ಜೀಲ್ಲಾ ಸುದ್ದಿಗಳು
ಕಲಬುರಗಿ : ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಅತ್ಯವಶ್ಯಕ ಸೇವೆಯಡಿ ಬ್ಯಾಂಕುಗಳು ಗ್ರಾಹಕರಿಗೆ ತುರ್ತು ಸೇವೆಗಳನ್ನು ನೀಡಲು ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಂಕಿಗೆ ಬರುವ ಗ್ರಾಹಕರು ತಪ್ಪದೆ ಮುಖಕ್ಕೆ ಮುಖಗವಸು ಧರಿಸಿಕೊಂಡು ಬರಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಿ.ಹೆಚ್.ಹವಾಲ್ದಾರ ತಿಳಿಸಿದ್ದಾರೆ.
ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರು ಸರದಿಯಲ್ಲಿ ನಿಲ್ಲಲು ಚೌಕ್ ಆಕಾರದ ಪರಿಧಿ ಹಾಕಿದ್ದು, ಇದರಲ್ಲಿ ನಿಲ್ಲುವ ಮೂಲಕ ಗ್ರಾಹಕರು ಸಹಕರಿಸಬೇಕು ಮತ್ತು ಬ್ಯಾಂಕ್‍ನೊಳಗೆ ಒಬ್ಬಬ್ಬರಾಗಿ ಪ್ರವೇಶಿಸಬೇಕು. ಯಾವುದೇ ಕಾರಣಕ್ಕೂ ಜನಸಂದಣಿ ಸೃಷ್ಠಿಸಬಾರದು ಎಂದು ಅವರು ಹೇಳಿದ್ದಾರೆ.
ಇನ್ನೂ ಬ್ಯಾಂಕು ಪ್ರವೇಶಿಸುವ ಮುನ್ನ ಪ್ರವೇಶ ಬಾಗಿಲಿನಲ್ಲಿ ಸ್ಯಾನಿಟೈಜರ್ ಇಡಲಾಗಿದ್ದು, ಕೈ ತೊಳೆದುಕೊಂಡು ಪ್ರವೇಶಿಸಬೇಕು. ಬೇಸಿಗೆ ಸಮಯ ಇದಾಗಿರುವುದರಿಂದ ಬ್ಯಾಂಕ್ ಹೊರಗಡೆ ಗ್ರಾಹಕರಿಗೆ ಕುಳಿತುಕೊಳ್ಳಲು ಟೆಂಟ್ ಮತ್ತು ಖುರ್ಚಿ ಹಾಕಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಸಿ.ಹೆಚ್.ಹವಾಲ್ದಾರ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.ನಮೂನೆ-ಜಿ ಮತ್ತು ನಮೂನೆ-ಎಚ್ ಸಂದಾಯಕ್ಕಾಗಿ ಸರ್ಕಾರವು ಜೂನ್-2020ರ ವರೆಗೆ ದಿನಾಂಕ ವಿಸ್ತರಿಸಿದ್ದರಿಂದ ತೆರಿಗೆ/ ಟಿ.ಡಿ.ಎಸ್. ಪಾವತಿಸುವ ಗ್ರಾಹಕರು ಆತುರ ಪಡಬೇಕಿಲ್ಲ ಎಂದ ಅವರು ಒಟ್ಟಾರೆ ಕೊರೋನಾ ಸೊಂಕು ತಡೆಗಟ್ಟಲು ಬ್ಯಾಂಕಿನ ಆವರಣದೊಳಗೆ ಹೆಚ್ಚಿನ ಜನಸಂದಣಿ ಮಾಡದೆ ಮತ್ತು ಸಾಮಾಜಿಕ ಅಂತರ ಕಾಪಾಡುವ ಮೂಲಕ ಗ್ರಾಹಕರು ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಸಿ.ಹೆಚ್.ಹವಾಲ್ದಾರ ಮನವಿ ಮಾಡಿದ್ದಾರೆ.ಆನ್‍ಲೈನ್ ಸೇವೆ ಉಪಯೋಗಿಸಿ: ಜನಸಂದಣಿ ತಡೆಯಲು ಮನೆಯಿಂದ ಹೊರಗಡೆ ಬಾರದೆ ಬ್ಯಾಂಕಿಂಗ್ ಸೇವೆಗಾಗಿ ಆನ್‍ಲೈನ್ ಸೇವೆಗಳಾದ ಇಂಟರನೆಟ್ ಬ್ಯಾಂಕಿಂಗ್, ಯೋನೊ ಆ್ಯಪ್, ಎ.ಟಿ.ಎಂ. ಕಾರ್ಡ್, ರೂಪೇ ಕಾರ್ಡ್ ಬಳಸಬೇಕು. ಇನ್ನೂ ಹಣ ಸಂದಾಯಕ್ಕೆ ಕ್ಯಾಶ್ ಡಿಪೋಸಿಟ್ ಯಂತ್ರಗಳನ್ನು ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಗ್ರಾಹಕರ ಸೇವಾ ಕೇಂದ್ರ ಬಳಸಿಕೊಳ್ಳಿ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬ್ಯಾಂಕುಗಳ ಗ್ರಾಹಕರ ಸೇವಾ ಕೇಂದ್ರಗಳು ಬ್ಯಾಂಕ್ ಸೇವೆ ನೀಡುತ್ತಿದ್ದು, ಗ್ರಾಮೀಣ ಜನರು ಬ್ಯಾಂಕ್ ಅಲಿಯುವ ಬದಲಾಗಿ ಇದನ್ನು ಬಳಸಿಕೊಳ್ಳಬೇಕು.
Be the first to comment