎಂದರು.
ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಸಲಾಂ:
ಕೊರೊನಾ ಹರಡುವುದಕ್ಕೆ ಒಂದು ಕಮ್ಯೂನಿಟಿಯನ್ನು ಟಾರ್ಗೆಟ್ ಮಾಡಬಾರದು. ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸೇರಲು ಅನುಮತಿ ಕೊಟ್ಟವರೇ ಬಿಜೆಪಿ ಸರ್ಕಾರದವರು. ವಿದೇಶಿಗರನ್ನು ದೇಶದೊಳಕ್ಕೆ ಕರೆಸಿಕೊಳ್ಳುವಾಗಲೇ ಸ್ಕ್ಯಾನ್ ಮಾಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಆಶಾ, ಆರೋಗ್ಯ ಕಾರ್ಯಕರ್ತರು, ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕ್ಷಮೆ ಅನ್ನೋದೆ ಇರಬಾರದು. ಈ ರೀತಿ ಮಾಡುವುದು ನಾಗರಿಕತೆಯ ಲಕ್ಷಣ ಅಲ್ಲ. ಈ ಸಿಬ್ಬಂದಿಗೆ ಸೆಲ್ಯೂಟ್ ಮಾಡುತ್ತೇನೆ ಎಂದರು.
ಪ್ರಧಾನಿ ತಮ್ಮ ನಿವಾಸ ಬಿಟ್ಟು ಹೊರಗೇ ಬರ್ತಿಲ್ಲ. ಇದನ್ನ ನಾವೆಲ್ಲ ಮಾದರಿಯಾಗಿಟ್ಟುಕೊಂಡು ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಜೀವ ಉಳಿಸಿಕೊಳ್ಳಬೇಕು. ಭಾರತೀಯರೆಲ್ಲ ಒಂದಾಗಿ ಕೊರೊನಾ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಶೀಘ್ರ ಔಷಧ ದೊರಕುವಂತಾಗಿ ಮನುಷ್ಯ ಜೀವ ಈ ಭೂಮಿ ಮೇಲೆ ಉಳಿಯುವಂತಾಗಬೇಕು ಎಂದು ಪ್ರಾರ್ಥಿಸಬೇಕು ಎಂದರು.
ಖಾಸಗಿ ವೈದ್ಯರಿಗೆ ಸುರಕ್ಷತಾ ಸಾಮಗ್ರಿ ಕೊಟ್ಟಿಲ್ಲ. ಸರ್ಟಿಫೈಡ್ ಇಲ್ಲದ ಕಿಟ್ಸ್ ಕೊಟ್ಟರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಸರ್ಟಿಫೈಡ್ ಕಿಟ್ಸ್ ದೊರಕುತ್ತಿಲ್ಲ. ಪ್ರತಿಯೊಂದು ಆಸ್ಪತ್ರೆಯನ್ನೂ ಪಾರ್ಟಿಶನ್ ಮಾಡಿಕೊಳ್ಳಬೇಕು. ಸುರಕ್ಷತೆಯಿಂದಲೇ ರೋಗಿಗಳನ್ನು ನೋಡಬೇಕು. ಎಂಬಿಬಿಎಸ್‌ನವರು ರೋಗಿಗಳನ್ನು ನೋಡೊಲ್ಲ ಅನ್ನಬಾರದು. ಬಿಎಎಂಎಸ್‌ನವರು ಇದನ್ನು ಕೈಬಿಡಬೇಕು. ಭಾರತದಲ್ಲಿ ೭.೫ ಸಾವಿರಕ್ಕೆ ಒಬ್ಬ ವೈದ್ಯರಿದ್ದಾರೆ ಎಂದರು.
ಕಾರ್ಮಿಕರ ವೆಲ್‌ಫೇರ್ ಫಂಡ್‌ನಿಂದ ೮೦೦೦ ಕೋಟಿಗೂ ಹೆಚ್ಚು ಹಣ ಸರ್ಕಾರದಲ್ಲಿ ಕೊಳೀತಿದೆ. ಇದನ್ಯಾಕೆ ಬಳಸುತ್ತಿಲ್ಲ. ಎಸ್ಸಿಪಿ ಟಿಎಸ್‌ಪಿ ಅಡಿ ಹಣ ಇದೆ. ಇವುಗಳನ್ನು ಆರೋಗ್ಯಕ್ಕಾಗಿ ಬಳಸಿಕೊಳ್ಳಿ ಎಂದರು.
ಸರಕಾರ ಕೈ ಎತ್ತಿದರೆ ನಾನು ಸಹಾಯ ಮಾಡ್ತೇನೆ: ನಾಡಗೌಡ
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕೊರೊನಾದಿಂದ ಬಡವರು ತತ್ತರಿಸಿದ್ದು ಗ್ರಾಮೀಣ ಹಾಗೂ ಬಡ ಜನರಿಗೆ ದಿನಸಿ ಧಾನ್ಯ ನೀಡುವಲ್ಲಿ ಮುಂದಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಾಡಗೌಡ ಅವರು, ಇಂತಹ ಪರಿಸ್ಥಿತಿಯಲ್ಲಿ ಸರಕಾರ ಬಡವರಿಗೆ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದ್ದು ಆದ್ಯ ಕರ್ತವ್ಯವಾಗಿದೆ. ಇದರ ಬಗ್ಗೆ ರಾಜ್ಯ ಸರಕಾರ ಹೆಚ್ಚಿನ ಗಮನಹ ಹರಿಸಬೇಕು. ಒಂದು ವೇಳೆ ಸರಕಾರ ಬಡ ಜನರಿಗೆ ಸಹಾಯ ಮಾಡಲು ಸಾದ್ಯವಿಲ್ಲ ಎಂದು ಹೇಳಿದರೆ ನಾನು ನನ್ನ ಆಸ್ತಿಯನ್ನು ಮಾರಿಯಾದರೂ ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ನಿರ್ದೇಶಕ ವೈ.ಎಚ್.ವಿಜಯಕರ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಯಲ್ಲಪ್ಪ ಚಲವಾದಿ ಮತ್ತಿತರರು ಇದ್ದರು.
Be the first to comment