ಜಿಲ್ಲಾಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಕೊರೊನಾದಿಂದ ಗುಣಮುಖರಾದ ಮೂವರು ನಾಳೆ ಡಿಸ್ಚಾರ್ಜ್

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ:ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರಲ್ಲಿ 3 ಜನರು ಗುಣಮುಖರಾಗಿದ್ದಾರೆ. ಅವರನ್ನು ಜಿಲ್ಲಾಮಟ್ಟದ ಕೋವಿಡ್-19 ಸಲಹಾ ಸಮಿತಿ ನಿರ್ಣಯದ ಅನುಸಾರ ಏ.23ರಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.
ಪಿ-89,ಪಿ-91 ಮತ್ತು ಪಿ-141 ಕೊರೊನಾ ಸೊಂಕಿತ ರೋಗಿಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಟೆಸ್ಟ್‍ಗಳನ್ನು ಮಾಡಲಾಗಿದ್ದು,ಇವರ ಟೆಸ್ಟ್ ವರದಿ ನೆಗೆಟಿವ್ ಬಂದಿರುವ ಕಾರಣ ಮತ್ತು ಈ ಪರೀಕ್ಷೆಯ ವರದಿಯ ಆಧಾರದ ಮೇರೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಶಾಸ್ತ್ರ ವಿಭಾದ ವೈದ್ಯರು ರೋಗಿಗಳಿಗೆ ಫಿಟ್ ಇರುವುದಾಗಿ ಒಪ್ಪಿದೆಯೆಂದು ತಿಳಿಸಿದ್ದರಿಂದ ಡಿಸ್ಟಾರ್ಚ್ ಮಾಡಲು ನಿರ್ಧರಿಸಲಾಗಿದ್ದು, ಇವರನ್ನು ಗುರುವಾರ ಬೆಳಗ್ಗೆ ಕೋವಿಡ್ ಆಸ್ಪತ್ರೆಯಿಂದ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿ,ಜಿಲ್ಲಾಧಿಕಾರಿ,ಎಸ್ಪಿ,ಜಿಪಂ ಸಿಇಒ ಅವರ ಸಮ್ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸುವ ಮೂಲಕ ಬೀಳ್ಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಇವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಪ್ ರಿಪೋರ್ಟಿಂಗ್ ಮಾಡಲಾಗುವುದು ಹಾಗೂ ಜಿಲ್ಲಾ ಕಂಟ್ರೋಲ್ ರೂಂ ಮತ್ತು ನಮ್ಮ ರ್ಯಾಪಿಡ್ ರಿಸ್ಪಾನ್ಸ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು ಎಂದು ತಿಳಿಸಿದರು, ಈ ಆರ್‍ಆರ್‍ಟಿ ತಂಡಗಳು ಗುಣಮುಖರಾಗಿರುವ ಈ ಮೂರು ಜನರ ಮನೆಗಳ ಸುತ್ತಮುತ್ತಲಿನ ಮನೆಯವರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕೆಂದರು.
ಇನ್ನುಳಿದ ಸೊಂಕಿತರ ಚಿಕಿತ್ಸಾ ವಿವರ ಪಡೆದ ಜಿಲ್ಲಾಧಿಕಾರಿ ನಕುಲ್ ರವರು,ಎಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿ ಆದಷ್ಟು ಅವರು ಬೇಗ ಗುಣಮುಖರಾಗಲಿ ಎಂದು ಅವರು ಆಶಿಸಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ಅಗತ್ಯ ಪರಿಕರಗಳು ಅಗತ್ಯವಿದ್ದಲ್ಲಿ ಮಾಹಿತಿ ನೀಡಿ,ಅವುಗಳನ್ನು ಒದಗಿಸಿಕೊಡಲಾಗುವುದು ಎಂದರು.
ಎಸ್ಪಿ ಸಿ.ಕೆ.ಬಾಬಾ ಅವರು ಮಾತನಾಡಿ,ನಮ್ಮಲ್ಲಿ ಕೊರೊನಾ ಸೊಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮೂರು ಜನರು ಗುಣಮುಖರಾಗಿ ಹೊರಬರುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಅವರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನೀಡಲಾದ ಚಿಕಿತ್ಸೆ,ವ್ಯವಸ್ಥೆ ಮತ್ತು ಗುಣಮುಖರಾದ ಪರಿಯನ್ನು ಜಿಲ್ಲೆಯ ಜನರಿಗೆ ಅವರ ಮೂಲಕ ತಿಳಿಸಿಕೊಡಬೇಕು ಎಂದರು.

Be the first to comment

Leave a Reply

Your email address will not be published.


*